Advertisement

ಬಡ್ಡಿ ಸುಳಿಯಲ್ಲಿ ಅನ್ನದಾತರು!​​​​​​​

06:25 AM Oct 23, 2018 | Team Udayavani |

ರಾಯಚೂರು: ಸಾಲಮನ್ನಾದ ನಿರೀಕ್ಷೆಯಲ್ಲಿ ಕಾಲದೂಡುತ್ತಿದ್ದ ರೈತರಿಗೀಗ ಬಡ್ಡಿ ಸಮಸ್ಯೆ ತಲೆದೋರಿದೆ. ವರ್ಷದೊಳಗೆ ಸಾಲ ಮರುಪಾವತಿ ಮಾಡಿದರೆ ಹೆಚ್ಚುವರಿ ಬಡ್ಡಿ ವಿನಾಯಿತಿ ಸಿಗುತ್ತಿದ್ದು, ಈಗ ತೀರುವಳಿ ಮಾಡಬೇಕೇ ಬೇಡವೇ ಎನ್ನುವ ಗೊಂದಲದಲ್ಲಿದ್ದಾರೆ.

Advertisement

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವರ್ಷದೊಳಗೆ ಸಾಲ ತೀರುವಳಿ ಮಾಡಿದರೆ ಬ್ಯಾಂಕ್‌ಗಳು ತಕ್ಷಣವೇ ಹೊಸ ಸಾಲ ಕೊಡುತ್ತವೆ. ಇದರಿಂದ ಶೇ.3ರಷ್ಟು ವಾರ್ಷಿಕ ಬಡ್ಡಿಗೆ ವಿನಾಯಿತಿ ಸಿಗುತ್ತದೆ. ಆದರೆ, ಈಗ ಸಾಲಮನ್ನಾದ ನಿರೀಕ್ಷೆಯಲ್ಲಿರುವ ರೈತರು ತೀರುವಳಿ ಮಾಡಬೇಕೇ ಬೇಡವೇ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಇತ್ತ ಸರ್ಕಾರ ರೈತರಿಗೆ ಸಾಲ ಮರುಪಾವತಿಗೆ ಯಾವುದೇ ಒತ್ತಡ ಹೇರುವಂತಿಲ್ಲ.ನೋಟಿಸ್‌ ನೀಡಿದಲ್ಲಿ ಅಧಿಕಾರಿಗಳ ವಿರುದ್ಧವೇ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದೆ. 

ಇದರಿಂದ ಬ್ಯಾಂಕ್‌ ಅಧಿಕಾರಿಗಳು ರೈತರಿಗೆ ಸಾಲ ತೀರುವಳಿ ಮಾಡಿ ಎಂದಾಗಲಿ, ಬಡ್ಡಿ ಕಟ್ಟಿ ಎಂದಾಗಲಿ ಹೇಳದೆ ತಟಸ್ಥ ನಿಲವು ತೋರುತ್ತಿದ್ದಾರೆ.

ಹಿಂದೆ ಕಾಲ ಮೀರಿದ್ದಕ್ಕಾಗಿ ಅನಗತ್ಯ ಬಡ್ಡಿ ಹಣ ಪಾವತಿಸಿರುವ ರೈತರು ಈ ಬಗ್ಗೆ ಸ್ಪಷ್ಟೀಕರಣ ಪಡೆಯಲು ಬ್ಯಾಂಕ್‌ಗಳಿಗೆ ಅಲೆಯುತ್ತಿದ್ದಾರೆ. ಹೀಗೆ ಬಂದ ರೈತರಿಗೆ ಬ್ಯಾಂಕ್‌ ಅ ಧಿಕಾರಿಗಳು ಮಾತ್ರ ನಿಮ್ಮಿಷ್ಟ, ನೀವಾಗಿ ಹಣ ಪಾವತಿಸಿದರೆ ಮಾತ್ರ ನಾವು ತೆಗೆದುಕೊಳ್ಳುತ್ತೇವೆ, ಇಲ್ಲವಾದರೆ ಇಲ್ಲ ಎನ್ನುತ್ತಿದ್ದಾರೆ. ಕನಿಷ್ಠ ಪಕ್ಷ ಸಾಲ ಮನ್ನಾ ಫಲಾನುಭವಿಗಳಿಗೆ ಬಡ್ಡಿ ವಿನಾಯಿತಿ ಸಿಗುವುದೇ ಎಂದರೂ ಅದಕ್ಕೂ ಬ್ಯಾಂಕ್‌ ಅ ಧಿಕಾರಿಗಳು ನಿರುತ್ತರರಾಗುತ್ತಾರೆ. ಕಾರಣ ಕೇಳಿದರೆ ಸರ್ಕಾರ ನಮಗೆ ಯಾವುದೇ ನಿರ್ದೇಶನ ನೀಡಿಲ್ಲ ಎಂದು ಜಾರಿಕೊಳ್ಳುತ್ತಿದ್ದಾರೆ.

