Advertisement

ಸಿಗಲಿದೆ ಬಡ್ಡಿ ರಹಿತ ಸಾಲ: ಹೈನು, ಮೀನುಗಾರಿಕೆಗೆ ಪ್ರೋತ್ಸಾಹ 2 ಲಕ್ಷ ರೂ.ವರೆಗೆ ಲಭ್ಯ

02:15 AM Aug 03, 2020 | Hari Prasad |

ಬೆಂಗಳೂರು: ಕೋವಿಡ್ 19 ಸಂಕಷ್ಟದಿಂದ ಉದ್ಯೋಗ ಕಳೆದುಕೊಂಡು ಹಳ್ಳಿಗಳಿಗೆ ತೆರಳಿರುವವರಿಗೆ ಉದ್ಯೋಗ ಕಂಡುಕೊಳ್ಳಲು ಸಹಕಾರ ಇಲಾಖೆ ಹೊಸ ಅವಕಾಶ ಕಲ್ಪಿಸಿದೆ. ಹೈನುಗಾರಿಕೆ ಮತ್ತು ಮೀನುಗಾರಿಕೆಯಲ್ಲಿ ತೊಡಗುವ ಆಸಕ್ತರಿಗೆ 2 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡುವ ಹೊಸ ಯೋಜನೆಗೆ ಚಾಲನೆ ನೀಡಲಾಗಿದೆ.

Advertisement

ಇದುವರೆಗೆ ಕೃಷಿ ಉದ್ದೇಶಕ್ಕಾಗಿ ಬೆಳೆ ಸಾಲವನ್ನು ಮಾತ್ರ ಶೂನ್ಯ ಬಡ್ಡಿದರದಲ್ಲಿ ರೈತರ ಕೃಷಿ ಜಮೀನು ಆಧರಿಸಿ 3 ಲಕ್ಷ ರೂ. ವರೆಗೆ ನೀಡಲಾಗುತ್ತಿತ್ತು.

ಆದರೆ ರಾಜ್ಯ ಸರಕಾರವು ಕೋವಿಡ್ 19 ಸಂಕಷ್ಟದ ಸಂದರ್ಭದಲ್ಲಿ ಅನೇಕರು ಉದ್ಯೋಗವಿಲ್ಲದೆ ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡಿದೆ.

ಕೃಷಿಗೆ ಪೂರಕವಾಗಿರುವ ಹೈನುಗಾರಿಕೆಯನ್ನು ಕೈಗೊಳ್ಳಲು ಮತ್ತು ಈಗಾಗಲೇ ಹೈನುಗಾರಿಕೆಯಲ್ಲಿ  ತೊಡಗಿರುವವರು ಅದನ್ನು ಅಭಿವೃದ್ಧಿಪಡಿಸಿಕೊಳ್ಳಲು ಅನುಕೂಲವಾಗುವಂತೆ ದುಡಿಯುವ ಬಂಡವಾಳವಾಗಿ 2 ಲಕ್ಷ ರೂ.ವರೆಗೆ ಸಾಲ ನೀಡಲು ನಿರ್ಧರಿಸಿದೆ.

ಬೆಳೆ ಸಾಲದೊಂದಿಗೆ ಸೇರ್ಪಡೆ
ರಾಜ್ಯ ಸರಕಾರ ಈಗಾಗಲೇ ರೈತರಿಗೆ 3 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ನೀಡುತ್ತಿದೆ. ಇನ್ನು ರೈತರು ಕೃಷಿಗೆ ಪೂರಕವಾಗಿ ಹೈನುಗಾರಿಕೆ ಅಥವಾ ಮೀನುಗಾರಿಕೆಯನ್ನು ಕೈಗೊಳ್ಳಲು 2 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಿದೆ.

