ಕೊಲಂಬೊ: ವಿದೇಶಗಳಿಂದ 6 ಬಿಲಿಯನ್ ಡಾಲರ್‌ಗಳಷ್ಟು ಸಾಲಪಡೆದು ಹಿಂತಿರುಗಿಸಲಾಗದ ಸ್ಥಿತಿ ತಲುಪಿರುವ ಶ್ರೀಲಂಕಾಕ್ಕೆ ಈಗಿರುವ ಒಂದೇ ಒಂದು ಭರವಸೆಯೆಂದರೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ನೆರವು.
ಇದರಿಂದ ಆರ್ಥಿಕ ನೆರವು ಪಡೆದು ಹಂತಹಂತವಾಗಿ ದೇಶದ ಪರಿಸ್ಥಿತಿಯನ್ನು ಹಳಿಗೆ ತರುವ ಯೋಚನೆಯನ್ನು ಅದು ಹೊಂದಿದೆ.ಸದ್ಯ ಸಾಲ ಹಿಂತಿರುಗಿಸುವ ವ್ಯವಸ್ಥೆಯನ್ನು ನಿಲ್ಲಿಸಲಾಗುವುದು.
ಐಎಂಎಫ್ ನೆರವಿನಿಂದ ಕ್ರಮಬದ್ಧವಾಗಿ, ಪ್ರಜ್ಞಾಪೂರ್ವಕವಾಗಿ ಆರ್ಥಿಕ ವ್ಯವಸ್ಥೆಯನ್ನು ಪುನರ್ ರೂಪಿಸಲಾಗುವುದು ಎಂದು ಅಲ್ಲಿನ ವಿತ್ತ ಸಚಿವ ಹೇಳಿದ್ದಾರೆ.
ಈ ನೀತಿ ಅಂತಾರಾಷ್ಟ್ರೀಯ ಬಾಂಡ್‌ಗಳು, ಎಲ್ಲ ದ್ವಿಪಕ್ಷೀಯ ಸಾಲಗಳಿಗೂ ಅನ್ವಯಿಸುತ್ತದೆ. ಆದರೆ ಶ್ರೀಲಂಕಾದ ಕೇಂದ್ರ ಬ್ಯಾಂಕ್ ಮತ್ತು ವಿದೇಶಿ ಕೇಂದ್ರ ಬ್ಯಾಂಕ್‌ಗಳ ನಡುವೆ ಆದ ಪರಸ್ಪರ ವಿನಿಮಯಗಳಿಗೆ ಅನ್ವಯಿಸುವುದಿಲ್ಲ ಎಂದಿದೆ. ಸದ್ಯ ಶ್ರೀಲಂಕಾದಲ್ಲಿ ವಿದೇಶಿ ವಿನಿಮಯ ಸಂಗ್ರಹವೇ ಇಲ್ಲ. ಆದ್ದರಿಂದ ಆಮದು ಮಾಡಿಕೊಳ್ಳಲು ಆಗುತ್ತಿಲ್ಲ. ಇದರಿಂದ ಇಡೀ ದೇಶದಲ್ಲಿ ವಿದ್ಯುತ್, ಪೆಟ್ರೋಲ್, ಆಹಾರ ಪದಾರ್ಥಗಳ ಕೊರತೆ ಎದುರಾಗಿದೆ. ಜನ ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.
ಇದೇ ವೇಳೆ, ಮಂಗಳವಾರ ಭಾರತವು ರವಾನಿಸಿರುವ 11 ಸಾವಿರ ಮೆಟ್ರಿಕ್ ಟನ್ ಅಕ್ಕಿ ಶ್ರೀಲಂಕಾವನ್ನು ತಲುಪಿದೆ. ಏ.13 ಮತ್ತು 14ರಂದು ಲಂಕಾದಲ್ಲಿ ಹೊಸ ವರ್ಷ ಆಚರಿಸಲಾಗುತ್ತದೆ. ಹಬ್ಬದ ಸಮಯದಲ್ಲೇ ಭಾರತ ಕಳುಹಿಸಿರುವ ಅಕ್ಕಿ ಅನೇಕರ ಹಸಿವು ತಣಿಸಲಿದೆ.