ಬೆಂಗಳೂರು: ಜೆ.ಪಿ. ನಗರ 1ನೇ ಹಂತದಲ್ಲಿರುವ ಪ್ರಿಯ ದರ್ಶಿನಿ ಜ್ಯುವೆಲರ್ಸ್ ಮಳಿಗೆಯ ಗೋಡೆ ಕೊರೆದು 2.50 ಕೋಟಿ ರೂ. ಮೌಲ್ಯದ 5 ಕೆ.ಜಿ. ಚಿನ್ನಾಭರಣ ದೋಚಿದ್ದ 10 ಮಂದಿ ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಜೆ.ಪಿ. ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಾರ್ಖಂಡ್ ಮೂಲದ ಎ.ಎಂ. ಹುಸೈನ್ (23),ಮನರುಲ್ಲಾ ಹಕ್(30), ಸೈಫುದ್ದೀನ್ ಶೇಖ್ (36), ಮನರುಲ್ಲಾ ಶೇಖ್ (65), ಸುಲೇಮಾನ್ ಶೇಖ್ (49),ಸಲೀಂ ಶೇಖ್ (36), ರಮೇಶ್ ಬಿಸ್ತಾ (37), ಜಹೂರ್ ಆಲಂ(28), ಅಜಿಜೂರ್ ರೆಹೆಮಾನ್(27), ಶೈನೂರ್ ಬೀಬಿ(65) ಬಂಧಿತರು. ಆರೋಪಿಗಳಿಂದ 55 ಲಕ್ಷ ರೂ. ಮೌಲ್ಯದ 1 ಕೆ.ಜಿ. 100 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಏನಿದು ಘಟನೆ?: ಆರೋಪಿಗಳು ಕಳೆದ ಮಾರ್ಚ್‌ನಲ್ಲಿ ಜ್ಯುವೆಲರಿಗೆ ಹೊಂದಿಕೊಂಡಿರುವ ಪಕ್ಕದ ಕಟ್ಟಡದ 2ನೇ ಮಹಡಿಯಲ್ಲಿ ಬಾಡಿಗೆಗೆ ಮನೆ ಪಡೆದಿದ್ದರು. ದೆಹಲಿಹಾಗೂ ಉತ್ತರಾಖಂಡ್‌ನ ವಿಳಾಸದ ನಕಲಿ ಆಧಾರ್‌ಕಾರ್ಡ್ ಮೇಲೆ ತಮ್ಮ ಫೋಟೋ ಅಂಟಿಸಿ ಅಸಲಿ ಆಧಾರ್ ಕಾರ್ಡ್ ಎಂಬಂತೆ ಬಿಂಬಿಸಿ ಮನೆ ಮಾಲೀಕರಿಗೆ ಕೊಟ್ಟಿದ್ದರು.
2 ವಾರಗಳ ಕಾಲ ಚಿನ್ನದಂಗಡಿಗೆ ಹೊಂದಿಕೊಂಡಿರುವ ಗೋಡೆಯನ್ನು ಮನೆಯೊಳಗಿನಿಂದ ಕಬ್ಬಿಣದ ಚೂಪಾದ ವಸ್ತು ಹಾಗೂ ಹಾರೆಯಿಂದ ಹಂತ-ಹಂತವಾಗಿಕೊರೆಯಲು ಆರಂಭಿಸಿದ್ದರು. ಏ.17ರಂದು ಇತ್ತ ಗೋಡೆ ಕೊರೆದು ಜ್ಯುವೆಲರ್ನೊಳಗೆ ನುಗ್ಗಿದ ಆರೋಪಿಗಳು, ಮೊದಲಿಗೆ ಅಲ್ಲಿದ್ದ ಸಿಸಿ ಕ್ಯಾಮರಾ ಸಂಪರ್ಕ ಕಡಿತಗೊಳಿಸಿದ್ದರು. ನಂತರ ಲಾಕರ್ ಅನ್ನು ಗ್ಯಾಸ್ ಕಟ್ಟರ್‌ನಿಂದ ಕೊರೆದು 2.50 ಕೋಟಿ ರೂ. ಮೌಲ್ಯದ 5 ಕೆ.ಜಿ. ಚಿನ್ನಾಭರಣವನ್ನು ರಾತ್ರೋ-ರಾತ್ರಿ ದೋಚಿದ್ದರು. ಏ.18ರಂದು ಜ್ಯುವೆಲರ್ಸ್ ಮಾಲೀಕ ರಾಜು ದೇವಾಡಿಗ ಜೆ.ಪಿ. ನಗರ ಠಾಣೆಗೆ ಈ ಕುರಿತು ದೂರು ನೀಡಿದ್ದರು.