Advertisement

ಕೃಷಿ ಚಟುವಟಿಕೆಗಳಿಗೆ ರೈತರು ಪಡೆದ ಬೆಳೆ ಸಾಲವೂ ಸೇರಿ 3 ಲಕ್ಷ ರೂ. ಮೀರದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಅಂದರೆ, ರೈತರು ಬೆಳೆಸಾಲವಾಗಿ ಒಂದು ಲಕ್ಷ ರೂ. ಸಾಲ ಪಡೆದಿದ್ದರೆ ಹೈನುಗಾರಿಕೆ ಅಥವಾ ಮೀನುಗಾರಿಕೆ ಕೈಗೊಳ್ಳಲು ಶೂನ್ಯ ಬಡ್ಡಿದರದಲ್ಲಿ 2 ಲಕ್ಷ ರೂ. ಸಾಲ ಪಡೆಯಬಹುದು.

1.60 ಲಕ್ಷ ರೂ.ವರೆಗೆ ಸಾಲ ಪಡೆಯುವ ರೈತರು ಜಮೀನು ಅಥವಾ ಇನ್ನಾವುದೇ ಆಸ್ತಿ ಖಾತರಿ ನೀಡುವ ಅಗತ್ಯವಿಲ್ಲ. ರೈತರ ಆಧಾರ್‌ ಕಾರ್ಡ್‌ ಅವರ ಉಳಿತಾಯ ಖಾತೆಗೆ ಲಿಂಕ್‌ ಮಾಡಿ ಸಾಲ ಕೊಡಲು ನಿರ್ದೇಶನ ನೀಡಲಾಗಿದೆ. ಅದಕ್ಕಿಂತ ಹೆಚ್ಚಿನ ಸಾಲ ಪಡೆಯುವವರಿಗೆ ರೈತ, ಪತ್ತಿನ ಸಹಕಾರ ಸಂಘ ಮತ್ತು ಹಾಲು ಒಕ್ಕೂಟ- ಮೂವರೂ ಜಂಟಿ ಖಾತರಿ ನೀಡಿ ಸಾಲ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ನಿಯಮ ಅನ್ವಯ
ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಡಿಸಿಸಿ ಬ್ಯಾಂಕ್‌ಗಳ ಮೂಲಕ ಸಾಲ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸಹಕಾರ ಸಂಘಗಳು ರೈತರು ಅಥವಾ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಕೇಂದ್ರ ಸರಕಾರದ ನಿಯಮದಂತೆ ಶೇ. 7ರ ಬಡ್ಡಿ ದರದಲ್ಲಿ ಸಾಲ ನೀಡಬಹುದು. ಇದನ್ನು ನಿಗದಿತ ಅವಧಿಯಲ್ಲಿ ಮರುಪಾವತಿಸುವವರಿಗೆ ಕೇಂದ್ರ ಸರಕಾರದ ಶೇ.3ರ ಬಡ್ಡಿ ಸಹಾಯಧನ ಮತ್ತು ರಾಜ್ಯ ಸರಕಾರದ ಶೇ. 4 ಬಡ್ಡಿ ಸಹಾಯ ಧನವನ್ನು ಮರು ಪಾವತಿಸುವುದರಿಂದ ರೈತರಿಗೆ ಶೂನ್ಯ ಬಡ್ಡಿದರದಲ್ಲಿಯೇ ಸಾಲ ನೀಡಿದಂತಾಗುತ್ತದೆ. ಈ ಲೆಕ್ಕಾಚಾರದ ಮೂಲಕ ಯೋಜನೆ ಅನುಷ್ಠಾನಗೊಳಿಸಲು ಸಹಕಾರ ಇಲಾಖೆ ನಿರ್ಧರಿಸಿದೆ.

