ನಟಾಶಾ ಸ್ಟಾಂಕೊವಿಕ್‌ಳನ್ನು ನಟಿಯೆಂದು ಕರೆಯುವುದು ಕಷ್ಟ. ಆದರೆ, ಡ್ಯಾನ್ಸರ್ ಎಂದು ಧಾರಾಳವಾಗಿ ಹೇಳಬಹುದು. ಹೆಸರಿನಲ್ಲಿ ಅರ್ಧಭಾಗ ಭಾರತೀಯಳಂತೆಯೂ ಇನ್ನರ್ಧ ಭಾಗ ಐರೋಪ್ಯಳಂತೆಯೂ ಕಾಣಿಸುವ ಈಕೆ ಸರ್ಬಿಯಾ ದೇಶದವಳು.
ಎಲ್ಲಿಯ ಸರ್ಬಿಯಾ ಎಲ್ಲಿಯ ಬಾಲಿವುಡ್ ಎತ್ತಣಿಂದೆತ್ತ ಸಂಬಂಧವಯ್ಯ ಎಂದು ತಲೆಕೆಡಿಸಿಕೊಳ್ಳಬೇಡಿ. ಜಾಗತೀಕರಣದ ಈ ಜಮಾನದಲ್ಲಿ ಜಗತ್ತಿನ ಮೂಲೆಮೂಲೆಯಲ್ಲಿರುವ ನಟಿಯರು, ಮೋಡೆಲ್‌ಗಳು ಬಾಲಿವುಡ್‌ಗೆ ಬಂದು ಹೋಗುತ್ತಿದ್ದಾರೆ. ಈ ರೀತಿ ಬಂದ ನಟಾಶಾ ಮಾತ್ರ ಇಲ್ಲಿಯೇ ಖಾಯಂ ಆಗಿ ತಳವೂರುವ ಪ್ರಯತ್ನದಲ್ಲಿದ್ದಾಳೆ. ಸರ್ಬಿಯಾದಲ್ಲಿ ನಟಿ ಮತ್ತು ಮಾಡೆಲ್ ಎಂದು ಗುರುತಿಸಿಕೊಂಡಿದ್ದರೂ ಈಕೆ ಮೂಲತಃ ಡ್ಯಾನ್ಸರ್. ಸತತ 17 ವರ್ಷ ಬ್ಯಾಲೆ ಕಲಿತು ಅದರಲ್ಲಿ ಅಪಾರ ಪರಿಣತಿಯನ್ನು ಪಡೆದುಕೊಂಡಿದ್ದಾಳೆ.
ಎಲ್ಲ ವಿದೇಶಿ ನಟಿಯರಂತೆ ಬಾಲಿವುಡ್‌ಗೆ ಬಂದು ಮಿಂಚಬೇಕೆಂಬ ನಟಾಶಾಳನ್ನು ಮೊದಲು ಕರೆತಂದದ್ದು ಒಂದು ಜಾಹೀರಾತು ಏಜೆನ್ಸಿ. ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಯ ಹಲವು ಉತ್ಪನ್ನಗಳಿಗೆ ಮಾಡೆಲ್ ಆದ ನಟಾಶಗಳಿಗೆ ಬಾಲಿವುಡ್ ಬಾಗಿಲು ತೆರೆದದ್ದು ಒಂದು ಕಾಂಡೋಮ್ ಜಾಹೀರಾತು. ರಣವೀರ್ ಸಿಂಗ್ ಜತೆಗೆ ಈ ಜಾಹೀರಾತಿನಲ್ಲಿ ನಟಿಸಿದ ಬಳಿಕ ಬಾಲಿವುಡ್ ಸಂಪರ್ಕಕ್ಕೆ ಬಂದ ನಟಾಶಾಗಳಿಗೆ ಇಲ್ಲಿ ತನ್ನಂಥವರಿಗೆ ಭಾರೀ ಅವಕಾಶ ಉಂಟು ಎಂದು ತಿಳಿಯಲು ತಡವಾಗಲಿಲ್ಲ. 2013ರಲ್ಲಿ ಸತ್ಯಾಗ್ರಹ ಚಿತ್ರದಲ್ಲಿ ಐಟಂ ಹಾಡಿಗೆ ಕುಣಿಯುವ ಮೂಲಕ ನಟಾಶಾ ಅಧಿಕೃತವಾಗಿ ಬಾಲಿವುಡ್ ಆರಂಗೇಟ್ರಂ ಮಾಡಿದಳು. ವಯ್ನಾರ, ಥಳಕುಬಳುಕಿನಲ್ಲಿ ಯಾವ ಬಾಲಿವುಡ್ ನಟಿಗೂ ಕಡಿಮೆಯಿಲ್ಲ. ನಟಾಶಾಳನ್ನು ಬೇಗನೇ ಬಾಲಿವುಡ್ ತನ್ನೊಳಗೆ ಸೇರಿಸಿಕೊಂಡಿತು.
ಡಿಸ್ಕಿಯಾಂ, ಹಾಲಿಡೇ, ಆ್ಯಕ್ಷನ್ ಜಾಕ್ಸನ್, 7 ಅವರ್ ಟು ಗೋ, ಡ್ಯಾಡಿ ಚಿತ್ರಗಳಲ್ಲಿ ಕುಣಿದ ಬಳಿಕ ಈಗ ನಟಾಶಾ ಗಮನ ಸೆಳೆಯಲಾರಂಭಿಸಿದ್ದಾಳೆ. ಅದರಲ್ಲೂ ಡ್ಯಾಡಿಯಲ್ಲಿ ಅವಳ ಡ್ಯಾನ್ಸ್ ಡ್ಯಾನ್ಸ್ ಹಾಡಿನ ನೃತ್ಯ ಸೂಪರ್‌ಹಿಟ್ ಆಗಿದ್ದು , ಇದನ್ನು ನೋಡಿಯೇ ಫಕ್ರಿ ರಿಟರ್ನ್ಸ್ ಚಿತ್ರ ತಂಡ ಅವಳನ್ನು ಕರೆದು ಅವಕಾಶ ಕೊಟ್ಟಿದೆ. “ಡ್ಯಾಡಿ ನನಗೆ ಬ್ರೇಕ್ ಕೊಟ್ಟ ಚಿತ್ರ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾಳೆ ನಟಾಶಾ. ನಾಲ್ಕು ವರ್ಷದಲ್ಲಿ ಅವಳು ತಮಿಳು, ಮಲಯಾಳಕ್ಕೂ ಹೋಗಿ ಬಂದಿದ್ದಾಳೆ. ಅಂತೆಯೇ ಬಿಗ್‌ಬಾಸ್-8 ರಿಯಾಲಿಟಿ ಶೋದಲ್ಲೂ ಸ್ಪರ್ಧಿಸಿದ್ದಾಳೆ. ಇಲ್ಲಿರುವಾಗ ಕಲಿತ ಹರಕುಮುರುಕು ಹಿಂದಿ ಈಗ ಅವಳಿಗೆ ಬಹಳ ಉಪಯೋಗಕ್ಕೆ ಬರುತ್ತಿದೆಯೆಂತೆ. ಬಾಲಿವುಡ್‌ನಲ್ಲಿ ಸನ್ನಿ ಲಿಯೋನ್ ಮಾದರಿಯಲ್ಲಿ ತಳವೂರಬೇಕು ಎನ್ನುವುದು ಅವಳ ಮಹತ್ವಾಕಾಂಕ್ಷೆ.