Advertisement

Belthangady ಅಂತಾರಾಜ್ಯ ಕಳ್ಳನ ಬಂಧನ: 15ಕ್ಕೂ ಅಧಿಕ ಠಾಣಾ ವ್ಯಾಪ್ತಿಯಲ್ಲಿ ಕಳವು

12:37 AM Sep 29, 2023 | Team Udayavani |

ಬೆಳ್ತಂಗಡಿ: ದ.ಕ. ಜಿಲ್ಲೆ ಸಹಿತ ಹೊರ ರಾಜ್ಯಗಳಲ್ಲಿ ಕಳವು ಮಾಡುತ್ತಾ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ ತಮಿಳುನಾಡು ಮೂಲದ ನಟೋರಿಯಸ್‌ ಕಳ್ಳನನ್ನು ಉಜಿರೆ ಮನೆಯೊಂದರಲ್ಲಿ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

Advertisement

ಮೂಲತಃ ತಮಿಳುನಾಡಿನ ಕನ್ಯಾಕುಮಾರಿ ಅಗತೀಶ್ವರಂ ನಿವಾಸಿ ಉಮೇಶ್‌ ಯಾನೆ ಉಮೇಶ್‌ ಬಳೆಗಾರ (47) ಬಂಧಿತ ಆರೋಪಿ. ಕಳೆದ ಆ. 12ರಂದು ಉಜಿರೆ ಅಜಿತ್‌ ನಗರದ ಕಲ್ಲೆ ನಿವಾಸಿ ಫೆಲಿಕ್ಸ್‌ ರೋಡ್ರಿಗಸ್‌ ಅವರ ಮನೆಗೆ ನುಗ್ಗಿದ್ದ ಈತ 6.92 ಲಕ್ಷ ರೂ. ಮೌಲ್ಯದ 173 ಗ್ರಾಂ ಚಿನ್ನಾಭರಣ, 35,000 ರೂ. ನಗದು ಕಳವು ಮಾಡಿದ ವಿಚಾರಕ್ಕೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ದ.ಕ. ಜಿಲ್ಲಾ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಸಿಪಿಐ ನಾಗೇಶ್‌ ಕದ್ರಿ ಹಾಗೂ ಬೆರಳಚ್ಚು ಘಟಕದ ಡಿವೈಎಸ್‌ಪಿ ಗೌರೀಶ್‌ ನೇತೃತ್ವದ ತಂಡ ಆರೋಪಿತ ಉಮೇಶ್‌ನ ಜಾಡು ಹಿಡಿದು ಮೈಸೂರಿನ ಹುನ್ಸೂರಿನಲ್ಲಿ ಬಂಧಿಸಿದ್ದಾರೆ.

ಬಾಲಾಪರಾಧಿಯಾಗಿದ್ದ
ಆತ ಮಾರಾಟ ಮಾಡಿದ್ದ ಚಿನ್ನಾಭರಣ ಸಹಿತ ವಶಕ್ಕೆ ಪಡೆಸಿದ್ದಾರೆ. ಈತ ಕುಳಾÂತ ಕಳ್ಳನಾಗಿದ್ದು, ಬಟ್ಟೆ ವ್ಯಾಪಾರ ಮಾಡುವ ನೆಪದಲ್ಲಿ ಮನೆ-ಮನೆಗಳಿಗೆ ತೆರಳುತ್ತಿದ್ದ. ಈ ಸಂದರ್ಭ ಮನೆಯಲ್ಲಿ ಜನರಿದ್ದಾರೆಯೋ, ಹೊರಗೆ ಹೋಗಿದ್ದಾರೆಯೋ ಎನ್ನುವುದನ್ನು ತಿಳಿದುಕೊಳ್ಳುತ್ತಾ ಕಳವಿಗೆ ಹೊಂಚು ಹಾಕುತ್ತಿದ್ದ. ಆರೋಪಿ ಉಮೇಶ್‌ನಿಗೆ 14 ವರ್ಷವಿರುವಾಗಲೇ ಅಪರಾಧ ಕೃತ್ಯ ಆರಂಭಿಸಿದ್ದ. ಈತ ಮೊಬೈಲ್‌ ಬಳಸದೆ ಬೇರೆಯವರ ಮೊಬೈಲ್‌ ಪಡೆದು ಕರೆ ಮಾಡುವ ಮೂಲಕ ಪೊಲೀಸರಿಗೆ ಸುಳಿವೇ ಸಿಗದಂತೆ ತಪ್ಪಿಸಿಕೊಳ್ಳುತ್ತಿದ್ದ. ಆದರೂ ಸಿಕ್ಕ ಸುಳಿವುಗಳನ್ನಾಧರಿಸಿ ಬೆಳ್ತಂಗಡಿ ಪೊಲೀಸರು ಪ್ರಕರಣ ಬೇಧಿಸಿದ್ದಾರೆ.

