Advertisement

ಡ್ರಗ್ಸ್‌ ಹೆದ್ದಾರಿ ಮೇಲೆ ಹದ್ದುಗಣ್ಣು

01:18 AM Sep 10, 2020 | mahesh |

ಬೆಂಗಳೂರು/ಮಂಗಳೂರು: ರಾಜ್ಯದಲ್ಲಿ ಮಾದಕವಸ್ತು ಜಾಲ ವ್ಯಾಪ್ತಿ ನಿರೀಕ್ಷೆ ಮೀರಿ ವಿಸ್ತಾರವಾಗುತ್ತಿರುವುದು ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ, ಡ್ರಗ್ಸ್‌ ದಂಧೆಕೋರರ ಬೆನ್ನು ಹತ್ತಿರುವ ರಾಜ್ಯ ಸರಕಾರ ನೆಲ, ಜಲ, ವಾಯು ಮಾರ್ಗಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ವಿದೇಶ ಹಾಗೂ ಹೊರ ರಾಜ್ಯಗಳಿಂದ ಯಾವುದೇ ಮಾರ್ಗಗಳ ಮೂಲಕ ಮಾದಕ ವಸ್ತುಗಳು ಪೂರೈಕೆಯಾಗುವುದನ್ನು ತಪ್ಪಿ ಸಲು ಎಲ್ಲ “ಡ್ರಗ್ಸ್‌ ಹೈವೇ’ಗಳ ಮೇಲೆ ರಾಜ್ಯ ಗೃಹ ಇಲಾಖೆ ಕಣ್ಣಿಟ್ಟಿದೆ. ಮಾದಕ ವಸ್ತು ನಿಯಂತ್ರಣ ಘಟಕ (ಎನ್‌ಸಿಬಿ) ಕಿರುತೆರೆ ನಟಿ ಸೇರಿದಂತೆ ಮೂವರನ್ನು ಬಂಧಿಸಿದ ಬಳಿಕ ಡ್ರಗ್ಸ್‌ ಜಾಲದ  ಕಬಂಧ ಬಾಹುಗಳು ರಾಜ್ಯದಿಂದ ದೇಶ, ವಿದೇಶದೆಡೆಗೂ ಚಾಚಿರುವುದು ಬಯಲಾಗುತ್ತಿದೆ ಪ್ರಮುಖವಾಗಿ ಹಡಗುಗಳ ಮೂಲಕ ಇತರ ಸರಕು ಸರಂಜಾಮುಗಳ ನಡುವೆ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ಸ್‌ಗಳನ್ನು ಸರಬರಾಜು ಮಾಡುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಯು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಇಂಡಿಯನ್‌ ಕೋಸ್ಟ್‌ ಗಾರ್ಡ್‌ ಮತು ಕರಾವಳಿ ಕಾವಲು ಪಡೆಗಳ ಸಹಕಾರದೊಂದಿಗೆ ಮಂಗಳೂರು ಸೇರಿದಂತೆ ಪ್ರಮುಖ ಬಂದರುಗಳಲ್ಲೂ ಹೆಚ್ಚಿನ ನಿಗಾ ಇರಿಸಲು ಸೂಚನೆ ನೀಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Advertisement