ನಿರ್ದೇಶನಗಳೇ ಬಂದಿಲ್ಲ: ಸಾಲ ಮನ್ನಾ ಘೋಷಣೆಯಾಗಿ 4 ತಿಂಗಳು ಕಳೆದಿದ್ದು, ಸರ್ಕಾರದಿಂದ ಬ್ಯಾಂಕ್‌ಗಳಿಗೆ ಈವರೆಗೆ ಸೂಕ್ತ ನಿರ್ದೇಶನಗಳೇ ಬಂದಿಲ್ಲ ಎನ್ನುವುದು ಅ ಧಿಕಾರಿಗಳ ವಿವರಣೆ. ಆದರೆ, ಸಾಲ ಮರುಪಾವತಿಗೆ ಒತ್ತಾಯ ಮಾಡದಂತೆ ಸೂಚನೆ ಬಂದಿದೆ. ಅದನ್ನು ಎಲ್ಲ ಬ್ಯಾಂಕ್‌ಗಳು ಪಾಲಿಸುತ್ತಿವೆ. ಸಾಲ ಮನ್ನಾ ಯೋಜನೆಗೆ ಅನ್ವಯವಾಗುವ ನಿರ್ದೇಶನಗಳು ಇಲ್ಲದ ಕಾರಣ ಬ್ಯಾಂಕ್‌ಗಳಿಗೆ ಸಮಸ್ಯೆ ತಲೆದೋರಿದೆ. ಇದರಿಂದ ಸರ್ಕಾರದ ನಿರ್ದೇಶನಕ್ಕಾಗಿ ಕಾದು ಕೂಡುವಂತಾಗಿದೆ.

Advertisement

ಗೊಂದಲದ ಗೂಡು: ಸಹಕಾರಿ ಬ್ಯಾಂಕ್‌ಗಳಲ್ಲಿ ಈಗಾಗಲೇ ಒಂದು ಲಕ್ಷ ರೂ. ಸಾಲ ಮನ್ನಾ ಪ್ರಕ್ರಿಯೆ ನಡೆದಿದೆ. ಆದರೆ, ಅಲ್ಲೂ ಕೆಲ ನಿಯಮಗಳನ್ನು ಹೇಳುತ್ತಿರುವ ಬ್ಯಾಂಕ್‌ ಸಿಬ್ಬಂದಿ ರೈತರನ್ನು ಅಲೆದಾಡಿಸುತ್ತಿರುವ ಆರೋಪಗಳಿವೆ. ಆದರೆ, ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮಾತ್ರ ಗೊಂದಲದ ಗೂಡಾಗಿ ಪರಿಣಮಿಸಿದೆ. ಸಾಲ ಮನ್ನಾ ವ್ಯಾಪ್ತಿಗೆ ಬರಬೇಕಾದರೆ ಸಾಕಷ್ಟು ನಿಯಮಗಳು ಅನ್ವಯಿಸುತ್ತವೆ ಎಂಬ ಮಾತುಗಳು ರೈತರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಸರ್ಕಾರ ಬಡ್ಡಿ ವಿಚಾರದಲ್ಲಾದರೂ ಸ್ಪಷ್ಟನೆ ನೀಡಲಿ ಎಂಬುದು ರೈತರ ಒತ್ತಾಯ.

ಸರ್ಕಾರ ನಮ್ಮಿಂದ ಕೇಳಿದ್ದ ಮಾಹಿತಿ ನೀಡಿದ್ದೇವೆ. ಆದರೆ, ಸಾಲಮನ್ನಾದ ನಿರ್ದೇಶನಗಳನ್ನೇ ನೀಡಿಲ್ಲ. ಹೀಗಾಗಿ ನಾವು ರೈತರಿಗೆ ಯಾವುದೇ ಆಶ್ವಾಸನೆ ನೀಡಲು ಬರುವುದಿಲ್ಲ. ಅಲ್ಲದೇ ರೈತರಿಗೆ ಸಾಲ ಮರುಪಾವತಿಗಾಗಲಿ, ಬಡ್ಡಿ ಪಾವತಿಗಾಗಲಿ ಒತ್ತಾಯ ಮಾಡುತ್ತಿಲ್ಲ.
– ರಂಗನಾಥ ನೂಲಕರ್‌, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ

ಸಹಕಾರಿ ಬ್ಯಾಂಕ್‌ಗಳ ಸಾಲ ಮನ್ನಾ ಮಾಡುತ್ತಿರುವುದು ಸಮಾಧಾನಕರ ಸಂಗತಿ. ಆದರೆ, ರಾಷ್ಟ್ರೀಕೃತ ಬ್ಯಾಂಕ್‌ಗಳ ಬಗ್ಗೆಯೇ ಸಾಕಷ್ಟು ದೂರುಗಳಿವೆ. ತೀರುವಳಿ, ಮರುಪಾವತಿ ಎಲ್ಲವೂ ಸ್ಥಗಿತಗೊಂಡಿದೆ. ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ತಕ್ಷಣಕ್ಕೆ ತೆಗೆದುಕೊಳ್ಳಬೇಕು. ಇಲ್ಲವಾದರೆ ರೈತರಿಗೆ ಹೊರೆ ಬೀಳಲಿದೆ. ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗೆ ಸಮಯಾವಕಾಶ ಕೇಳಿದ್ದೇವೆ.
– ಚಾಮರಸ ಮಾಲಿಪಾಟೀಲ, ರೈತ ಸಂಘದ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next