ಹುಬ್ಬಳ್ಳಿ: ಮೂಲ ವಿಜ್ಞಾನ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವುದು ಬೋಧಕರ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಡಾ| ಪ್ರಮೋದ ಗಾಯಿ ಹೇಳಿದರು. ರಾಜನಗರದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ “ಟೀಚಿಂಗ್ ಆಫ್ ಹ್ಯುಮಾನಿಟೀಸ್, ಸೋಶಿಯಲ್ ಸಾಯನ್ಸ್, ಕಾಮರ್ಸ್ ಆ್ಯಂಡ್ ಸಾಯನ್ಸ್: ಇಶ್ಯೂಸ್ ಆ್ಯಂಡ್ ಪಸ್ಪೆìಕ್ಟಿವ್ಸ್’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೂಲ ವಿಜ್ಞಾನಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಮೂಲವಿಜ್ಞಾನ ಕಲಿತರೆ ಭವಿಷ್ಯವಿಲ್ಲ ಎಂಬ ಮನೋಭಾವ ಹಲವು ವಿದ್ಯಾರ್ಥಿಗಳಲ್ಲಿದೆ. ವಿದ್ಯಾರ್ಥಿಗಳಿಗೆ ಮೂಲವಿಜ್ಞಾನದ ಮಹತ್ವ ತಿಳಿಸಿಕೊಡುವುದು ಅವಶ್ಯಕ ಎಂದರು. ಉನ್ನತ ಶಿಕ್ಷಣ ಸದ್ಯ ಸಂಕಿರಣ ಸ್ಥಿತಿಯಲ್ಲಿದೆ. ವಿದ್ಯಾರ್ಥಿಗಳಲ್ಲಿ ವಿಷಯ ಆಯ್ಕೆ ಮಾಡಿಕೊಳ್ಳುವಲ್ಲಿ ಗೊಂದಲ ಉಂಟಾಗಿದೆ.
ಬೋಧಕರು ಹಲವಾರು ವಿಷಯಗಳಲ್ಲಿ ಜ್ಞಾನ ಹೊಂದಿರಬೇಕು. ಸಾಮಾಜಿಕ ವಿಜ್ಞಾನ, ವಾಣಿಜ್ಯ ಹಾಗೂ ಮೂಲ ವಿಜ್ಞಾನಗಳ ಬಗ್ಗೆ ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ತಿಳಿಸಬೇಕು. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಪೂರಕ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು. ಮಾಧ್ಯಮಿಕ ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳ ಆಸಕ್ತಿ ಪರಿಗಣಿಸಿ ವಿದ್ಯಾರ್ಥಿಗಳುಸೂಕ್ತ ವೃತ್ತಿಪರ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಮಾರ್ಗದರ್ಶನ ನೀಡಬೇಕು.
ಬೋಧಕರಿಗೆ ಬೋಧನೆಯಲ್ಲಿ ಆಸಕ್ತಿಯಿಲ್ಲದಿದ್ದರೆ ಯಾವುದೇ ಪ್ರಯೋಜನವಿಲ್ಲ. ಕಲಿಸುತ್ತಿರುವ ವಿಷಯದ ಬಗ್ಗೆ ಪ್ರೀತಿ ಇದ್ದರೆ, ಕೈಗೊಂಡ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿದರೆ ಮಾತ್ರ ಪರಿಣಾಮಕಾರಿ ಬೋಧನೆ ಸಾಧ್ಯವಾಗುವುದು ಎಂದರು. ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಗೀತಾ ಎಚ್.ಜಿ ಮಾತನಾಡಿ, ಬೋಧಕರಿಗೆ ಆತ್ಮತೃಪ್ತಿಯಿದ್ದರೆ ಮಾತ್ರ ವಿದ್ಯಾರ್ಥಿಗಳಿಗೆ ಸರಿಯಾಗಿ ಕಲಿಸಲು ಸಾಧ್ಯವಾಗುತ್ತದೆ.
ಕೆಲವರು ಅನಿವಾರ್ಯವಾಗಿ ಬೋಧಕ ವೃತ್ತಿಗೆ ಬಂದಿದ್ದರೆ, ಇನ್ನು ಕೆಲವರು ವೃತ್ತಿಯ ಮೇಲಿನ ಪ್ರೀತಿಯಿಂದಾಗಿ ವೃತ್ತಿ ನಿರ್ವಹಿಸುತ್ತಾರೆ. ವಿದ್ಯಾದಾನ ಶ್ರೇಷ್ಠದಾನ ಎಂದು ಪರಿಗಣಿಸಿಉಪನ್ಯಾಸ ನೀಡಿದರೆ ವಿದ್ಯಾರ್ಥಿಗಳಿಗೆ ಮನಮುಟ್ಟಲು ಸಾಧ್ಯ. ಬೋಧಕರು ತಮ್ಮನ್ನು ಶಿಕ್ಷಣಕ್ಕೆ ಸಮರ್ಪಿಸಿಕೊಳ್ಳುವುದು ಅವಶ್ಯ ಎಂದರು. ವಿಶ್ವನಾಥ ಪಾಟೀಲ, ಪ್ರೇಮಾ ಭಟ್ ಇದ್ದರು. ವೈ.ಎಂ. ಭಜಂತ್ರಿ ಪ್ರಾಸ್ತಾವಿಕ ಮಾತನಾಡಿದರು. ಡಾ| ರಘು ಅಕ್ಮಂಚಿ ವಂದಿಸಿದರು.