ಚಿಕ್ಕೋಡಿ: ಗಡಿ ಭಾಗದ ನಿಪ್ಪಾಣಿ ನಗರದಲ್ಲಿ ಜೊಲ್ಲೆ ಗ್ರೂಪ್ ವತಿಯಿಂದ ಆಯೋಜನೆಗೊಂಡಿರುವ ಅಂತಾರಾಷ್ಟ್ರೀಯ ಪತಂಗ ಉತ್ಸವ ಎರಡನೆ ದಿನವು ಬಗೆ ಬಗೆಯ ವಿನ್ಯಾಸಗಳ ಗಾಳಿಪಟಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು. ಅದರಲ್ಲಿ ಜೈಶ್ರೀರಾಮ ಎನ್ನುವ ಪತಂಗ ಕಾಶದಲ್ಲಿ ಹಾರಾಡುತ್ತಿದ್ದಂತೆ ನೆರೆದ ಜನಸ್ತೋಮ ಜೈಶ್ರೀರಾಮ ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿರುವ ಅಪರೂಪದ ಘಳಿಗೆ ನಡೆಯಿತು.
ನಿಪ್ಪಾಣಿಯ ಶ್ರೀಪೇವಾಡಿ ರಸ್ತೆಯಲ್ಲಿರುವ ಶಿವಶಂಕರ್ ಜೊಲ್ಲೆ ಪಬ್ಲಿಕ್ ಶಾಲೆಯ ಮೈದಾನದಲ್ಲಿ ಮಂಗಳವಾರ ದಿಂದ ಆರಂಭಗೊಂಡಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಗಡಿ ಭಾಗದ ಸಾವಿರಾರು ಜನರು ಆಗಮಿಸಿ ಆಕಾಶದಲ್ಲಿ ಹಾರಾಡುತ್ತಿರುವ ಬಣ್ಣ ಬಣ್ಣದ ಚಿತ್ತಾರದ ಗಾಳಿಪಟಗಳನ್ನು ವೀಕ್ಷಿಸಿದರು.
ಎರಡನೆ ದಿನದ ಉತ್ಸವದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಅಭಯ ಪಾಟೀಲ ಆಗಮಿಸಿ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿದರು.
ಬಳಿಕ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಭಾರತೀಯ ಸಂಸ್ಕೃತಿ ಮತ್ತು ಜಗತ್ತಿಗೆ ಅಮೂಲ್ಯ ಕೊಡುಗೆಯಾಗಿದೆ. ಈ ಹಬ್ಬವನ್ನು ಗುಜರಾತಿನಲ್ಲಿ ಗಾಳಿಪಟ ಹಬ್ಬ ಎಂದು ಆಚರಿಸಲಾಗುತ್ತದೆ. ಇಂತಹ ಉತ್ಸವ ನಿಪ್ಪಾಣಿ ಭಾಗದ ಜನರಿಗೆ ಮನರಂಜನೆ ನೀಡುವ ನಿಟ್ಟಿನಲ್ಲಿ ವಿದೇಶಿಯಿಂದ ಗಾಳಿಪಟ ಪರಿಣಿತರು ಬಣ್ಣ ಬಣ್ಣದ ಗಾಳಿಪಟ ಹಾರಿಸಿ ಗಡಿ ಭಾಗದ ಜನರಿಗೆ ಮನರಂಜನೆ ನೀಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಜ್ಯೋತಿಪ್ರಸಾದ್ ಜೊಲ್ಲೆ, ಪ್ರಿಯಾ ಜೊಲ್ಲೆ, ಬಿಜೆಪಿ ಜಿಲ್ಲಾಧ್ಯಕ್ಣ ಸತೀಶ ಅಪ್ಪಾಜಿಗೋಳ ಮುಂತಾದವರು ಇದ್ದರು.
ಪತಂಗ ಹಾರಿಸಿ ಸಂತಸ ಪಟ್ಟ ಗಣ್ಯರು: ಶಾಸಕ ಅಭಯ ಪಾಟೀಲ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಅಪ್ಪಾಜಿಗೋಳ ಅವರು ನಿಪ್ಪಾಣಿಯ ಜೈ ಶ್ರೀರಾಮ ಎನ್ನುವ ಗಾಳಿಪಟುವನ್ನು ನೀಲಿ ಆಕಾಶದಲ್ಲಿ ಹಾರಾಡಿಸಿ ಸಂತಸ ಪಟ್ಟರು.
ವಿವಿಧ ಆಕೃತಿ ಪತಂಗಳಿಗೆ ವಿದ್ಯಾರ್ಥಿಗಳು ಹರ್ಷ: ಭವ್ಯವಾದ ಮೈದಾನದಲ್ಲಿ ಬಣ್ಣದ ಲೋಕವನ್ನೇ ಸೃಷ್ಠಿ ಮಾಡಿರುವ ಪತಂಗಳ ಚಿತ್ತಾರಕ್ಕೆ ಶಾಲಾ ವಿದ್ಯಾರ್ಥಿಗಳು ಹರ್ಷದ್ಘಾರ ಮೊಳಗಿಸಿದರು. ರೈಲು ಪಟ, ಬಲೂನ್ ಪಟ, ಆಕ್ಟೋಪಸ್ ಆಕೃತಿ ಪಟ, ದೇಶಾಭಿಮಾನ ಮೂಡಿಸುತ್ತಿರುವ ಇಂಡಿಯಾ ಪಟ, ಜೈಶ್ರೀರಾಮ ಗಾಳಿ ಪಟ ಎಲ್ಲರನ್ನು ಆಕರ್ಷಿಸಿದವು.