ಕಡಲ ಅಲೆಗಳ ಜತೆಗೆ ಸೆಣಸಾಟದ ರೋಮಾಂಚಕ ಸಾಹಸ ಕ್ರೀಡೆ ಸರ್ಫಿಂಗ್. ಇದರ ಉತ್ಸವ ಈ ಬಾರಿ ದೊಡ್ಡ ಮಟ್ಟದಲ್ಲಿ ಆಯೋಜನೆಗೊಳ್ಳುತ್ತಿದ್ದು, ದೇಶಾದ್ಯಂತ ವ್ಯಾಪಕ ಪ್ರಚಾರ ಪಡೆದಿದೆ. ಈಗಾಗಲೇ ಗೋವಾ, ಪಾಂಡಿಚೇರಿ, ತಮಿಳುನಾಡಿನಿಂದ ಸ್ಪರ್ಧಿಗಳು ಆಗಮಿಸಿ ಅಭ್ಯಾಸ ನಿರತರಾಗಿದ್ದಾರೆ. ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಮುಂತಾದೆಡೆಗಳ ಸರ್ಫಿಂಗ್ ಕ್ಲಬ್‌ಗಳ ಸದಸ್ಯರೂ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಿಗಳಿಗೆ ಪೈಪೋಟಿ ನೀಡಲು ಸಜ್ಜುಗೊಳ್ಳುತಿದ್ದಾರೆ.
Advertisement
ಕೆನರಾ ಸರ್ಫಿಂಗ್ ಆ್ಯಂಡ್ ವಾಟರ್ ನ್ಪೋರ್ಟ್ಸ್ ಪ್ರಮೋಷನ್ ಕೌನ್ಸಿಲ್ ಹಾಗೂ ಮಂತ್ರ ಸರ್ಫ್ ಕ್ಲಬ್ ಆಶ್ರಯದಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಸ್ಪರ್ಧೆ ನಡೆಯುತ್ತಿದೆ.
ಸರಕಾರವು ಈ ಬಾರಿಯ ಬಜೆಟ್‌ನಲ್ಲಿ ಸಸಿಹಿತ್ಲಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸರ್ಫಿಂಗ್ ಉತ್ಸವ ಘೋಷಿಸುವ ಮೂಲಕ ಅಧಿಕೃತಗೊಳಿಸಿದೆ. ಈ ಬಾರಿ ದೇಶ ಮತ್ತು ವಿದೇಶಗಳ ಸುಮಾರು 200ಕ್ಕೂ ಅಧಿಕ ಸರ್ಫಿಂಗ್‌ಪಟುಗಳು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಫ್ರಾನ್ಸ್, ಮಾಲ್ಡೀವ್ಸ್, ಮಡಾಸ್ಕರ್ ಸಹಿತ ವಿವಿಧ ದೇಶಗಳಿಂದ ಅಂತಾರಾಷ್ಟ್ರೀಯ ಪಟುಗಳು ಹೆಸರು ನೋಂದಾಯಿಸಿದ್ದಾರೆ. ಉತ್ಸವ ಆರಂಭಗೊಳ್ಳಲು 3 ದಿನಗಳಿದ್ದೂ ಇನ್ನಷ್ಟು ಸ್ಪರ್ಧಿಗಳು ಆಗಮಿಸುವ ನಿರೀಕ್ಷೆ ಇದೆ ಎನ್ನುತಾರೆ ಸಂಘಟಕರು. ಏಳರಿಂದ ಎಪ್ಪತ್ತೂಂದರವರೆಗೆ