ಮೊಬೈಲ್ ಕರೆ ಕೊಟ್ಟ ಸುಳಿವು : ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೆರಳಚ್ಚು ಹಾಗೂ ಶ್ವಾನದಳದ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದರು. ಆರೋಪಿಗಳು ಬಾಡಿಗೆಮನೆಯಲ್ಲಿದ್ದ ವೇಳೆ ಕರೆ ಮಾಡಿದ್ದ ಮೊಬೈಲ್ ನಂಬರ್ ಗಳನ್ನು ಸಿಡಿಆರ್ ಮೂಲಕ ಜಾಲಾಡಿದ್ದು, ನಾಲ್ವರುಆರೋಪಿಗಳ ಸಂಪರ್ಕದಲ್ಲಿದ್ದ ಇತರ ಆರೋಪಿಗಳಸುಳಿವು ಸಿಕ್ಕಿತ್ತು. ತಾಂತ್ರಿಕ ಕಾರ್ಯಾಚರಣೆನಡೆಸುತ್ತಿದ್ದಾಗ ಆರೋಪಿಗಳು ಮೇ 20ರಂದುಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಬಂದಿರುವ ಮಾಹಿತಿಸಿಕ್ಕಿತ್ತು. ಕೂಡಲೇ ಅಲ್ಲಿಗೆ ತೆರಳಿದ ಜೆ.ಪಿ. ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕದ್ದ ಚಿನ್ನಾಭರಣದ ಪೈಕಿ 55 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಬ್ಯಾಗ್‌ನಲ್ಲಿಟ್ಟು ನಗರದಲ್ಲಿ ತಿರುಗಾಡುತ್ತಿದ್ದರು. ಉಳಿದ ಚಿನ್ನಾಭರಣ ಎಲ್ಲಿದೆ ? ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮುಂಬೈ, ದೆಹಲಿಯಲ್ಲೂ ಕೃತ್ಯ : ಆರೋಪಿಗಳು ಮುಂಬೈ, ದೆಹಲಿ, ಜಾರ್ಖಂಡ್ ಸೇರಿದೇಶದ ವಿವಿಧೆಡೆ ಪ್ರಮುಖ ನಗರಗಳಲ್ಲಿ ಇದೇಮಾದರಿಯಲ್ಲಿ ಗೋಡೆ ಕೊರೆದು ಚಿನ್ನಾಭರಣಅಂಗಡಿಗೆ ಕನ್ನ ಹಾಕಿ ಜೈಲು ಸೇರಿದ್ದರು. ಜೈಲಿನಿಂದಹೊರ ಬಂದು ಮತ್ತೆ ಹಳೇ ಚಾಳಿ ಮುಂದುವರಿಸುತ್ತಿದ್ದರು. ಕದ್ದ ಚಿನ್ನಾಭರಣವನ್ನು ಆರೋಪಿ ಸೈನೂರುಬೀಬಿ ಮೂಲಕ ಫೈನ್ಯಾನ್ಸ್‌ಗಳಲ್ಲಿ ಅಡವಿಟ್ಟು ಹಣಪಡೆಯುತ್ತಿದ್ದರು. ದೇಶದ ಪ್ರಮುಖ ನಗರಗಳಿಗೆ ತೆರಳಿ ಬಂಗಾಳಿ ಗೆಸ್ಟ್ ಹೌಸ್‌ನಂತಹ ಸಣ್ಣ-ಪುಟ್ಟ ಲಾಡ್ಜ್ ಗಳಲ್ಲಿ ತಂಗುತ್ತಿದ್ದರು. ಸಣ್ಣ-ಪುಟ್ಟ ಚಿನ್ನಾಭರಣ ಅಂಗಡಿಗಳನ್ನೇ ಟಾರ್ಗೆಟ್ ಮಾಡಿ ಒಂದು ತಿಂಗಳ ಕಾಲ ಅಲ್ಲಿನ ಚಲನವಲನ ಗಮನಿಸುತ್ತಿದ್ದರು. ಚಿನ್ನಾಭರಣ ಅಂಗಡಿಯ ಸಮೀಪದ ಕಟ್ಟಡ ಬಾಡಿಗೆಗೆ ಪಡೆದು ಗೋಡೆ ಕೊರೆದು ಕನ್ನ ಹಾಕುತ್ತಿದ್ದರು.