Advertisement

ಪ್ರೊ ಕಬಡ್ಡಿಗೆ ಅಂತಾರಾಷ್ಟ್ರೀಯ ಪ್ರೀಮಿಯರ್‌ ಲೀಗ್‌ ಸಡ್ಡು

12:30 AM Feb 10, 2019 | |

ಬೆಂಗಳೂರು: ಪ್ರೊ ಕಬಡ್ಡಿ ಭರ್ಜರಿ ಯಶಸ್ಸು ಕಂಡಿರುವ ಬೆನ್ನಲ್ಲೆ ಇದೇ ಮಾದರಿಯಲ್ಲಿ “ಇಂಡೋ ಇಂಟರ್‌ನ್ಯಾಶನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌’ ಆರಂಭಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

Advertisement

ಪ್ರೊ ಕಬಡ್ಡಿ ಆರಂಭಿಸಿದ್ದ ಎಕೆಎಫ್ಐಗೆ (ಅಖೀಲ ಭಾರತೀಯ ಕಬಡ್ಡಿ ಒಕ್ಕೂಟ) ಸಡ್ಡು ಹೊಡೆದು ಕೂಟವನ್ನು ಆಯೋಜಿಸಲು ಎನ್‌ಕೆಎಫ್ಐ (ನ್ಯೂ ಕಬಡ್ಡಿ ಫೆಡರೇಷನ್‌ ಆಫ್ ಇಂಡಿಯಾ) ಎಲ್ಲ ತಯಾರಿ ಮಾಡಿಕೊಂಡಿದೆ. ಎಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಕೂಟ ಆರಂಭಗೊಳ್ಳಲಿದೆ. ಅಂತಿಮ ಹಂತದ ತಯಾರಿಯಲ್ಲಿದ್ದೇವೆ. ಅಧಿಕೃತ ದಿನಾಂಕವನ್ನು ಪ್ರಕಟಸಲಾಗುವುದು ಎಂದು ಎನ್‌ಕೆಎಫ್ಐ ಪ್ರಧಾನ ಕಾರ್ಯದರ್ಶಿ ಎಂ.ವಿ.ಪ್ರಸಾದ್‌ ಬಾಬು ತಿಳಿಸಿದ್ದಾರೆ. 

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಸಾದ್‌ ಬಾಬು, “ಪ್ರೊ ಕಬಡ್ಡಿ ಆಯೋಜಕರು ಹಾಗೂ ಮಾಲಕರಿಗೆ ಕಬಡ್ಡಿಯನ್ನು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸುವ ಕಾಳಜಿಯಿಲ್ಲ. ಕಬಡ್ಡಿಗೆ ಒಲಿಂಪಿಕ್ಸ್‌ ಮಾನ್ಯತೆ ಬರುವಂತೆ ಆಗಬೇಕು. ಆಟಗಾರರಿಗೆ ಭದ್ರತೆ ಸಿಗಬೇಕು. ಭವಿಷ್ಯದಲ್ಲಿ ಕಬಡ್ಡಿ ಕ್ಷೇತ್ರ ಭಾರೀ ಬೆಳವಣಿಗೆ ಆಗಬೇಕು ಎನ್ನುವ ಕಾರಣದಿಂದ  ಎನ್‌ಕೆಎಫ್ಐ,  ಇಂಡೋ ಇಂಟರ್‌ನ್ಯಾಶನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ ಅನ್ನು ಆಯೋಜಿಸಲು ನಿರ್ಧರಿಸಿದೆ’ ಎಂದು ತಿಳಿಸಿದರು.

