ಮಂಗಳೂರು: ವಿಶ್ವಕ್ಕೆ ಭಾರತ ನೀಡಿರುವ ಆನೇಕ ಅಪೂರ್ವ ಕೊಡುಗೆಗಳಲ್ಲೊಂದಾಗಿರುವ ಯೋಗದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಲು ಸಾಧ್ಯ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ನಗರದ ಕುದ್ಮಲ್ ರಂಗರಾವ್ ಪುರಭವನ ದಲ್ಲಿ ಮಂಗಳವಾರ ಬೆಳಗ್ಗೆ ಜಿಲ್ಲಾಡಳಿತ, ಆಯುಷ್ ಇಲಾಖೆ, ನೆಹರೂ ಯುವ ಕೇಂದ್ರ ಹಾಗೂ ವಿವಿಧ ಯೋಗ ಸಂಘಟನೆಗಳ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತದ ಮಣ್ಣಿನಲ್ಲಿ ಹುಟ್ಟಿದ ಯೋಗವನ್ನು ಇಂದು ಪ್ರಪಂಚದ ನೂರಾರು ದೇಶಗಳಲ್ಲಿ ಅಭ್ಯಾಸ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ
ಯವರ ಮುತುವರ್ಜಿ ಹಾಗೂ ವಿಶೇಷ ಪ್ರಯತ್ನ ದಿಂದ ಯೋಗ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದೆ ಎಂದರು.
ನಿರಂತರ ಯೋಗಾಭ್ಯಾಸದಿಂದ ಆರೋಗ್ಯ ವೃದ್ಧಿಯಾಗುತ್ತದೆ. ಯೋಗದ ಮಹತ್ವ ಮತ್ತು ಅದರಿಂದಾಗುವ ಪ್ರಯೋಜನಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವ ಕಾರ್ಯ ಇನ್ನಷ್ಟು ನಡೆಯಬೇಕು ಎಂದು ಹೇಳಿದರು.
ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಜಿ.ಪಂ. ಸಿಇಒ ಡಾ| ಕುಮಾರ್, ಎಸ್‌ಪಿ ಹೃಷಿಕೇಶ್ ಭಗವಾನ್ ಸೋನಾವಣೆ, ಎಡಿಸಿ ಕೃಷ್ಣಮೂರ್ತಿ, ಜಿಲ್ಲಾ ಆಯುಷ್ ಅಧಿಕಾರಿ ಡಾ| ಮಹಮ್ಮದ್ ಇಕ್ಬಾಲ್, ನೆಹರೂ ಯುವ ಕೇಂದ್ರದ ರಘುವೀರ್ ಸೂಟರ್‌ಪೇಟೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಪ್ರದೀಪ್ ಡಿ’ಸೋಜಾ ಉಪಸ್ಥಿತರಿದ್ದರು.
ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿ ಯೋಗಾಭ್ಯಾಸ ಮಾಡಿಸಿದರು.
ದ.ಕ. ಜಿಲ್ಲೆಯಾದ್ಯಂತ ಆಚರಣೆ
ದ.ಕ. ಜಿಲ್ಲೆಯಾದ್ಯಂತ ವಿಶ್ವಯೋಗ ದಿನಾಚರಣೆ ನಡೆಯಿತು. ವಿವಿಧ ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಆಯುಷ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು, ಯುವ ಸಬಲೀಕರಣ, ಕ್ರೀಡಾ ಇಲಾಖೆ, ಎನ್‌ಸಿಸಿ, ಎನ್ನೆಸೆಸ್ ಘಟಕ ಹಾಗೂ ಯೋಗ ಸಂಸ್ಥೆಗಳು, ಶಾಲಾ-ಕಾಲೇಜುಗಳು ಎನ್‌ಜಿಒಗಳ ಆಶ್ರಯದಲ್ಲಿ ಸಾಮೂಹಿಕ ಯೋಗ ಹಮ್ಮಿಕೊಳ್ಳಲಾಗಿತ್ತು.
