ಅಬ್ಟಾ… ಅಂತೂ ಇಂಟರ್‌ನಲ್ಸ್ ಮುಗೀತು. ಮುಗಿದದ್ದು ಸೆಮಿಸ್ಟರ್ ಪರೀಕ್ಷೆಯಲ್ಲ. ಆದ್ರೂ ಎಂಥ ಖುಷಿ, ತಲೆಮೇಲಿದ್ದ ಒಂದು ದೊಡ್ಡ ಭಾರವಿಳಿದಂತೆ. ಕಾಲೇಜಿಗೆ ಸೇರಿದಾಗ ಇನ್ನು ಸೀರಿಯಸ್ಸಾಗಿ ಓದಬೇಕು, ಅವತ್ತಿನದು ಅವತ್ತಿಗೇ ಮುಗಿಸಬೇಕು, ಒಳ್ಳೆ ರ್‍ಯಾಂಕ್ ಬರಬೇಕು, ಸುಮ್ನೆ ಕಾಲಹರಣ ಮಾಡಬಾರದು- ಹೀಗೆ ಸಾವಿರ ಆಲೋಚನೆಗಳು, ಕನಸುಗಳು.
ಮೊದಲ ಒಂದು ವಾರ, ಹೆಚ್ಚು ಅಂದ್ರೆ ಒಂದು ತಿಂಗಳು. ಅದು ಜಾಸ್ತೀನೆ ಆದ್ರೂ ಇರಲಿ, ಅವತ್ತಿನದು ಅವತ್ತಿಗೇ ಓದೋದು, ಸಮಯ ಸಿಕ್ಕಾಗ ಗ್ರಂಥಾಲಯಕ್ಕೆ ಹೋಗಿ ಓದೋದು ಹೀಗೆ ನಡೆಯುತ್ತಿತ್ತು. ಕಾಲಕ್ರಮೇಣ ಮತ್ತೆ ಅದೇ ಹಳೇ ರಾಗ. ಇಂಟರ್‌ನಲ್ಸ್‌ಗೆ ಇನ್ನು ಸುಮಾರು ದಿನ ಇದೆ, ಓದಿದರಾಯ್ತು ಎನ್ನುತ್ತಲೇ ಮತ್ತೆ ಪುನಃ ಎಚ್ಚರವಾಗೋದು ಇಂಟರ್‌ನಲ್ಸ್‌ಗೆ ಒಂದು ವಾರವಿರುವಾಗ. ಇದಿನ್ನು ಮೊದಲನೆಯದಲ್ವಾ? ಅದಕ್ಕೆ ಸ್ವಲ್ಪ ಬೇಗ ಮನವರಿಕೆಯಾಯ್ತು. ಒಳ್ಳೆ ಅಂಕ ಪಡೆಯಲೇಬೇಕು. ಇದರಿಂದಲೇ ಅಧ್ಯಾಪಕರು ನಮ್ಮನ್ನ ಅರಿಯೋದು ಅಂತ ಓದಿ, ಬರೆದು ಒಳ್ಳೆ ಅಂಕ ಪಡೆಯೋದು.