ಹೇಗಿರಲಿದೆ ಪ್ರೀಮಿಯರ್‌ ಲೀಗ್‌?
ಲೀಗ್‌ನಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ. ಇವುಗಳೆಂದರೆ ಬೆಂಗಳೂರು ರೈನೋಸ್‌, ತೆಲುಗು ಬುಲ್ಸ್‌, ಚೆನ್ನೈ ಚಾಲೆಂಜರ್ಸ್‌, ದಿಲ್ಲೇರ್‌ ದಿಲ್ಲಿ, ಹರ್ಯಾಣ ಹೀರೋಸ್‌, ಮಹಾರಾಷ್ಟ್ರ ಮರಾಠಾಸ್‌, ಬೆಂಗಾಲ್‌ ವಾರಿಯರ್ಸ್‌, ರಾಜಸ್ಥಾನ್‌ ರಜಪೂತ್‌. ಅಂತಿಮ ಸುತ್ತಿನಲ್ಲಿ 150 ಆಟಗಾರರು ಇರಲಿದ್ದಾರೆ. ಪ್ರತಿ ತಂಡದಲ್ಲಿ ಮೂವರು ವಿದೇಶಿ ಆಟಗಾರಿಗೆ ಅವಕಾಶವಿದೆ. ಪ್ರತಿ ತಂಡದಲ್ಲೂ 19 ಮಂದಿ ಹೆಚ್ಚುವರಿ ಆಟಗಾರರು ಇರಲಿದ್ದಾರೆ. ಲೀಗ್‌ನಲ್ಲಿ ಒಟ್ಟು 62 ಪಂದ್ಯಗಳು ನಡೆಯಲಿವೆ. ಬೆಂಗಳೂರು, ಹೊಸದಿಲ್ಲಿ, ರಾಂಚಿ, ಹಾಗೂ ಚೆನ್ನೈಯಲ್ಲಿ ಪಂದ್ಯಗಳು ನಡೆಯಲಿವೆ. ಪಂಜಾಬ್‌, ನಾಗ್ಪುರವನ್ನು ಹೆಚ್ಚುವರಿ ತಾಣಗಳಾಗಿ ಗುರುತಿಸಲಾಗಿದೆ. ರಾಜ್ಯವನ್ನು ಪ್ರತಿನಿಧಿಸಲಿರುವ ಬೆಂಗಳೂರು ತಂಡದಲ್ಲಿ ಕನಿಷ್ಠ 6 ಮಂದಿ ಕನ್ನಡಿಗರು ಇರಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಮಹಿಳೆಯರಿಗೂ ಅವಕಾಶ
ಪ್ರೊ ಕಬಡ್ಡಿ ಆಯೋಜಕರು ಮಹಿಳಾ ಲೀಗ್‌ ಅನ್ನು ಆರಂಭಿಸಿ ಬಳಿಕ ಜನಪ್ರಿಯತೆ ಇಲ್ಲ ಎನ್ನುವ ಕಾರಣಕ್ಕೆ ಕೈಬಿಟ್ಟಿತ್ತು. ಇದೀಗ ಎನ್‌ಕೆಎಫ್ಐ ಮಹಿಳಾ ಲೀಗ್‌ ಆಯೋಜಿಸಲು ನಿರ್ಧರಿಸಿ ಎಕೆಎಫ್ಐಗೆ ತಿರುಗೇಟು ನೀಡುತ್ತಿದೆ. ಪುರುಷರ ಲೀಗ್‌ನ ಪ್ರತಿ ಪಂದ್ಯದ ಆರಂಭಕ್ಕೂ ಮುನ್ನ ಮತ್ತು ಕೊನೆಯಲ್ಲಿ ಮಹಿಳೆಯರ ಪಂದ್ಯಗಳು ನಡೆಯಲಿವೆೆ.

Advertisement

ಕಬಡ್ಡಿ ವಿಶ್ವಕಪ್‌ಗ್ೂ ಆಯ್ಕೆ
ಪ್ರೀಮಿಯರ್‌ ಲೀಗ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳನ್ನು ಮಲೇಶ್ಯದಲ್ಲಿ ನಡೆಯಲಿರುವ ಕಬಡ್ಡಿ ವಿಶ್ವಕಪ್‌ಗೆ ಆಯ್ಕೆ ಮಾಡಲಾಗುತ್ತದೆ. ಕೂಟದಿಂದ ಬರುವ ಆದಾಯದಲ್ಲಿ ಆಟಗಾರರೂ ಕೂಡ ಪಾಲುದಾರರಾಗಿರಲಿದ್ದಾರೆ. ಬಂದ ಆದಾಯದಲ್ಲಿ ಶೇ. 20ರಷ್ಟನ್ನು ಆಟಗಾರರಿಗೆ ಸಮಾನವಾಗಿ ಹಂಚಲು ಫೆಡರೇಷನ್‌ ನಿರ್ಧರಿಸಿದೆ. ಉಳಿದ ಶೇ.10ರಷ್ಟು ಕಬಡ್ಡಿ ಆಟಗಾರರ ಕ್ಷೇಮಾಭಿವೃದ್ಧಿ ಒಕ್ಕೂಟಕ್ಕೆ ಹಾಗೂ ಶೇ.20 ರಷ್ಟು ಆದಾಯವನ್ನು ವಿವಿಧ ರಾಜ್ಯಗಳಲ್ಲಿ ಕಬಡ್ಡಿ ಅಭಿವೃದ್ಧಿಗಾಗಿ ಬಳಸಿಕೊಳ್ಳಲಾಗುವುದು ಎಂದು ಎನ್‌ಕೆಎಫ್ಐ ತಿಳಿಸಿದೆ.

ಫೆ.13-15 ಅಂತಿಮ ಆಯ್ಕೆ
ದೇಶ, ವಿದೇಶಗಳಿಂದ ಆಟಗಾರರಿಂದ ನೋಂದಣಿಗೆ ಆಹ್ವಾನಿಸಲಾಗಿತ್ತು. ಒಟ್ಟು 4,600ಕ್ಕೂ ಅಧಿಕ ಮಂದಿ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಈ ಪೈಕಿ ಒಟ್ಟು 400 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಅಂತಿಮ ಸುತ್ತಿನಲ್ಲಿ 150 ಆಟಗಾರರು ಹಾಗೂ 50 ಮಂದಿ ಹೆಚ್ಚುವರಿ, ಒಟ್ಟು 200 ಮಂದಿಯ ಆಯ್ಕೆ ನಡೆಯಲಿದೆ. ಮೂರು ದಿನಗಳಲ್ಲಿ ಆಯ್ಕೆ ಮುಗಿಸಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next