ವಿಟ್ಲ : ಆಯುರ್ವೇದ ಸಂಪೂರ್ಣ ನಾಶವಾಯಿತು ಎಂಬ ಹಂತಕ್ಕೆ ತಲುಪಿತ್ತು. ಆಯುರ್ವೇದ ಔಷಧಗಳ ಬಗ್ಗೆ ಹಿರಿಯರಿಂದ ಕಿರಿಯರಿಗೆ ಮಾಹಿತಿ ಹಸ್ತಾಂತರವಾಗದೇ ಹೋಗಿರುವುದೂ ಹೌದು. ಆದರೆ ಕ್ರಮೇಣ ಆಯುರ್ವೇದ ಪದ್ಧತಿಗೆ ಮತ್ತೆ ಮಹತ್ವ ಬಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಸಿಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಶನಿವಾರ ಅಳಿಕೆ ಗ್ರಾಮದ ಜೆಡ್ಡು ಪದ್ಮಗಿರಿ ಶ್ರೀ ಆದಿ ಧನ್ವಂತರಿ ಕ್ಷೇತ್ರದಲ್ಲಿ ನಿರ್ಮಾಣಗೊಂಡಿರುವ ಶಿಲಾಮಯ ದೇವಸ್ಥಾನದಲ್ಲಿ ಶ್ರೀ ಧನ್ವಂತರಿ ದೇವರ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶ ಸಂದರ್ಭ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಶ್ರದ್ಧಾ ಕೇಂದ್ರ ಸಂಸ್ಕೃತಿಯ ಬೇರು
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಬದುಕು ರೂಪಿಸಲು ದೇಗುಲವೇ ಪಠ್ಯವಾಗಿದೆ. ಶ್ರದ್ಧಾ ಕೇಂದ್ರಗಳು ನಮ್ಮನ್ನು ಕಾಯುತ್ತವೆ. ಅವುಗಳೇ ಸಂಸ್ಕೃತಿಯ ಬೇರು. ಆರೋಗ್ಯಪೂರ್ಣ ಸಮಾಜಕ್ಕೆ ದುಶ್ಚಟಮುಕ್ತ ಸಮಾಜವನ್ನು ಕಟ್ಟೋಣ ಎಂದು ತಿಳಿಸಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ದೇಗುಲಗಳ ಮೂಲಕ ಸಂಘಟನೆ ಮತ್ತು ಆ ಮೂಲಕ ದೇಶ ಬೆಳವಣಿಗೆಯನ್ನು ಸಾಧಿಸುತ್ತದೆ. ಇನ್ನೊಬ್ಬರ ಪ್ರಗತಿಯನ್ನು ಗಮನಿಸಿ, ಸಂತಸಪಡಬೇಕು. ಮತ್ಸರ ಪಡದೇ ಸಹಕಾರ ನೀಡಬೇಕು. ದೇಗುಲ ನಿರ್ಮಿಸಿದ ಬಳಿಕ ನಿತ್ಯವೂ ಪೂಜೆ ನಡೆಯುತ್ತದೆ. ಅದಕ್ಕೆ ತಕ್ಕುದಾಗಿ ಭಕ್ತರು ಆಗಮಿಸಿ, ಸಾನ್ನಿಧ್ಯ ವೃದ್ಧಿಸುವಂತಾಗಬೇಕು ಎಂದರು.
ಶ್ರೀ ಆದಿ ಧನ್ವಂತರಿ ಕ್ಷೇತ್ರದ ಧರ್ಮದರ್ಶಿ ಜೆಡ್ಡು ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೃಷ್ಣ ಭಟ್ ಕೊಂಕೋಡಿ, ಆಲಂಗಾರು ಮೂಕಾಂಬಿಕಾ ದೇಗುಲ ಆಡಳಿತ ಮೊಕ್ತೇಸರರಾದ ವರ್ಮುಡಿ ಪದ್ಮಿನಿ ರಾಮ ಭಟ್ ಆಲಂಗಾರು, ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ, ಪ್ರ. ಸಂಚಾಲಕ ಕೋಡಿಜಾಲು ಗೋವಿಂದ ಭಟ್, ಉಪಾಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಸರಸ್ವತಿ ಎನ್. ಭಟ್, ಮಾಹಿತಿ/ಕಾರ್ಯಾಲಯ ಸಮಿತಿ ಅಧ್ಯಕ್ಷೆ ಡಾ| ಮನೋರಮಾ ಜಿ. ಭಟ್ ಭಾಗವಹಿಸಿದ್ದರು. ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ| ಜೆಡ್ಡು ಗಣಪತಿ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಚಾರ ಸಮಿತಿ ಸಂಚಾಲಕ ಸದಾಶಿವ ಅಳಿಕೆ ನಿರ್ವಹಿಸಿ ದರು. ಬ್ರಹ್ಮಕಲಶ ಸಮಿತಿ ಅಧ್ಯಕ್ಷ ತಾರಾನಾಥ ಕೊಟ್ಟಾರಿ ವಂದಿಸಿದರು.