Advertisement
ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರ ದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೊಸ ದೇನಲ್ಲ. ಶತಮಾನಗಳ ಹಿಂದಿನಿಂದಲೇ ಭಾರತ ಸಹಿತ ಹಲವಾರು ದೇಶಗಳ ಮಹಿಳೆಯರು ವಿಜ್ಞಾನ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಿದ್ದಾರೆ. ಮೆರಿಟ್-ಪಾrಹ್ (ಕ್ರಿ.ಪೂ. 2700), ಎಂಬ ಪ್ರಾಚೀನ ಈಜಿಪ್ಟಿನ ವೈದ್ಯೆ ಪ್ರಪ್ರಥಮ ಮಹಿಳಾ ವಿಜ್ಞಾನಿ ಎಂದು ಶಾಸನಗಳಲ್ಲಿ ಉಲ್ಲೇಖೀಸಲ್ಪಟ್ಟಿವೆ.
Related Articles
Advertisement
ಭಾರತೀಯ ಸಾಧಕಮಣಿಗಳುಆನಂದಿಬಾಯಿ ಗೋಪಾಲರಾವ್ ಜೋಶಿ ಭಾರತದ ಮೊದಲ ಮಹಿಳಾ ವೈದ್ಯರು. ಜಾನಕಿ ಅಮ್ಮಾಳ್ ಸಸ್ಯಶಾಸ್ತ್ರದಲ್ಲಿ ಸಾಧನೆಗೈದ ಮೊದಲ ಭಾರತೀಯ ಮಹಿಳೆ. ಬಿ. ವಿಜಯಲಕ್ಷ್ಮೀ ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರೂ ಗಣಿತ ವಿಜ್ಞಾನದಲ್ಲಿ 11 ಸಂಶೋಧನ ಪತ್ರಿಕೆಗಳನ್ನು ಬರೆದಿದ್ದರು. ವಿಜ್ಞಾನ ಕ್ಷೇತ್ರದಲ್ಲಿ ಡಾಕ್ಟರೆಟ್ ಪದವಿ ಪಡೆದ ಮೊದಲ ಮಹಿಳೆ ಕಮಲ ಸೊಹೊನಿ. ಭಾರತದ ಮೊದಲ ಮಹಿಳಾ ರಾಸಾಯನಶಾಸ್ತ್ರಜ್ಞೆ ಅಸಿಮಾ ಚಟರ್ಜಿ ಇವರು ರಸಾಯನಶಾಸ್ತ್ರದಲ್ಲಿ ಪದವಿ ಪಡೆದು ಕ್ಯಾನ್ಸರ್, ಮಲೇರಿಯಾ ಹಾಗೂ ಎಪಿಲಿಪ್ಟಿಕ್ ವಿರೋಧಿ ಔಷಧಗಳನ್ನು ಸಂಶೋಧಿಸಿದ್ದರು. ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆಗೈದ ಮೊದಲ ಭಾರತೀಯ ಮಹಿಳೆ ನಮ್ಮ ಕರ್ನಾಟಕದವರೇ ಆದ ರಾಜೇಶ್ವರಿ ಚಟರ್ಜಿ. ಕಮಲ್ ರಣಾದಿವೆ ಭಾರತದ ಮೊದಲ ಅಂಗಾಂಶ ಸಂಸ್ಕೃತಿ ಪ್ರಯೋಗಾಲಯದ ಸ್ಥಾಪಕಿ. ಪ್ರಖ್ಯಾತ ಸ್ತ್ರೀರೋಗ ತಜ್ಞೆ ಇಂದಿರಾ ಹಿಂದುಜಾ ಭಾರತದ ಮೊದಲ ಪ್ರನಾಳ ಶಿಶುವಿನ ಹೆರಿಗೆ ಮಾಡಿಸಿದ್ದಲ್ಲದೇ ಮೊದಲ ಗ್ಯಾಮೇಟ್ ಇಂಟ್ರಾಫಾಲೋಪಿಯನ್ ವರ್ಗಾವಣೆಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಬಂಜೆತನವನ್ನು ನಿವಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅದಿತಿ ಪಂತ್ ಅವರು 1983ರಲ್ಲಿ ಭಾರತವು ಅಂಟಾರ್ಟಿಕಾಗೆ ಕೈಗೊಂಡ ಮೊದಲ ಭೂವಿಜ್ಞಾನ ಹಾಗೂ ಸಮುದ್ರಶಾಸ್ತ್ರ ವಿಜ್ಞಾನದ ಸಂಶೋಧನ ಯಾತ್ರೆಯಲ್ಲಿ ಪಾಲ್ಗೊಂಡ ಮೊದಲ ಮಹಿಳಾ ವಿಜ್ಞಾನಿಯಾಗಿದ್ದಾರೆ. ಮಂಜು ಬನ್ಸಾಲ್ ಭಾರತದ ಮೊದಲ ಅನ್ವಯಿಕ ಜೈವಿಕ ತಂತ್ರಜ್ಞಾನ ಹಾಗೂ ಜೈವಿಕ ಮಾಹಿತಿ ಸಂಶೋಧನ ಕೇಂದ್ರದ ಸ್ಥಾಪಕ ನಿರ್ದೇಶಕರಾಗಿ ಈ ಕ್ಷೇತ್ರದಲ್ಲಿ ಸಾಧನೆಗೈದ ಮೊದಲಿಗರಾಗಿದ್ದಾರೆ.
ಬಾಹ್ಯಾಕಾಶ ಸಂಶೋಧನೆಯಲ್ಲಿ ಮಿನುಗುತಾರೆಯಾಗಿ ಅಮರರಾದ ಕಲ್ಪನಾ ಚಾವ್ಲಾ ಅಂತರಿಕ್ಷದಲ್ಲಿ ನಡೆದ ಮೊದಲ ಭಾರತೀಯ ಮಹಿಳೆ. ದುರ್ದೈವವಶಾತ್ ತಮ್ಮ ಮೊದಲ ಗಗನಯಾನವಾದ ಕೊಲಂಬಿಯಾ ಗಗನ ನೌಕೆಯ ದುರಂತದಲ್ಲಿ ಮೃತರಾದರೂ ಇಂದಿಗೂ ಅಸಂಖ್ಯಾತ ಯುವತಿಯರಿಗೆ ಸ್ಪೂರ್ತಿ, ಮಾದರಿಯಾಗಿ ನಿಂತಿದ್ದಾರೆ. ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ನಡೆದಾಡಿದ ಎರಡನೇ ಭಾರತೀಯ ಸಂಜಾತ ಮಹಿಳೆಯಾಗಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) 2014ರಲ್ಲಿ ಕೈಗೊಂಡ ಮಂಗಳಯಾನವು ಭಾರತೀಯ ವಿಜ್ಞಾನ ಕ್ಷೇತ್ರದಲ್ಲಿ ಮಹಿಳಾ ಸಶಕ್ತೀಕರಣಕ್ಕೆ ಹಿಡಿದ ಕೈಗನ್ನಡಿಯೆಂದರೆ ಅತಿಶಯೋಕ್ತಿಯಾಗಲಾರದು. ವಿಶ್ವದಲ್ಲೇ ಅತೀ ಕಡಿಮೆ ವೆಚ್ಚದಲ್ಲಿ ಮಂಗಳನ ಯಾತ್ರೆ ನಡೆಸಿದ ಈ ತಂಡದಲ್ಲಿ ಮೌಮಿತಾ ದತ್ತಾ, ನಂದಿನಿ ಹರಿನಾಥ್, ರಿತು ಕರಿಧಾಲ್, ಮಿನಾಲ್ ಸಂಪತ್, ಅನುರಾಧ ಟಿ. ಕೆ. ಮುಂತಾದ ಮಹಿಳಾ ವಿಜ್ಞಾನಿಗಳು ಪ್ರಮುಖ ಪಾತ್ರ ನಿರ್ವಹಿಸಿದ್ದರು. -ಡಾ| ಸ್ಮಿತಾ ಹೆಗಡೆ,
ಅನೂಪ್ ಕೃಷ್ಣ ರೈ, ಪೃಥ್ವಿ ಸಾಗರ್