Advertisement

ವಿದ್ಯಾಗಿರಿಯೊಳಗೆ “ಸ್ಕೌ ಟ್ಸ್‌ ಆ್ಯಂಡ್‌ ಗೈಡ್ಸ್‌ ‘ಪುನರಾವಲೋಕನ!

12:11 PM Dec 26, 2022 | Team Udayavani |

ಮೂಡುಬಿದಿರೆ: ದೇಶದ ವಿವಿಧ ರಾಜ್ಯದ 25 ತಂಡಗಳು…, ಕರ್ನಾಟಕದ 36 ಶೈಕ್ಷಣಿಕ ಜಿಲ್ಲೆಯ ತಂಡಗಳ ಸಹಿತ ಆಳ್ವಾಸ್‌ನ ಆಂಗ್ಲ ಮಾಧ್ಯಮ ಶಾಲೆಯ ಕಟ್ಟಡದ 61 ಕೋಣೆಗಳಲ್ಲಿ ನಡೆಯುತ್ತಿರುವ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ನ ಮಹತ್ವದ ವಸ್ತು ಪ್ರದರ್ಶನವು ಆಯಾಯ ಜಿಲ್ಲೆಯ ವಿಶೇಷತೆಯನ್ನು ಸಾರಿಹೇಳುವಲ್ಲಿ ಯಶಸ್ವಿಯಾಗಿದೆ.

Advertisement

ಒಂದೊಂದು ಜಿಲ್ಲೆಯ ವಿಶೇಷತೆಯ ಮುಖೇನ ಇಡೀ ಕಟ್ಟಡವು ರಾಜ್ಯದ ಸಮಗ್ರ ಸಾಂಸ್ಕೃತಿಕ ಚಿತ್ರಣವನ್ನು ತೆರೆದಿಡುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ವಿಶ್ವ ಜಾಂಬೂರಿಯು ವಿದ್ಯಾರ್ಥಿಗಳ ಕಸರತ್ತುಗಳ ಮುಖೇನ ಸಾಹಸ ಪ್ರದರ್ಶನಕ್ಕಷ್ಟೇ ಸೀಮಿತವಾಗಿಲ್ಲ; ಬದಲಾಗಿ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ನ ಇತಿಹಾಸ, ನಡೆದು ಬಂದ ಹೆಜ್ಜೆಯ ಪುನರಾವಲೋಕನಕ್ಕೆ ಹೊಸ ವೇದಿಕೆ ಒದಗಿಸಿದೆ. ಜತೆಗೆ ಒಂದೊಂದು ಜಿಲ್ಲೆಯ ವಿದ್ಯಾರ್ಥಿಗಳ ಕೌಶಲ ಪ್ರದರ್ಶನಕ್ಕೆ ವೇದಿಕೆ ಒದಗಿಸಿದೆ.

ರಾಜ್ಯದ 36 ಶೈಕ್ಷಣಿಕ ಜಿಲ್ಲೆಯ ವಿದ್ಯಾರ್ಥಿಗಳ ತಂಡದ ಜಿಲ್ಲಾ ವಿಶೇಷತೆ ಗಳನ್ನು ಸಾರುವ ಪ್ರದರ್ಶನ ಈ ಪೈಕಿ ಬಹು ಆಕರ್ಷಣೆಗೆ ಕಾರಣವಾಯಿತು. ಒಂದೊಂದು ಜಿಲ್ಲೆಯ ಒಂದೊಂದು ವಿಶೇಷತೆಗಳು ಹಾಗೂ ಆಯಾ ಜಿಲ್ಲೆಯಲ್ಲಿ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ನಡೆದು ಬಂದ ಹೆಜ್ಜೆಯ ವಿವರಗಳನ್ನು ಪ್ರಸ್ತುತಪಡಿಸಲಾಗಿದೆ. ಈ ಮೂಲಕ ಒಂದೊಂದು ಜಿಲ್ಲೆಯ ಹಿರಿಮೆ -ಗರಿಮೆಯನ್ನು ಸಾರುವ ವಿಶೇಷ ಪ್ರಯತ್ನ ಇಲ್ಲಿ ಸಾಕಾರವಾಗಿದೆ.