ಪಾರ್ಸೆಲ್‌ ಮೇಲೂ ನಿಗಾ
ಎನ್‌ಸಿಬಿ ಕಾರ್ಯಾಚರಣೆಯಲ್ಲಿ ಆರೋಪಿ ಅನಿಕಾಗೆ ಬರುತ್ತಿದ್ದ ವಿದೇಶಿಡ್ರಗ್ಸ್‌ಗಳು ಅಂತಾರಾಷ್ಟ್ರೀಯ ಕೊರಿ ಯರ್‌ಗಳ ಮೂಲಕ ಎಂಬುದು ಖಾತ್ರಿ ಯಾಗಿತ್ತು. ಆಕೆಯ ಸ್ನೇಹಿತ ರೆಹಮಾನ್‌ಗೆ ಅಂತಾರಾಷ್ಟ್ರೀಯ ಕೊರಿಯರ್‌ನಲ್ಲಿ ಎಂಡಿಎಂಎ ಮಾತ್ರೆಗಳು ಬಂದಿರುವುದು ಖಾತ್ರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಇಂಟರ್‌ನ್ಯಾಶನಲ್‌ ಕೊರಿಯರ್‌ ಸಂಸ್ಥೆಗಳು, ಅಂಚೆ ಕಚೇರಿಗಳ ಮೂಲಕ ಯಾವುದೇ ಅನುಮಾನ ಬಾರದ ರೀತಿಯಲ್ಲಿ ಬರುವ ಪಾರ್ಸೆಲ್‌ಗ‌ಳ ಮೇಲೆ ನಿಗಾ ಇಡಲು ನಿರ್ಧರಿಸಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು, ರಾಜ್ಯದ ಎಲ್ಲ ಗಡಿಗಳು, ರೈಲು ನಿಲ್ದಾಣಗಳು, ಬಸ್‌ ನಿಲ್ದಾಣಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ. ಪ್ರಮುಖವಾಗಿ ಕೇರಳ, ತಮಿಳು ನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗೋವಾ ಗಡಿಗಳಲ್ಲಿ ಕಟ್ಟುನಿಟ್ಟಿನ ತಪಾ ಸಣೆಗೆ ಇಲಾಖೆ ಯೋಚಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯ ಪೊಲೀಸರು ಆರು ಗಡಿರಾಜ್ಯಗಳ ಪೊಲೀಸರ ಜತೆ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ಜತೆ ನಿಕಟ ಸಂಪರ್ಕದಲ್ಲಿದ್ದು, ಮಾಹಿತಿಗಳ ವಿನಿಮಯಕ್ಕೆ ಯತ್ನಿಸಿದ್ದಾರೆ. ಪ್ರಮುಖವಾಗಿ ಎನ್‌ಸಿಬಿ ದಾಳಿ ಮತ್ತು ಬೆಂಗಳೂರಿನ ಸಿಸಿಬಿ ಪೊಲೀಸರ ದಾಳಿಯಲ್ಲಿ ಬಂಧಿತರಾದ ಡ್ರಗ್‌ ಪೆಡ್ಲರ್‌ಗಳು ಮತ್ತಿತರ ಆರೋಪಿಗಳು ಮಾದಕ ವಸ್ತು ಸರಬರಾಜು ಜಾಲದಲ್ಲಿ ಹೆಣೆದುಕೊಂಡಿರುವುದು ತನಿಖೆ ಯಲ್ಲಿ ಬಯಲಾಗಿದೆ.

ಪೆಡ್ಲರ್‌ಗಳ ಬೇಟೆ
ರಾಜ್ಯದ ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಯುತ್ತಿದೆ. ಮತ್ತೂಂದೆಡೆ ರಾಜ್ಯದ ಪೊಲೀಸ್‌ ಆಯುಕ್ತರ ವಲಯಗಳಲ್ಲಿರುವ ಸಿಸಿಬಿ ಪೊಲೀಸರು ವಿಶೇಷವಾಗಿ ಡ್ರಗ್ಸ್‌ ಜಾಲ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಪೊಲೀಸ್‌ ಮೂಲಗಳ ಪ್ರಕಾರ, ಈ ಹಿಂದಿನ ಕಾರ್ಯಾಚರಣೆಗೆ ಹೋಲಿಸಿದರೆ ಕಳೆದ 20 ದಿನಗಳಿಂದ ನಡೆಯುತ್ತಿರುವ “ಡ್ರಗ್ಸ್‌ ಪೆಡ್ಲರ್‌ಗಳ ಬೇಟೆ’ ಜೋರಾಗಿಯೇ ಇದೆ. ಪ್ರತಿ ಜಿಲ್ಲೆಯಲ್ಲಿ ನಿತ್ಯ ಒಂದಿಲ್ಲೊಂದು ಡ್ರಗ್ಸ್‌ ಪ್ರಕರಣಗಳು ಪತ್ತೆಯಾಗುತ್ತಿವೆ.

