Advertisement

ಸಂಕಷ್ಟದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು

05:06 PM Aug 30, 2018 | Team Udayavani |

ಹುಬ್ಬಳ್ಳಿ: ಶ್ರೀಲಂಕಾ ಕ್ರಿಕೆಟ್‌ ಅಸೋಸಿಯೇಶನ್‌ ಶ್ರೀಲಂಕಾದ ಕೊಲಂಬೋದಲ್ಲಿ ಆ.23ರಿಂದ 25ರವರೆಗೆ ಅಂಗವಿಕಲರಿಗಾಗಿ ಆಯೋಜಿಸಿದ್ದ 2ನೇ ಕೋಲಂಬೋ ಫಿಜಿಕಲ್‌ ಚಾಲೆಂಜ್ಡ್ ಕ್ರಿಕೆಟ್‌ ಪಂದ್ಯಾವಳಿ -2018ರ ಅಂತಾರಾಷ್ಟ್ರೀಯ ಅಂಗವಿಕಲರ ಟ್ವೆಂಟಿ-20 ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾಗವಹಿಸಿ ದೇಶಕ್ಕೆ ಕಪ್‌ ತಂದು ಕೊಟ್ಟ ಆಟಗಾರ, ಬಂಕಾಪುರ ಚೌಕ್‌ ನಿವಾಸಿ ಅಂಗವಿಕಲ ಮಹೇಶಕುಮಾರ ಅಗಳಿ ಅವರ ಮನೆಯೀಗ ಬಿದ್ದಿದ್ದು, ದುರಸ್ತಿಗೆ ಹಣವಿಲ್ಲದೇ ತೀವ್ರ ಸಂಕಷ್ಟ ಪಡುವಂತಾಗಿದೆ. ಸಿಂಹಳಿಯರ ನಾಡಿಗೆ ತೆರಳಿ ಕಪ್‌ ಗೆದ್ದ ತಂಡದಲ್ಲಿ ಭಾಗಿಯಾಗಿದ್ದ ಅಗಳಿ ಖುಷಿಯಿಂದ ಮನೆಗೆ ಬಂದರೆ ಮನೆಯ ಮುಂಭಾಗ ಭಾಗಶಃ ಕುಸಿದಿದ್ದು, ಪೂರ್ಣ ಕುಸಿಯದಂತೆ ಕಟ್ಟಿಗೆಯ ಎಳೆಗಳನ್ನು ಆಸರೆಯಾಗಿ ಇಡಲಾಗಿದೆ.

Advertisement

ಮಹೇಶಕುಮಾರಗೆ ತಂದೆ-ತಾಯಿ ಇಲ್ಲ. ಚಿಕ್ಕಪ್ಪಂದಿರು-ಚಿಕ್ಕಮ್ಮಂದಿರೊಂದಿಗೆ ಇದ್ದಾನೆ. ಸಹೋದರ-ಸಹೋದರಿಯರು ಇದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸಂಬಳವೇ ಜೀವನಾಧಾರ. ಜಮೀನು ಇಲ್ಲ. ಚಿಕ್ಕಪ್ಪಂದಿರು ಸಹಿತ ಕಡುಬಡವರಾಗಿದ್ದು, ಅಲ್ಲಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಮಗ ಅಂತಾರಾಷ್ಟ್ರೀಯ ಪಟುವಾಗಿದ್ದರೂ ಸರಕಾರದಿಂದ ಯಾವುದೇ ಪ್ರೋತ್ಸಾಹಧನ, ಸಹಕಾರ ಇಲ್ಲ. ಈಗ ಆಸರೆಯಾಗಿದ್ದ ಮನೆಯೂ ಸಹ ಮಳೆಯಿಂದ ಭಾಗಶಃ ಬಿದ್ದಿದ್ದರಿಂದ ಕುಟುಂಬಸ್ಥರಿಗೆಲ್ಲ ಚಿಂತೆಯಾಗಿದೆ. 

