Advertisement

ಸಾಲಗಾರರಿಗೆ ದಸರಾ ಉಡುಗೊರೆ: 2 ಕೋಟಿ ರೂ. ವರೆಗಿನ ಸಾಲದ ಮೇಲಿನ ಚಕ್ರಬಡ್ಡಿ ಮನ್ನಾ

11:12 PM Oct 24, 2020 | sudhir |

ಹೊಸದಿಲ್ಲಿ: ಕೋವಿಡ್ ಕಾಲದಲ್ಲಿ ತೀವ್ರ ಸಂಕಷ್ಟಕ್ಕೀಡಾಗಿದ್ದ ಸಾಲ ಗ್ರಾಹಕರಿಗೆ ಕೇಂದ್ರ ಸರಕಾರವು ದಸರಾ ಉಡುಗೊರೆ ನೀಡಿದೆ. ಸುಪ್ರೀಂ ಕೋರ್ಟ್‌ಗೆ ಈಗಾಗಲೇ ಮಾಹಿತಿ ನೀಡಿರುವಂತೆ, 2 ಕೋಟಿ ರೂ.ವರೆಗಿನ ಸಾಲಗಳ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡುವುದಾಗಿ ಘೋಷಿಸಿದೆ. ಈ ಸಂಬಂಧ ಶನಿವಾರ ಅಧಿಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ.

Advertisement

ಈ ಚಕ್ರಬಡ್ಡಿ ಸಾಲ ಮನ್ನಾ ಸೌಲಭ್ಯವು ನ. 5ರೊಳಗೆ ಎಲ್ಲರಿಗೂ ಸಿಗುವಂತೆ ಮಾಡಲಾಗುತ್ತದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಇದು ಮಾರ್ಚ್‌ನಿಂದ ಆಗಸ್ಟ್‌ ಅಂತ್ಯದ ವರೆಗಿನ ಸಾಲದ ಕಂತುಗಳ ಮುಂದೂಡಿಕೆ ಅವಧಿಗೆ ಮಾತ್ರ ಅನ್ವಯವಾಗಲಿದೆ. ಹಾಗೆಯೇ ಈ ಅವಧಿಯಲ್ಲಿ ಪ್ರತೀ ತಿಂಗಳು ಕಂತನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಕಟ್ಟಿದ್ದ ಗ್ರಾಹಕರಿಗೂ ಇದು ಅನ್ವಯಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಮೊದಲಿಗೆ ಬ್ಯಾಂಕ್‌ಗಳು ಗ್ರಾಹಕರ ಚಕ್ರಬಡ್ಡಿಯನ್ನು ಮನ್ನಾಮಾಡಬೇಕು. ಅನಂತರ ಕೇಂದ್ರ ಸರಕಾರವು ಈ ಹಣವನ್ನು ಆಯಾ ಬ್ಯಾಂಕ್‌ಗಳಿಗೆ ತುಂಬಿಕೊಡಲಿದೆ.

6 ಸಾವಿರ ಕೋ.ರೂ. ಹೊರೆ
ಈ ಸೌಲಭ್ಯದಿಂದಾಗಿ ಕೇಂದ್ರ ಸರಕಾರದ ಬೊಕ್ಕಸಕ್ಕೆ ಸುಮಾರು 5.5ರಿಂದ 6 ಸಾವಿರ ಕೋಟಿ ರೂ.ಗಳ ವರೆಗೆ ಹೊರೆ ಬೀಳಬಹುದು ಎಂದು ಅಂದಾಜಿಸಲಾಗಿದೆ. ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿತ್ತು. ಆದರೆ ಪ್ರಕರಣ ಸುಪ್ರೀಂಕೋರ್ಟ್‌ ನಲ್ಲಿ ಇದ್ದುದರಿಂದ ಕೇಂದ್ರ ಸರಕಾರ ಪ್ರಕಟಿಸಿರಲಿಲ್ಲ. ಈಗ ಸುಪ್ರೀಂಕೋ ರ್ಟ್‌ನ ಅನುಮತಿ ಮೇರೆಗೆ ಶುಕ್ರವಾರ ಅಧಿಕೃತವಾಗಿ ಮಾರ್ಗಸೂಚಿ ಹೊರಡಿಸಿದೆ.

ಜತೆಗೆ ಎಲ್ಲ ರಾಷ್ಟ್ರೀಯ ಬ್ಯಾಂಕುಗಳು, ಅಖೀಲ ಭಾರತ ಹಣಕಾಸು ಸಂಸ್ಥೆಗಳು, ಎಲ್ಲ ಬ್ಯಾಂಕಿಂಗ್‌ ಸಂಸ್ಥೆಗಳು, ನಗರ ಸಹಕಾರ ಬ್ಯಾಂಕ್‌ಗಳು, ಗೃಹ ಸಾಲ ಹಣಕಾಸು ಸಂಸ್ಥೆಗಳಿಗೆ ಈ ಮಾರ್ಗಸೂಚಿಗಳನ್ನು ಕಳುಹಿಸಲಾಗಿದೆ.