ಜೈಲುವಾಸ ಅನುಭವಿಸಿದ್ದ
ಈತ ಅನೇಕ ಪ್ರಕರಣಗಳಲ್ಲಿ ಈಗಾಗಲೇ ಸೆರೆವಾಸ ಅನುಭವಿಸಿ ಹೊರಬಂದಿದ್ದ. ಈತನನ್ನು ಬಂಧಿಸಲು ನಾಲ್ಕು ರಾಜ್ಯದ ವಿವಿಧ ಪೊಲೀಸ್‌ ಠಾಣೆಯ ಪೊಲೀಸರು ಹಲವು ವರ್ಷಗಳಿಂದ ಹುಟುಕಾಟ ನಡೆಸುತ್ತಿದ್ದರು. ಆದರೂ ಈತ ಕೃತ್ಯ ನಡೆಸಿ ರಾಜ್ಯದಿಂದ ಮತ್ತೂಂದು ರಾಜ್ಯಕ್ಕೆ ಪಲಾಯನ ಮಾಡುವುದಲ್ಲಿ ನಿಸ್ಸೀಮನಾಗಿದ್ದ.

ಸ್ಥಳ ಮಹಜರು
ಆರೋಪಿತ ಉಮೇಶ್‌ನನ್ನು ಸೆ. 28ರಂದು ಕಳ್ಳತನ ನಡೆಸಿದ ಉಜಿರೆ ಮನೆಗೆ ಕರೆದೊಯ್ದು ಪೊಲೀಸರು ಮಹಜರು ನಡೆಸಿ ಪೊಲೀಸ್‌ ಕಷ್ಟಡಿಗೆ ಪಡೆದಿದ್ದಾರೆ. ಸೆ. 29ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಬೆಳ್ತಂಗಡಿ ಪೊಲೀಸ್‌ ಠಾಣೆಯ ಪಿಎಸ್‌ಐ ಧನರಾಜ್‌ ಟಿ.ಎಂ., ಚಂದ್ರಶೇಖರ ಎ.ಎಂ., ಎಎಸ್‌ಐ ಕೆ.ಜೆ. ತಿಲಕ್‌, ಶಿವರಾಮ ನಾಯ್ಕ, ಎಚ್‌ಸಿ ಬೆನ್ನಿಚ್ಚನ್‌, ಸುಂದರ ಶೆಟ್ಟಿ, ಪಳನಿವೇಲು, ಪ್ರಮೋದ್‌, ಇಬ್ರಾಹಿಂ, ಸಂಪತ್‌, ಪಿಸಿ ಚರಣ ರಾಜ್‌, ಆನಂದ ಹಾಗೂ ಜಿಲ್ಲಾ ಪೊಲೀಸ್‌ ಗಣಕಯಂತ್ರ ವಿಭಾಗದ ದಿವಾಕರ್‌, ಸಂಪತ್‌ ಅವರಿದ್ದ ತಂಡ ಆರೋಪಿಯ ಪತ್ತೆ ಕಾರ್ಯದಲ್ಲಿದ್ದರು.

15ಕ್ಕೂ ಅಧಿಕ ಠಾಣಾ ವ್ಯಾಪ್ತಿಯಲ್ಲಿ ಕಳವು
ಆರೋಪಿ ಉಮೇಶ್‌ ಪುತ್ತೂರು ನಗರ ಠಾಣೆ, ಸುಳ್ಯ, ಬಂಟ್ವಾಳ, ಮಂಗಳೂರಿನಲ್ಲಿ ಬಂದರು ಠಾಣೆ, ಉರ್ವ ಠಾಣೆ, ಮೂಡುಬಿದಿರೆ ಠಾಣೆ ಮತ್ತು ಕೇರಳ ರಾಜ್ಯದ ಕಾಸರಗೋಡು, ಕುಂಬಳೆ, ಪಾಲಕ್ಕಾಡು, ತೃಶ್ಯೂರ್‌, ತಿರುವನಂತಪುರ ಹಾಗೂ ತಮಿಳುನಾಡು ರಾಜ್ಯದ ಸೇಲಮ್‌, ಧರ್ಮಪುರಿ, ಕನ್ಯಾಕುಮಾರಿ, ದಿಂಡುಗಲ್ಲು ಮತ್ತು ಆಂಧ್ರ ರಾಜ್ಯದ ವೈಜಾಕ್‌ ಠಾಣಾ ವ್ಯಾಪ್ತಿಯಲ್ಲಿ ವಿವಿಧ ರೀತಿಯ ಕಳ್ಳತನ ಮಾಡಿರುವುದು ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next