Advertisement

ಈ ಮಧ್ಯೆ ದೇಶದ ಉಳಿದ ರಾಜ್ಯಗಳ ಹಲವು ತಂಡಗಳ ಪ್ರದರ್ಶನ ಕೂಡ ಆಯಾ ಜಿಲ್ಲೆಯ ವಿಶೇಷತೆಯನ್ನು ಸಾರುವಂತಿದೆ. ಅಲ್ಲಿನ ವೇಷಭೂಷಣ, ಆಹಾರ ಪದ್ಧತಿ, ಇತಿಹಾಸ ಸಹಿತ ಆಯಾಯ ಜಿಲ್ಲೆಗಳ ಸಮಗ್ರತೆಯ ಕಡೆಗೆ ಬೆಳಕು ಚೆಲ್ಲುವಂತಿತ್ತು.

ಪೆನ್ಸಿಲ್ಕಡ್ಡಿಯಲ್ಲಿ ವಿ.ಸೌಧ! ವಿದ್ಯಾರ್ಥಿಗಳ ಪ್ರತಿಭಾ ಕೌಶಲಕ್ಕೆ ವೇದಿಕೆಯಾಗಿ ಪ್ರದರ್ಶನವು ಮೂಡಿ ಬಂದಿದೆ. ಒಂದೊಂದು ಜಿಲ್ಲೆಯ ವಿದ್ಯಾರ್ಥಿಗಳು ಶಿಕ್ಷಕರ ಜತೆ ಸೇರಿಕೊಂಡು ಬಗೆ ಬಗೆಯ ವಿಶೇಷತೆಗಳ ಮೂಲಕ ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ. ಅದರಲ್ಲಿಯೂ ಯಾದಗಿರಿಯ ವಿದ್ಯಾರ್ಥಿಗಳ ತಂಡ ಪೆನ್ಸಿಲ್‌ ಬಿಳಿ ಕಡ್ಡಿಯಲ್ಲಿ ಮಾಡಿದ ವಿಧಾನಸೌಧ ಮಾದರಿ ಆಕರ್ಷಣೆಗೆ ಕಾರಣವಾಗಿದೆ.

ವಿದ್ಯಾರ್ಥಿಗಳಿಗೆ ಅಪೂರ್ವ ಅನುಭವ: ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ನಡೆದು ಬಂದ ಹೆಜ್ಜೆ ಹಾಗೂ ಒಂದೊಂದು ಜಿಲ್ಲೆಯಲ್ಲಿ ಸಂಘಟನೆಯ ಮುಖೇನ ಆಗಿರುವ ಕಾರ್ಯಗಳನ್ನು ವಿವರವಾಗಿ ಭಿತ್ತರಿಸುವ ಪ್ರದರ್ಶನ ಆಳ್ವಾಸ್‌ ಜಾಂಬೂರಿಯಲ್ಲಿ ನಡೆಯುತ್ತಿದೆ. ಒಂದೊಂದು ಜಿಲ್ಲೆಯ ವಿವರದ ಜತೆಗೆ ಭಾರತದಲ್ಲಿ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ನ ಮಹತ್ವದ ಹೆಜ್ಜೆಯನ್ನು ಸಾರುವ ವಿವರಗಳು ಪ್ರದರ್ಶನದಲ್ಲಿದೆ. ವಿದ್ಯಾರ್ಥಿಗಳಿಗೆ ಇದೊಂದು ಅಪೂರ್ವ ಅನುಭವ.  –ಪ್ರಭಾಕರ ಭಟ್‌, ರಾಜ್ಯ ಸಂಘಟನ ಆಯುಕ್ತರು ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌

ದಿನೇಶ್‌ ಇರಾ

 

Advertisement

Udayavani is now on Telegram. Click here to join our channel and stay updated with the latest news.

Next