ಸರಕಾರ, ಕ್ರೀಡಾ ಮಂಡಳಿಯಿಂದ ಇನ್ನುಳಿದ ಕ್ರೀಡಾಪಟುಗಳಿಗೆ ಸಿಗುವ ಸೌಲಭ್ಯ, ಸವಲತ್ತುಗಳು ಅಂಗವಿಕಲ ಪಟುಗಳಿಗೆ ಸಿಗುತ್ತಿಲ್ಲ. ಈಗ ಆಸರೆಯಾಗಿದ್ದ ಮನೆ ಸಹ ಮಳೆಯಿಂದ ಭಾಗಶಃ ಬಿದ್ದಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಸಂಬಳ ಸಾಕಾಗಲ್ಲ. ದುಡಿಮೆಯೆ ಆಸರೆ. ಆರ್ಥಿಕವಾಗಿ ಬಡವರಾಗಿದ್ದೇವೆ. ಈಗ ಸೂರು ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದೇವೆ. ಸರಕಾರ, ಜನಪ್ರತಿನಿಧಿಗಳು ಅಂಗವಿಕಲ ಪಟುವಿಗೆ ಆರ್ಥಿಕ ಸಹಾಯ ಮಾಡಿದರೆ ಅನುಕೂಲವಾಗುತ್ತದೆ.
.  ಮಹೇಶಕುಮಾರ ಅಗಳಿ, ಅಂತಾರಾಷ್ಟ್ರೀಯ ಅಂಗವಿಕಲ ಕ್ರಿಕೆಟ್‌ ಆಟಗಾರ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇರುವಷ್ಟು ಪೋತ್ಸಾಹ ಹಾಗೂ ಆಟಗಾರರಿಗೆ ಇರುವಷ್ಟು ಸಹಕಾರ, ಸವಲತ್ತು ಅಂಗವಿಕಲ ಕ್ರಿಕೆಟ್‌ ಆಟಗಾರರಿಗೆ ಇಲ್ಲ. ಸರಕಾರ ಇಲ್ಲವೆ ಸಂಘ-ಸಂಸ್ಥೆಗಳು ಸಹಿತ ಇಂತಹ ಆಟಗಾರರಿಗೆ ಹಣ ನೀಡಲ್ಲ. ಹೀಗಾಗಿ ಇವರು ಜೀವನ ಸಾಗಿಸುವುದು ಕಷ್ಟ,
ತಂದೆ-ತಾಯಿಗಳನ್ನು ಕಳೆದುಕೊಂಡ ಮಹೇಶಕುಮಾರ ಚಿಕ್ಕಪ್ಪಂದಿರ ಆಶ್ರಯದಲ್ಲೇ ಬೆಳೆದಿದ್ದಾನೆ. ಅಲ್ಲದೆ ಮನೆಯ ಹಿರಿಯ ಮಗ. ಹೀಗಾಗಿ ಮನೆಯ ಎಲ್ಲ ಜವಾಬ್ದಾರಿ ಅವನ ಮೇಲಿದೆ. ಜೀವನಕ್ಕೆ ಸೂರಾಗಿದ್ದ ಮನೆಯೊಂದು ಬಿದ್ದ ಕಾರಣ ಮುಂದೆ ಜೀವನ ಹೇಗೆ, ಅವನ ಭವಿಷ್ಯ ಹೇಗೆ ಎಂಬುದು ಚಿಂತೆಯಾಗಿದೆ. ಆತನಿಗೆ ಸರಕಾರದಿಂದ ಸಹಾಯಹಸ್ತ ಬೇಕಾಗಿದೆ.
. ಮಹೇಶ ಅಂಗಡಿ,
ಡಿಸೇಬಲ್‌ ನ್ಪೋರ್ಟಿಂಗ್‌ ಸೊಸೈಟಿ (ಡಿಎಸ್‌ಎಸ್‌) ಅಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next