ಮೊದಲ ಇಂಟರ್‌ನಲ್ಸ್ ಆಗಿದ್ದು ಅಷ್ಟೆ. ಸ್ವಲ್ಪ ವಿಶ್ರಮಿಸೋಣಾಂತ ಎಂದು ಪುಸ್ತಕಗಳೆಲ್ಲ ಬದಿ ಸೇರುತ್ತೆ. ಆಗಲೆ ಅದು ಹೇಗೆ ಒಂದು ತಿಂಗಳು ಕಳೀತು ಅನ್ನೋದು ಗೊತ್ತೇ ಆಗಲ್ಲ. ಸ್ಪೆಷಲ್‌ಕ್ಲಾಸ್, ಶನಿವಾರ ಭಾನುವಾರವೆಲ್ಲ ಕ್ಲಾಸಿಗೆ ಹೋಗಿ ಬಂದು ಸಾಕಾಗಿರುತ್ತೆ. ಸ್ವಲ್ಪ ವಿಶ್ರಾಂತಿ ಬೇಕು. ಹೀಗಾಗಿ ಓದೋಕೆ ಆಗಿಲ್ಲ ಅನ್ನೋದು ಒಂದು ನೆಪ. ಆದ್ರೆ ಪುಸ್ತಕ ತೆಗೆದರೆ ಓದೋಕೆ ಮನಸ್ಸು ಬರಲ್ಲ. ವಾಟ್ಸಾಪ್, ಫೇಸ್‌ಬುಕ್, ಟ್ವೀಟರ್, ಹೈಕ್ ಹೀಗೆ ಹಲವಾರು “ನೋಡಿಲ್ಲಿ ನೋಡಿಲ್ಲಿ’ ಅಂತ ಉಳೀತಿರುತ್ತೆ. ಒಂದೆರಡು ದಿನಾಂತ ಶುರುವಾಗಿದ್ದು ದಿನಾ ಅದೇ ಆಗಿಬಿಡುತ್ತೆ.
ಹೀಗಿರುವಾಗ ಎರಡನೆಯ ಇಂಟರ್‌ನಲ್ಸ್ ವೇಳಾಪಟ್ಟಿಯನ್ನು ಬೋರ್ಡಿನ ಮೇಲೆ ನೋಡಿ ಆಘಾತ, ಇಷ್ಟು ಬೇಗಾನಾ? ಇವತ್ತಿನಿಂದಲೇ ಓದಬೇಕು. ಇನ್ನು ಒಂದೇ ವಾರವಿರುವುದು…. ಹೀಗೆಲ್ಲಾ ಯೋಚನೆ. ಮನೆಗೆ ಬಂದಮೇಲೆ ಯೋಚನೆಯೆಲ್ಲಾ ಬುಡಮೇಲು. ನಾಳೆ ಓದಿದರಾಯ್ತು, ಇನ್ನು ಒಂದು ವಾರವಿದೆಯಲ್ಲ, ಹೀಗೆ ದಿನ ಕಳೆದು ಇಂಟರ್ನಲ್ಸ್ ಹಿಂದಿನ ದಿನ ಎದ್ದುಬಿದ್ದು ಓದೋದೇ ಆಗುತ್ತೆ. ಕೆಲವೊಂದು ವಿಷಯಗಳನ್ನು ನೋಡಿದ ಕೂಡಲೆ, ಅರೆ, ಇದು ಯಾವಾಗ ಮಾಡಿದ್ರು? ಆಶ್ಚರ್ಯ! ಇನ್ನು ಅದ್ಭುತವೇನೆಂದರೆ ಕೆಲವೊಂದು ಪದಗಳನ್ನೇ ಕೇಳಿದ್ದು ನೆನಪಿನಲ್ಲಿರುವುದಿಲ್ಲ.
ಹೇಗೋ ಓದಿ ಮರುದಿನ ಬಿಳಿ ಹಾಳೆಯಲ್ಲಿ ತೋಚಿದ್ದನ್ನೆಲ್ಲ ಗೀಚೋದು, ಯಾವತ್ತೂ ಇರದ ದೇವರ ಮೇಲಿನ ಭಕ್ತಿ ಅಂದು ಹೆಚ್ಚಾಗಿರುತ್ತೆ, ಹಣೇಲಿ ಕುಂಕುಮ, ವಿಭೂತಿ, ಗಂಧ ರಾರಾಜಿಸುತ್ತಿರುತ್ತದೆ. ಆರಿಸಿ ಬರೆಯುವ ಪ್ರಶ್ನೆಗಳಿದ್ದರೆ ನಾಲ್ಕರಲ್ಲಿ ಯಾವುದಾದರೊಂದಕ್ಕೆ ಸರಿಯೆಂದು ಹಾಕಬೇಕಲ್ಲ, ಯಾವುದನ್ನು ಆರಿಸುವುದು ಎನ್ನುವ ಗೊಂದಲ. ಗೊಂದಲ ನಿವಾರಣೆಗೆ ದೇವರ ಹೆಸರು ಒಂದಕ್ಕಾದರೆ, ಮತ್ತೂಂದಕ್ಕೆ ಸ್ನೇಹಿತರ ಹೆಸರು, ಶ್ಲೋಕ ಹೇಳಿಯೋ ಆರಿಸಿ ಬರೆಯೋದು.