ಯೋಗದಿಂದ ಅರಿವು, ಮಾನವೀಯ ಮೌಲ್ಯ: ಡಿಸಿ ಕೂರ್ಮಾ ರಾವ್
ಉಡುಪಿ: ಯೋಗವು ವಿಶ್ವಕ್ಕೆ ಭಾರತ ನೀಡಿರುವ ಅತ್ಯುತ್ತಮ ಕೊಡುಗೆ. ಯೋಗದ ಮೂಲಕ ಪ್ರತಿಯೊಬ್ಬರೂ ತಮ್ಮನ್ನು ತಾವು ಅರಿತುಕೊಳ್ಳಲು ಹಾಗೂ ಮಾನವೀಯ ಮೌಲ್ಯ ರೂಢಿಸಿಕೊಳ್ಳಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಹೇಳಿದರು.
ಮಂಗಳವಾರ ಶ್ರೀಕೃಷ್ಣ ಮಠ ರಾಜಾಂಗಣದಲ್ಲಿ, ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ಎನ್‌ಸಿಡಿ ವಿಭಾಗ, ಆರೋಗ್ಯ ಇಲಾಖೆ, ಕ್ರೀಡಾ ಇಲಾಖೆ, ಪರ್ಯಾಯ ಕೃಷ್ಣಾಪುರ ಮಠ, ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿದ, ಯೋಗಾಭ್ಯಾಸ ನಿತ್ಯ ಜೀವನದ ಭಾಗವಾಗಬೇಕು ಎಂದು ಸಲಹೆ ನೀಡಿದರು. ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ವಿವಿಧ ಆಸನಗಳನ್ನು ಅಭ್ಯಾಸ ಮಾಡಿದರು.
ಯೋಗ ಶಿಕ್ಷಕ ಬಿರಾದರ್ ಯೋಗ ಪ್ರಾತ್ಯಕ್ಷಿಕೆ ನೀಡಿದರು. ಜಿ.ಪಂ. ಸಿಇಒ ಪ್ರಸನ್ನ ಎಚ್., ಡಿಎಚ್‌ಒ ಡಾ| ನಾಗಭೂಷಣ ಉಡುಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ, ಪತಂಜಲಿ ಯೋಗ ಶಿಕ್ಷಣ ಕೇಂದ್ರದ ಜಿಲ್ಲಾ ಸಂಚಾಲಕ ಚಂದ್ರಶೇಖರ್ ಉಪಸ್ಥಿತರಿದ್ದರು. ಜಿಲ್ಲಾ ಆಯುಷ್ ಅಧಿಕಾರಿ ಡಾ| ಸತೀಶ್ ಆಚಾರ್ಯ ಸ್ವಾಗತಿಸಿದರು.
ಉಡುಪಿ ಜಿಲ್ಲಾದ್ಯಂತ ಆಚರಣೆ
ಉಡುಪಿ ಜಿಲ್ಲಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ಜಿಲ್ಲಾ ಬಿಜೆಪಿಯಿಂದ ಶ್ಯಾಮಿಲಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಶಾಲಾ, ಕಾಲೇಜು, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲೆಯಾದ್ಯಂತ ಯೋಗದಿನಾಚರಣೆ ನಡೆದಿದೆ. ಉಡುಪಿ, ಕಾರ್ಕಳ, ಕುಂದಾಪುರ ಭಾಗದಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಯೋಗಾಭ್ಯಾಸ, ಯೋಗಶಿಬಿರ, ಯೋಗ ಪ್ರಶಿಕ್ಷಣ ನಡೆದಿದೆ. ಗ್ರಾ.ಪಂ.ಗಳ ಸಹಯೋಗದಲ್ಲೂ ಯೋಗದಿನ
ನಡೆಸಲಾಗಿದೆ.