Advertisement

ಲೆಕ್ಕಾಚಾರ ಹೇಗೆ?
ಗ್ರಾಹಕರು ಪಡೆದ ಸಾಲದ ಮೇಲಿನ ಸರಳ ಬಡ್ಡಿ ಮತ್ತು ಚಕ್ರಬಡ್ಡಿಯನ್ನು ತಾಳೆ ನೋಡಿ, ಇಲ್ಲಿ ವ್ಯತ್ಯಾಸ ಬರುವ ಹಣವನ್ನು ಗ್ರಾಹಕರ ಖಾತೆಗಳಿಗೆ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳು ವಾಪಸ್‌ ಹಾಕುತ್ತವೆ. ಈ ಆರು ತಿಂಗಳ ಅವಧಿಯಲ್ಲಿ ಸಾಲ ವಾಪಸ್‌ ಮಾಡಿದವರಿಗೂ ಅನ್ವಯವಾಗುವಂತೆ ಮಾಡುವ ಸಲುವಾಗಿ, ಈ ಅವಧಿಯಲ್ಲಿ ಅವರು ಕಟ್ಟಿರುವ ಕಂತಿನ ಹಣವನ್ನು ನಿರ್ಲಕ್ಷಿಸಲಾಗುತ್ತದೆ. ಈ ಮೂಲಕ ಅವರಿಗೂ ಯೋಜನೆಯ ಲಾಭ ಸಿಗುವಂತೆ ಮಾಡಲಾಗುತ್ತದೆ.

ಷರತ್ತುಗಳು ಅನ್ವಯ
ಹಣಕಾಸು ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಯಾರಿಗೆಲ್ಲ ಈ ಸೌಲಭ್ಯ ಅನ್ವಯವಾಗಲಿದೆ ಮತ್ತು ಯಾರಿಗಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಜತೆಗೆ, 2 ಕೋಟಿ ರೂ.ಗಳ ವರೆಗೆ ಸಾಲ ಪಡೆದವರಿಗಷ್ಟೇ ಈ ಸೌಲಭ್ಯ ಸಿಗಲಿದೆ. ದೊಡ್ಡ ಮಟ್ಟದ ಸಾಲ ಪಡೆದವರಿಗೆ ಅನ್ವಯಿಸುವುದಿಲ್ಲ. ಸಣ್ಣ ಮಟ್ಟದ ಸಾಲ ಗ್ರಾಹಕರನ್ನೇ ಗುರಿಯಾಗಿಸಿ ಈ ಸೌಲಭ್ಯ ನೀಡಲಾಗುತ್ತಿದೆ.
1. ಫೆ. 29ಕ್ಕೆ ಅನ್ವಯವಾಗುವಂತೆ ಗ್ರಾಹಕರು ಸಾಲದ ಕಂತಿನಿಂದ ತಪ್ಪಿಸಿಕೊಂಡಿರಬಾರದು.
2. ಹಣಕಾಸು ಸಂಸ್ಥೆಗಳು ಎಂದರೆ ಬ್ಯಾಂಕ್‌ಗಳು, ಪಿಎಸ್‌ಬಿ, ಸಹಕಾರಿ ಬ್ಯಾಂಕ್‌ಗಳು ಮಾತ್ರ.
3. ಮಾ. 1ರಿಂದ ಆ. 30ರ ವರೆಗಿನ ಅವಧಿಗೆ ಮಾತ್ರ ಈ ಸೌಲಭ್ಯ ಅನ್ವಯ.
4. ನ. 5ರೊಳಗೆ ಬ್ಯಾಂಕ್‌ಗಳು ಗ್ರಾಹಕರಿಗೆ ಈ ಯೋಜನೆಯ ಅನುಕೂಲ ಮಾಡಿಕೊಡಬೇಕು.
5. ಡಿ. 15ರೊಳಗೆ ಬ್ಯಾಂಕ್‌ಗಳು ಕೇಂದ್ರ ಸರಕಾರದಿಂದ ತಾವು ಭರಿಸಿರುವ ಹಣ ಪಡೆಯಬಹುದು.

ಫ‌ಲಾನುಭವಿಗಳು ಯಾರು?
1. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಾಲಗಾರರು
2. ಶಿಕ್ಷಣ ಸಾಲ ಪಡೆದವರು
3. ಮನೆ ನಿರ್ಮಾಣಕ್ಕಾಗಿ ಪಡೆದ ಸಾಲ
4. ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಮಾಡಿದ ಸಾಲ
5. ವೃತ್ತಿಪರರು ಮಾಡಿರುವ ವೈಯಕ್ತಿಕ ಸಾಲ
6. ವಾಹನಗಳ ಖರೀದಿಗಾಗಿ ಮಾಡಿರುವ ಸಾಲ
7. ಕ್ರೆಡಿಟ್‌ ಕಾರ್ಡ್‌ ಮೇಲಿನ ಬಾಕಿ
8. ಬಳಕೆ (ಉಪ ಭೋಗ) ಸಾಲ

ಎಸ್‌ಬಿಐ ನೋಡಲ್‌ ಏಜೆನ್ಸಿ
ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾವನ್ನು ಇದಕ್ಕೆ ನೋಡಲ್‌ ಏಜೆನ್ಸಿಯನ್ನಾಗಿ ಮಾಡಲಾಗಿದೆ. ಈ ಬ್ಯಾಂಕ್‌ಗೆ ಕೇಂದ್ರ ಸರಕಾರ ಹಣವನ್ನು ಕಳುಹಿಸಲಿದೆ. ಇಲ್ಲಿಂದ ಇತರ ಬ್ಯಾಂಕ್‌ಗಳು ತಾವು ನೀಡಿದ ಪರಿಹಾರದ ಬಾಬ್ತನ್ನು ಪಡೆಯಬಹುದು. ಮೊದಲಿಗೆ ಬ್ಯಾಂಕ್‌ಗಳು ತಮ್ಮ ಕ್ಲೇಮ್‌ ಅನ್ನು ಎಸ್‌ಬಿಐಗೆ ಸಲ್ಲಿಸಬೇಕು. ಇದು ಪರಿಶೀಲನೆ ಮಾಡಿ, ಬಳಿಕ ಪರಿಹಾರ ನೀಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next