Advertisement

ಅವಕಾಶ ವಂಚಿತರಿಗೂ ಒಳ ಮೀಸಲು

12:02 PM Sep 18, 2017 | Team Udayavani |

ಬೆಂಗಳೂರು: ನ್ಯಾ. ಎ.ಜೆ. ಸದಾಶಿವ ವರದಿ ಜಾರಿಗೊಳಿಸಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುವ ಬಗ್ಗೆ ಚರ್ಚೆ ಮತ್ತು ಹೋರಾಟಗಳು ನಡೆಯತ್ತಿವೆ. ಇದೇ ರೀತಿ ಹಿಂದುಳಿದ ವರ್ಗಗಳ ಅವಕಾಶ ವಂಚಿತ ಸಮುದಾಗಳಿಗೂ ಒಳಮೀಸಲಾತಿ ನೀಡುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮುಂದಿನ ಬಾರಿ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಅದನ್ನು ಕಾರ್ಯಾಗತಗೊಳಿಸುವುದಾಗಿ ಹೇಳಿದ್ದಾರೆ. 

Advertisement

ಜೆಡಿಎಸ್‌ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳಲ್ಲಿ ಅನೇಕ ಸಮುದಾಯಗಳು ತೀರಾ ಹಿಂದುಳಿದು ಅವಕಾಶ ವಂಚಿತರಾಗಿದ್ದಾರೆ. ಒಳಮೀಸಲಾತಿ ನೀಡುವ ಮೂಲಕ ಆ ವರ್ಗಗಳನ್ನು ರಾಜಕೀಯ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮೇಲಕ್ಕೆ ತರಬೇಕು. 

ಹಿಂದುಳಿದ ವರ್ಗಗಳಿಗೆ ಒಳಮೀಸಲಾತಿ ಹೇಗೆ ನೀಡಬಹುದು ಎಂದು ನನಗೆ ಗೊತ್ತಿದೆ. ಮುಂದೆ ಪಕ್ಷ ಅಧಿಕಾರಕ್ಕೆ ಬಂದಾಗ ಅದನ್ನು ಮಾಡಿ ತೋರಿಸುತ್ತೇನೆ ಎಂದರು. 2ಎ ಕೆಟಗರಿಯನ್ನು ವರ್ಗೀಕರಣ ಮಾಡಿ ಹಿಂದುಳಿದ ವರ್ಗಗಳ ಅವಕಾಶವಂಚಿತ ಸಮುದಾಯಗಳಿಗೆ ಒಳಮೀಸಲಾತಿ ನೀಡಬಹುದು. ಈ ನಿಟ್ಟಿನಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಪ್ರಯತ್ನ ಮಾಡಿದ್ದೆ. ಆದರೆ, ಆಗ ಸಾಧ್ಯವಾಗಿಲ್ಲ.

ಎಚ್‌.ಡಿ. ಕುಮಾರಸ್ವಾಮಿ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಾಗ ಭಾರಿ ವ್ಯಕ್ತವಾಯಿತು. ಆದರೆ, ಹಿಂದುಳಿದ ವರ್ಗಗಳಿಗೆ ಯಾವ ರೀತಿಯಲ್ಲಿ ಒಳಮೀಸಲಾತಿ ಕೊಡಬಹುದು ಅನ್ನುವುದು ಚೆನ್ನಾಗಿ ಗೊತ್ತಿದೆ. ಈ ನಿಟ್ಟಿನಲ್ಲಿ ಕೆಲವೊಂದು ಸಿದ್ಧತೆಗಳನ್ನೂ ಸಹ ಮಾಡಿಕೊಳ್ಳಲಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪ್ರಣಾಳಿಕೆಯಲ್ಲೂ ಇದು ಸೇರಿಸಲಾಗುವುದು ಎಂದರು. 

ವಿಶ್ವಕರ್ಮ ಜನಾಂಗವನ್ನು ಎಸ್ಸಿ ಪಟ್ಟಿಗೆ ಸೇರಿಸಲಾಗುವುದು ಎಂದು ಈಗಿನ ಕಾಂಗ್ರೆಸ್‌ ಸರ್ಕಾರ ಹೇಳುತ್ತಿದೆ. ಆದರೆ, ಅದು ಸಾಧ್ಯವಾಗದ ಮಾತು. ಅದೊಂದು ರಾಜಕೀಯ ಹೇಳಿಕೆಯಷ್ಟೇ. ನಿಜಕ್ಕೂ ಸರ್ಕಾರಕ್ಕೆ ಬದ್ಧತೆ ಇದ್ದರೆ, ವಿಶ್ವಕರ್ಮ ಜನಾಂಗಕ್ಕೆ ಮಾಡಬೇಕಾಗಿರುವ ಕೆಲಸಗಳಿದ್ದು, ಅದನ್ನು ಮಾಡಲಿ ಎಂದು ದೇವೇಗೌಡರು ಕಾಂಗ್ರೆಸ್‌ ಸರ್ಕಾರಕ್ಕೆ ತೀಕ್ಷ್ಣವಾಗಿ ಹೇಳಿದರು.

Advertisement

ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದಿಂದ ಸ್ಪರ್ಧಿಸುವ ವಿಚಾರದ ಬಗ್ಗೆ ಇದೇ ವೇಳೆ ಪ್ರತಿಕ್ರಿಯೆ ನೀಡಿದ ಎಚ್‌.ಡಿ. ದೇವೇಗೌಡರು, ರಾಷ್ಟ್ರೀಯ ಪಕ್ಷಗಳಿಗೆ ಈಗ ಉತ್ತರ ಕರ್ನಾಟಕದ ನೆನಪಾಗಿದೆ.

ಆದರೆ, ಜೆಡಿಎಸ್‌ಗೆ ಮೊದಲಿಂದಲೂ ಉತ್ತರ ಕರ್ನಾಟಕ ಭಾಗದ ಬಗ್ಗೆ ಕಾಳಜಿ ಮತ್ತು ಬದ್ಧತೆ ಇದೆ. ರಾಜಕಾರಣಕ್ಕಾಗಿ ಎಚ್‌.ಡಿ. ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಮನೆ ಮಾಡಿಲ್ಲ. ನಾನೂ ಸಹ ಈಗಾಗಲೇ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಿಗೆ ಭೇಟಿ ಕೊಟ್ಟಿದ್ದೇನೆ. ಮುಂದಿನ ಬಾರಿ ಪ್ರತಿ ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಜೆಡಿಎಸ್‌ ಶಾಸಕರು ಇರುತ್ತಾರೆ ಎಂದರು. 

ಪ್ರಧಾನಿಗೆ ಶುಭಾಷಯ
ಪ್ರಧಾನಿ ನರೇಂದ್ರ ಮೋದಿಯವರಿಗೆ ಜನ್ಮ ದಿನದ ಶುಭಾಷಯಗಳನ್ನು ಹೇಳಿದ ಎಚ್‌.ಡಿ. ದೇವೇಗೌಡರು, ಅವರ ಸೇವೆ ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲಿ ಎಂದು ಹಾರೈಸಿದರು. 

Advertisement

Udayavani is now on Telegram. Click here to join our channel and stay updated with the latest news.

Next