Advertisement

ಆನ್‌ಲೈನ್‌ ತರಗತಿ ನಡೆಯುವುದಾದರೆ ದೇಶ ಬಿಡಿ; ವಿದೇಶಿ ವಿದ್ಯಾರ್ಥಿಗಳಿಗೆ ಅಮೆರಿಕ ಆದೇಶ

09:22 AM Jul 08, 2020 | mahesh |

ವಾಷಿಂಗ್ಟನ್‌: ಇತ್ತೀಚೆಗಷ್ಟೇ ಎಚ್‌-1ಬಿ ಸೇರಿದಂತೆ ಹಲವು ಉದ್ಯೋಗ ಸಂಬಂಧಿ ವೀಸಾಗಳನ್ನು ಈ ವರ್ಷಾಂತ್ಯದವರೆಗೆ ತಾತ್ಕಾಲಿಕವಾಗಿ ರದ್ದುಗೊಳಿಸಿ, ವಿದೇಶಿ ಕಾರ್ಮಿಕರಿಗೆ ಶಾಕ್‌ ನೀಡಿದ್ದ ಟ್ರಂಪ್‌ ಸರಕಾರ, ಈಗ ಮತ್ತೂಂದು ಆದೇಶದ ಮೂಲಕ ವಿದೇಶಿ ವಿದ್ಯಾರ್ಥಿಗಳಿಗೆ ಶಾಕ್‌ ನೀಡಿದೆ. ಕೋವಿಡ್ ಹಿನ್ನೆಲೆಯಲ್ಲಿ ಆನ್‌ಲೈನ್‌ ತರಗತಿಗಳ ಮೂಲಕವೇ ಪೂರ್ಣ ಪ್ರಮಾಣ­ದಲ್ಲಿ ಪಾಠ ಮುಂದುವರಿಸಲು ಶಿಕ್ಷಣ ಸಂಸ್ಥೆಗಳು ನಿರ್ಧರಿಸಿದರೆ, ದೇಶದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳು ತಮ್ಮ ದೇಶಗಳಿಗೆ ಹಿಂದಿರುಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಅಮೆರಿಕದಲ್ಲಿರುವ ಭಾರತದ ಸಹಿತ ಲಕ್ಷಾಂತರ ವಿದೇಶಿ ವಿದ್ಯಾರ್ಥಿ­ಗಳಲ್ಲಿ ಸರಕಾರದ ಈ ನಡೆ ಆತಂಕ ಉಂಟು ಮಾಡಿದೆ.

Advertisement

ಕೇಂದ್ರ ವಲಸೆ ವಿಭಾಗದ ಅಧಿಕಾರಿಗಳು ಸೋಮವಾರ ಈ ಸಂಬಂಧ ಮಾರ್ಗಸೂಚಿ ಹೊರಡಿಸಿದ್ದು, ವಲಸೆಯೇತರ ಎಫ್-1ಮತ್ತು ಎಂ-1 ವೀಸಾದಡಿ ಆಗಮಿಸಿರುವ ವಿದ್ಯಾರ್ಥಿಗಳು ಅಮೆರಿಕದಲ್ಲಿ ಇದ್ದುಕೊಂಡು ಸಂಪೂರ್ಣವಾಗಿ ಆನ್‌ಲೈನ್‌ ಮೂಲಕವೇ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ತರಗತಿಗಳಿಗೆ ಹೋಗಲೇಬೇಕಾಗುತ್ತದೆ ಇಲ್ಲವೇ ತಮ್ಮ ದೇಶಗಳಿಗೆ ತೆರಳಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಆನ್‌ಲೈನ್‌ ತರಗತಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ವಿವರ ನೀಡುವಂತೆ ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದೆ. ಕೊರೊನಾ ಹಿನ್ನೆಲೆಯಲ್ಲಿ ಹಾರ್ವರ್ಡ್‌ ಸೇರಿದಂತೆ ದೇಶದ ಹಲವು ಪ್ರಮುಖ ಶಿಕ್ಷಣ ಸಂಸ್ಥೆಗಳು ಆನ್‌ಲೈನ್‌ ಶಿಕ್ಷಣದ ಮೊರೆ ಹೋಗಿದ್ದು, ಸರಕಾರದ ಈ ಆದೇಶದಿಂದಾಗಿ ಈಗ ಅವು ಬಾಗಿಲು ತೆರೆಯಲೇಬೇಕಾಗಿದೆ. ಶಾಲಾ-ಕಾಲೇಜುಗಳು ಶೀಘ್ರವೇ ಮಾಮೂಲಿ ಶಿಕ್ಷಣ ಕ್ರಮಕ್ಕೆ ಮರಳಬೇಕು ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇತ್ತೀಚೆಗಷ್ಟೇ ಸೂಚಿಸಿದ್ದರು. ಇದರ ಬೆನ್ನಿಗೇ ಮಾರ್ಗದರ್ಶಿ ಸೂತ್ರಗಳನ್ನು ವಲಸೆ ವಿಭಾಗ ಪ್ರಕಟಿಸಿದೆ.

ವಿಪಕ್ಷಗಳ ನಾಯಕರು ಸರಕಾರದ ಈ ನಿರ್ಧಾರವನ್ನು ಟೀಕಿಸಿದ್ದಾರೆ. ಸರಕಾರದ ಈ ಮಾರ್ಗದರ್ಶಿ ಸೂತ್ರಗಳು ಗಾಬರಿ ಉಂಟು ಮಾಡುವಂತಿವೆ ಎಂದು ಅಮೆರಿಕದ ಶಿಕ್ಷಣ ಮಂಡಳಿ ಪ್ರತಿಕ್ರಿಯಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next