ಉತ್ಸವದಲ್ಲಿ 7ರಿಂದ 71 ವಯೋಮಿತಿವರೆಗಿನ ಸ್ಪರ್ಧಿಗಳಿದ್ದಾರೆ. 14, 16ರ ಒಳಗಿನ ಮಕ್ಕಳು, 17ರಿಂದ 22, 22ರಿಂದ 28 ಹಾಗೂ 28ರಿಂದ ಹೆಚ್ಚಿನ ವಯೋಮಿತಿಯವರಿಗೆ ಬೇರೆ ಬೇರೆ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
Related Articles
Advertisement
ಇಪ್ಪತ್ತು ಸಾವಿರಕ್ಕೂ ಅಧಿಕ ಪ್ರೇಕ್ಷಕರ ನಿರೀಕ್ಷೆ
ಉತ್ಸವಕ್ಕೆ ರಾಷ್ಟ್ರಾದ್ಯಂತ ಭಾರೀ ಪ್ರಚಾರ ನೀಡಿದ್ದು, ಶುಕ್ರವಾರ, ಶನಿವಾರ ಮತ್ತು ರವಿವಾರ ಉತ್ಸವ ನಡೆಯಲಿದೆ. ವಾರಾಂತ್ಯ ದಿನಗಳಾದ ಶನಿವಾರ ಹಾಗೂ ರವಿವಾರ ಸುಮಾರು 20,000 ಪ್ರೇಕ್ಷಕರು ಆಗಮಿಸಬಹುದು. ಐಪಿಎಲ್ ಹೀರೋ ಸಂಜು ಸ್ಯಾಮ್ಸನ್, ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ, “ಸರ್ಫಿಂಗ್ ಸ್ಪೆಷಲಿಸ್ಟ್’ ಜಾಂಟಿ ರೋಡ್ಸ್, ಚಿತ್ರನಟ ಸುನೀಲ್ ಶೆಟ್ಟಿ ಸಹಿತ ಹಲವು ಸ್ಟಾರ್‌ಗಳು ಭಾಗವಹಿಸುವರು. ಪ್ರವೇಶ ಉಚಿತ
ಈ ಉತ್ಸವ ನೋಡಲು ಬರುವವರಿಗೆ ಉಚಿತ. ಎಲ್ಲ ವಿಭಾಗಗಳ ವೀಕ್ಷಣೆಗೂ ಮುಕ್ತ ಅವಕಾಶವಿದೆ. ಜತೆಗೆ ವಾಹನಗಳ ಉಚಿತ ನಿಲುಗಡೆಗೆ ಸಸಿಹಿತ್ಲು ಬಳಿ 9 ಎಕ್ರೆ ಪ್ರದೇಶದಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅಲ್ಲಿಂದ ಉತ್ಸವ ತಾಣಕ್ಕೆ ತೆರಳಲು ಮಿನಿಬಸ್‌ಗಳೂ ಇರಲಿವೆ. ಉತ್ಸವ ತಾಣದಲ್ಲಿ ಎಲ್ಲೂ ಸುಗಮ ಸಂಚಾರಕ್ಕೆ ಅಡಚಣೆ ಯಾಗಬಾರದು ಎಂಬುದು ನಮ್ಮ ಉದ್ದೇಶ ಎನ್ನುತ್ತಾರೆ ಕೆನರಾ ಸರ್ಫಿಂಗ್ ಆ್ಯಂಡ್ ವಾಟರ್ ನ್ಪೋರ್ಟ್ಸ್ ಪ್ರಮೋಷನ್ ಕೌನ್ಸಿಲ್‌ನ ಕೋಶಾಧಿಕಾರಿ ಹಾಗೂ ಉತ್ಸವದ ಕೋರ್‌ಕಮಿಟಿ ಸದಸ್ಯ ಯತೀಶ್ ಬೈಕಂಪಾಡಿ. ಸುರಕ್ಷೆಗೆ ವಿಶೇಷ ನಿಗಾ