ವಿಮಾನ, ಹಡಗುಗಳ ಮೇಲೂ ನಿಗಾ
ನಗರದಲ್ಲಿ ಗಾಂಜಾ ಮಾರಾಟ ದಂಧೆ ಎಷ್ಟು ಪ್ರಮಾಣದಲ್ಲಿ ನಡೆಯುತ್ತಿದೆಯೋ ಅಷ್ಟೇ ಪ್ರಮಾಣದಲ್ಲಿ ವಿದೇಶೀ ಡ್ರಗ್ಸ್‌ ದಂಧೆಯೂ ಅವ್ಯಾಹತವಾಗಿದೆ. ವಿದೇಶಗಳಿಂದ ಎಂಡಿಎಂಎ, ಎಲ್‌ಎಸ್‌ಡಿ, ಕೊಕೇನ್‌ ಸೇರಿ ಐಷಾರಾಮಿ ಪಾರ್ಟಿ ಡ್ರಗ್‌ಗಳು ರಾಜ್ಯಕ್ಕೆ ಬರುತ್ತವೆ. ಇವುಗಳು ವಿಮಾನ, ಹಡಗುಗಳ ಮೂಲಕವೇ ಬರುತ್ತಿದ್ದು, ನೇರವಾಗಿ ಪೆಡ್ಲರ್‌ಗಳ ಕೈಸೇರುತ್ತಿವೆ. ಕೆಲವು ಸಂದರ್ಭಗಳಲ್ಲಿ ಅಲ್ಲಿನ ಕಸ್ಟಮ್ಸ್‌ ಅಧಿಕಾರಿಗಳೇ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.
ನೈಜೀರಿಯಾ, ನೆದರ್‌ಲ್ಯಾಂಡ್‌, ಆಫ್ರಿಕಾ, ಕಾಂಗೋ ದೇಶಗಳಿಂದ ಎಂಡಿಎಂಎ, ಎಲ್‌ಎಸ್‌ಡಿಗಳು ಪಾರ್ಸೆಲ್‌ಗ‌ಳಲ್ಲಿ ಬರುತ್ತಿದ್ದವು. ಎಲೆಕ್ಟ್ರಾನಿಕ್‌ ಉಪಕರಣಗಳಲ್ಲಿ, ವಸ್ತ್ರಗಳಲ್ಲಿ, ವ್ಯಕ್ತಿಗಳ ಗುದದ್ವಾರದಲ್ಲಿಯೂ ತರುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ರಾಜ್ಯ ಪೊಲೀಸ್‌ ಇಲಾಖೆ ವಿಮಾನ ನಿಲ್ದಾಣಗಳಲ್ಲಿ ಬರುವ ಪಾರ್ಸೆಲ್‌ಗ‌ಳನ್ನು ಸಂಪೂರ್ಣ ತಪಾಸಣೆ ನಡೆಸಿದ ಬಳಿಕವಷ್ಟೇ ಅವುಗಳನ್ನು ರವಾನಿಸಬೇಕು ಎಂದು ಕೋರಿದೆ.

Advertisement

ಕೆನಡಾ, ಬೆಲ್ಜಿಯಂ, ನೈಜೀರಿಯಾ, ಆಫ್ರಿಕಾ, ನೆದರ್ಲ್ಯಾಂಡ್‌, ಕಾಂಗೋ ಮತ್ತಿತರ ದೇಶಗಳಿಂದ ಬೆಂಗಳೂರಿಗೆ ಡ್ರಗ್ಸ್‌ ಪೂರೈಕೆ ಆಗುತ್ತಿರುವುದು ತನಿಖೆಯಿಂದ ಗೊತ್ತಾಗಿದ್ದು, ವಿಮಾನಗಳು, ಹಡಗುಗಳ ಮೂಲಕ ಸರಬರಾಜಾಗುತ್ತಿವೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ನೆರೆ ರಾಜ್ಯಗಳಿಂದ ಗಾಂಜಾ ಪೂರೈಕೆ
ಎಲ್ಲಿಂದ?
ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ, ಝಾರ್ಖಂಡ್‌ನಿಂದ ರಾಜ್ಯಕ್ಕೆ ಗಾಂಜಾ ಪೂರೈಕೆಯಾಗುತ್ತದೆ ಹಾಗೂ ರಾಜ್ಯ, ಜಿಲ್ಲೆಗಳ ಗಡಿಪ್ರದೇಶಗಳಲ್ಲಿರುವ ಅರಣ್ಯ ಪ್ರದೇಶಗಳಲ್ಲಿ ಅವ್ಯಾಹತವಾಗಿ ಬೆಳೆಯುತ್ತಾರೆ.

ಟಾರ್ಗೆಟ್‌ ಯಾರು?
ವಿದ್ಯಾರ್ಥಿಗಳು, ಐಟಿ-ಬಿಟಿ ಕಂಪೆನಿ ಉದ್ಯೋಗಿಗಳು ಹಾಗೂ ಇತರ ವರ್ಗದವರೇ ಹೆಚ್ಚು.

ಪೂರೈಕೆ ಹೇಗೆ?
ಬಸ್‌, ರೈಲು ಮತ್ತು ಇತರ ಮಾರ್ಗಗಳ ಮೂಲಕ ನೇರವಾಗಿ ಮಧ್ಯವರ್ತಿಗಳಿಗೆ ಮಾರಾಟ ಮಾಡಿ, ಅನಂತರ ಗ್ರಾಹಕರ ಕೈ ಸೇರುತ್ತಿದೆ. ಇನ್ನು ಸಿಲಿಕಾನ್‌ ಸಿಟಿ ಬೆಂಗಳೂರಿಗೆ ರೈಲು ಮತ್ತು ಬಸ್‌ ಮಾರ್ಗದಲ್ಲಿ ಗಾಂಜಾ ಪೂರೈಕೆಯಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next