ಬೆಂಗಳೂರು: ಪದವಿ ಪೂರ್ವ ಕಾಲೇಜುಗಳಲ್ಲಿನ ಒಟ್ಟು 1,203 ಉಪನ್ಯಾಸಕ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇತ್ತೀಚೆಗೆ ಪ್ರಕಟಿಸಿದ್ದ ಅಂತಿಮ ಆಯ್ಕೆ ಪಟ್ಟಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಅಂತಿಮ ಆಯ್ಕೆ ಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ಕೆ.ಆರ್.ಯೋಗೀಶ ಸೇರಿದಂತೆ ಹೈದರಾಬಾದ್-ಕರ್ನಾಟಕ ಹೊರತು ಪಡಿಸಿದ ಪ್ರದೇಶದಲ್ಲಿನ ಉದ್ಯೋಗ ವಂಚಿತ ಅಭ್ಯರ್ಥಿಗಳು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ನ್ಯಾ. ಸತ್ಯನಾರಾಯಣ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಾದ ಆಲಿಸಿದ ನ್ಯಾಯಪೀಠ, ರಾಜ್ಯ ಸರ್ಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೋಟಿಸ್ ಜಾರಿಗೊಳಿಸಿ ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿತು. ಅಲ್ಲದೆ, ಸರ್ಕಾರ ಹಾಗೂ ಕೆಇಎ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವವರೆಗೆ ಅಂತಿಮ ಆಯ್ಕೆ ಪಟ್ಟಿಗೆ ತಡೆ ನೀಡಿ ಅರ್ಜಿಯ ವಿಚಾರಣೆಯನ್ನು ಮುಂದೂಡಿತು.
ಅಂತಿಮ ಆಯ್ಕೆ ಪಟ್ಟಿಯಲ್ಲಿ ಕೆಇಎ ಅನುಸರಿಸುವ ಈ ಕ್ರಮವು ಕಾನೂನು ಬಾಹಿರವಾಗಿದೆ. ಇದರಿಂದ ಹೈ-ಕ ಹೊರತುಪಡಿಸಿದ ಜಿಲ್ಲೆಗಳ ಅರ್ಹ ಅಭ್ಯರ್ಥಿಗಳು ಉದ್ಯೋಗ ವಂಚಿತರಾಗಿದ್ದಾರೆ. ಅರ್ಹತೆ ಇಲ್ಲದ ಹೈ-ಕ ಭಾಗದ ಅಭ್ಯರ್ಥಿಗಳು ಕಾನೂನು ಬಾಹಿರವಾಗಿ ಉದ್ಯೋಗಾವಕಾಶ ಪಡೆದಿದ್ದಾರೆ. ಆದ್ದರಿಂದ ಅಂತಿಮ ಆಯ್ಕೆಯ ಪಟ್ಟಿಯನ್ನು ರದ್ದುಪಡಿಸಬೇಕು.
2019ರ ಜೂನ್ 1ರಂದು ಪ್ರಕಟಿಸಿದ ಸಂಭ್ಯಾವ ಪಟ್ಟಿಯ ಪ್ರಕಾರವೇ ನಡೆದುಕೊಳ್ಳುವಂತೆ ಸರ್ಕಾರ ಮತ್ತು ಕೆಇಎಗೆ ನಿರ್ದೇಶಿಸಬೇಕು ಎಂದು ಕೋರಿದರು. ರಾಜದ್ಯ ಪಿಯು ಕಾಲೇಜುಗಳಲ್ಲಿ ವಿವಿಧ ವಿಷಯಗಳ ಸಂಬಂಧಸಿದ ಖಾಲಿಯಿದ್ದ ಒಟ್ಟು 1,203 ಉಪನ್ಯಾಸಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2015ರ ಮೇ 8ರಂದು ಅಧಿಸೂಚನೆ ಹೊರಡಿಸಿತ್ತು.
ನಂತರ 2018ರ ನ.29ರಿಂದ ಡಿ.8ರವರೆಗೆ ಪರೀಕ್ಷೆ ನಡೆಸಿತ್ತು. 2019ರ ಆಗಸ್ಟ್ 26ರಂದು ಸಂಭ್ಯಾವ ಆಯ್ಕೆ ಪಟ್ಟಿ ಪ್ರಕಟಿಸಿತ್ತು. 2019ರ ಅ.15ರಂದು ಕನ್ನಡ ಮತ್ತು ಇತರೆ 18 ವಿಷಯಗಳ ಸಂಬಂಧ ಹಾಗೂ 2019ರ ಅ.25ರಂದು ರಾಜ್ಯಶಾಸ್ತ್ರ ಹಾಗೂ ಇತಿಹಾಸ ವಿಷಯಗಳ ಸಂಬಂಧ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಈ ಆಯ್ಕೆ ಪಟ್ಟಿಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.