ಪಾಪ, ಮೌಲ್ಯಮಾಪನ ಮಾಡುವವರಿಗೆ ನಾನು ಹೀಗೆಲ್ಲಾ ಪಾಠ ಮಾಡಿದ್ದೀನಾ. ಹೀಗೂ ಉತ್ತರ ಬರೆಯಬಹುದಾ ಅನ್ನಿಸುತ್ತೆ. ಕನ್ನಡ ಮತ್ತು ಇಂಗ್ಲಿಶ್ ಕೇಳ್ಳೋದೇ ಬೇಡ. ಇಲ್ಲಿ ನಾಟಕದ ಪಾತ್ರಧಾರಿ ಕವಿಯೂ ಆಗಿ ವಿದ್ಯಾರ್ಥಿಗಳಿಂದ ಪ್ರಶಸ್ತಿ ಪಡೆದು, ತಾನು ಬರೆಯದ ಪುಸ್ತಕಗಳನ್ನೂ ಬರೆದಿರುತ್ತಾನೆ.
ಹಿಂದಿನ ದಿನ ನಿದ್ದೆ ಬಿಟ್ಟು ಓದಿದಾಕ್ಷಣ ಅನ್ನಿಸುತ್ತೆ, ಇನ್ನು ಹೀಗೆ ಮಾಡಬಾರದು, ಸೆಮಿಸ್ಟರ್ ಪರೀಕ್ಷೆ ಮುಖ್ಯ. ಅದಕ್ಕೆ ಸರಿಯಾಗಿ ಓದಬೇಕು. ಆದ್ರೆ ಅದರ ಕಥೆ ಇನ್ನೇನೋ? ತಿಳಿಯದು.
ಕಾಲ ಕಳೆದಂತೆ ಪುಸ್ತಕ ಬದಲಾಯಿತು. ಪ್ರಾಧ್ಯಾಪಕರು ಬದಲಾದರು. ವಿದ್ಯಾರ್ಥಿಗಳೂ ಬದಲಾದರು. ಎಲ್ಲಾ ರೀತಿಯಲ್ಲಿ ಬದಲಾವಣೆ ಬಂದರೂ ಒಂದು ಮಾತ್ರ ಬದಲಾಗಲಿಲ್ಲ, ವಿದ್ಯಾರ್ಥಿಗಳಲ್ಲಿ “ನಾಳೆ ಮಾಡಿದರಾಯ್ತು’ ಎನ್ನುವ ಮನೋಭಾವ, ಇನ್ನು ಸುಮಾರು ದಿನಗಳಿವೆ ಎನ್ನುವ ಆಲಸ್ಯ.
ಇದನ್ನು ಓದುತ್ತಿರುವವರಿಗೂ ಹೀಗೇ ಅನುಭವಗಳಿರುತ್ತೆ, ಓದುವಾಗ ನಿಮ್ಮ ಕಾಲೇಜಿನ ಅನುಭವಗಳೂ ನೆನಪಾಗುತ್ತೆ ಅಂತ ಭಾವಿಸುತ್ತೇನೆ.
ಕೃತ್ತಿಕಾ ಎ. ಜಿ. ಪ್ರಥಮ ಬಿ.ಎಸ್ಸಿ , ಎಂ.ಜಿ.ಎಂ. ಕಾಲೇಜು, ಉಡುಪಿ