ಉತ್ಸವ ಸಂದರ್ಭದಲ್ಲಿ ಸುರಕ್ಷೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಸುಮಾರು 12 ಮಂದಿ ಜೀವರಕ್ಷಕರನ್ನು ನಿಯೋಜಿಸಲಾಗುತ್ತಿದೆ. ನಿಗಾ ಗೋಪುರಗಳನ್ನು ಸ್ಥಾಪಿಸಲಾಗುತ್ತಿದೆ ಹಾಗೂ ಸಿಸಿ ಕೆಮರಾಗಳನ್ನು ಅಳವಡಿಸಲಾಗುತ್ತಿದೆ. ಸಸಿಹಿತ್ಲು ಬೀಚ್‌ಗೆ ದಾರಿ
ಕರ್ನಾಟಕ ಕರಾವಳಿಯಲ್ಲಿ ಸುಂದರ ಬೀಚ್‌ಗಳಲ್ಲೊಂದಾದ ಸಸಿಹಿತ್ಲು ಈಗಾಗಲೇ ಉತ್ತಮ ಸರ್ಫಿಂಗ್‌ತಾಣವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಈ ಸಮುದ್ರ ತೀರ ಮಂಗಳೂರಿನಿಂದ 22 ಕಿ.ಮೀ. ದೂರದಲ್ಲಿಧಿದೆ. ರಾಷ್ಟ್ರೀಯ ಹೆದ್ದಾರಿ 16 ರಲ್ಲಿ ಮುಕ್ಕದಿಂದ ಸಸಿಹಿತ್ಲು ರಸ್ತೆಯಲ್ಲಿ 6 ಕಿ.ಮೀ. ಸಾಗಿದರೆ ಬೀಚ್ ತಲುಪಬಹುದು. ಉಡುಪಿ ಕಡೆಯಿಂದ ಬರುವವರು ಹಳೆಯಂಗಡಿ ಜಂಕ್ಷನ್ ಮೂಲಕ ತಿರುಗಿ ಇಲ್ಲಿಗೆ ಬರಬಹುದು. ಉತ್ಸವದ ವಿಶೇಷತೆ
ಉತ್ಸವ ಬೆಳಗ್ಗೆ 7 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಇದರ ಜತೆಗೆ ಬೀಚ್ ವಾಲಿಬಾಲ್, ಗಾಳಿ ಪಟ ಹಿಡಿದುಕೊಂಡು ಮಾಡುವ ಕೈಟ್ ಸರ್ಫಿಂಗ್, ಆಹಾರೋತ್ಸವ ಆಯೋಜಿಸಲಾಗಿದೆ. ವಾಲ್ ಕ್ಲೈಮಿಂಗ್, ಸ್ಕೇಟ್ ಬೋರ್ಡ್ ಮುಂತಾದವೂ ಇರಲಿವೆ ಪುರುಷರ 10 ಕಿ.ಮೀ. ಸ್ಪೀಡ್‌ರೇಸ್ ಹಾಗೂ ಮಹಿಳೆಯರ 5 ಕಿ.ಮೀ. ಸ್ಟಾಂಡ್ ಆಫ್ ಪ್ಯಾಡ್ಲಿಂಗ್ ವಿಶೇಷ ಆಕರ್ಷಣೆ. ಸಿದ್ಧತೆ ಬಹುತೇಕ ಪೂರ್ಣ
ಸಸಿಹಿತ್ಲಿನಲ್ಲಿ ಅಂತಾರಾಷ್ಟ್ರೀಯ ಸರ್ಪಿಂಗ್ ಉತ್ಸವಕ್ಕೆ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಈಗಾಗಲೇ ಗಣನೀಯ ಸಂಖ್ಯೆಯಲ್ಲಿ ಸ್ಪರ್ಧಿಗಳು ನೋಂದಣಿ ಮಾಡಿದ್ದಾರೆ. ಮೇ 26 ರಂದು ರಾಜ್ಯ ಪ್ರವಾಸೋದ್ಯಮ ಸಚಿವರಿಂದ ಉತ್ಸವ ಉದ್ಘಾಟನೆಗೊಳ್ಳಲಿರುವುದು.
– ಕುಮಾರ್, ಜಿಲ್ಲಾ ಅಪರ ಜಿಲ್ಲಾಧಿಕಾರಿ