25 ಲಕ್ಷ  ಸದಸ್ಯರು
ರಾಜ್ಯದಲ್ಲಿ 14 ಹಾಲು ಒಕ್ಕೂಟಗಳಿದ್ದು, ಸುಮಾರು 25 ಲಕ್ಷ ಸದಸ್ಯರಿದ್ದಾರೆ. ಹಾಲು ಒಕ್ಕೂಟದ ಸದಸ್ಯರಿಗೆ ಶೂನ್ಯ ಬಡ್ಡಿ ಸಾಲ ಆದ್ಯತೆಯಲ್ಲಿ ಸಿಗಲಿದೆ. 2020-21ನೇ ಸಾಲಿನಲ್ಲಿ ಹೈನುಗಾರಿಕೆ ಕೈಗೊಳ್ಳಲು ಸರಕಾರವು ಸುಮಾರು ನೂರು ಕೋಟಿ ರೂ. ಮೀಸಲಿರಿಸಿದ್ದು, ಆರಂಭದಲ್ಲಿ ಹೈನುಗಾರಿಕೆಯಲ್ಲಿ ತೊಡಗಿರುವ ಸುಮಾರು 20 ಸಾವಿರ ರೈತರಿಗೆ ಸಾಲ ನೀಡಲು ತೀರ್ಮಾನಿಸಲಾಗಿದೆ. ಬೇಡಿಕೆ ಆಧಾರದಲ್ಲಿ ಎಲ್ಲ ಹಾಲು ಒಕ್ಕೂಟ ಸದಸ್ಯರಿಗೆ ಶೂನ್ಯ ಬಡ್ಡಿ ದರ ಸಾಲ ಯೋಜನೆ ವಿಸ್ತರಿಸಲು ಸರಕಾರ ನಿರ್ಧರಿಸಿದೆ.

ಮೀನುಗಾರಿಕೆಗೂ ಶೂನ್ಯ ಬಡ್ಡಿ  ಸಾಲ
ರಾಜ್ಯದಲ್ಲಿ  ಮೀನುಗಾರಿಕೆ ಕೈಗೊಳ್ಳಲು 2 ಲಕ್ಷ ರೂ. ವರೆಗೆ ಶೂನ್ಯ ಬಡ್ಡಿದರದಲ್ಲಿ  ಸಾಲ ನೀಡಲು ಸಹಕಾರ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಸುಮಾರು 6 ಸಾವಿರ ಮಂದಿ ಮೀನುಗಾರ ಸಹಕಾರ ಸಂಘಗಳ ಸದಸ್ಯರಾಗಿದ್ದು, ಸಾಲಕ್ಕಾಗಿ ಈ ವರ್ಷ ಸುಮಾರು 50 ಕೋಟಿ ರೂ. ಮೀಸಲಿಡಲಾಗಿದೆ. ಬಲೆ, ನಾಡದೋಣಿ ಖರೀದಿ, ಮಾರುಕಟ್ಟೆಗೆ ಪೂರಕ ವಸ್ತುಗಳ ಖರೀದಿಗೆ ಅನುಕೂಲ ಕಲ್ಪಿಸಲು ಸರಕಾರ ನಿರ್ಧರಿಸಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಮೀನುಗಾರರಿಗೆ ಅನುಕೂಲವಾಗಲಿದೆ.

ಕಿಸಾನ್‌ ಕ್ರೆಡಿಟ್‌ ಮೂಲಕ ವಿತರಣೆ
ಸಹಕಾರಿ ಬ್ಯಾಂಕ್‌ಗಳಿಂದ ರೈತರಿಗೆ ಸಾಲವನ್ನು ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ನೀಡುವಂತೆ ಇಲಾಖೆಯು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ಇದರಿಂದ ರೈತರು ಸಾಲ ಪಡೆದಿದ್ದರೂ ತಮಗೆ ಅಗತ್ಯವಿದ್ದಾಗ ಮಾತ್ರ ಬ್ಯಾಂಕ್‌ನಿಂದ ಬೇಕಾದಷ್ಟು  ಹಣ ಪಡೆಯಲು ಸಾಧ್ಯವಾಗುತ್ತದೆ.

ಕೃಷಿಗೆ ಪೂರಕವಾಗಿ ಹೈನುಗಾರಿಕೆ ಅಥವಾ ಮೀನುಗಾರಿಕೆ ಕೈಗೊಳ್ಳುವ ರೈತರಿಗೆ ಅನುಕೂಲವಾಗಲೆಂದು ಶೂನ್ಯ ಬಡ್ಡಿ ದರದಲ್ಲಿ  ಸಾಲ ಕೊಡುವ ಯೋಜನೆ ಆರಂಭಿಸಿದ್ದೇವೆ. ಇದು ದೇಶದಲ್ಲಿಯೇ ಪ್ರಥಮ. ಕೋವಿಡ್ 19 ಸಂಕಷ್ಟಕ್ಕೆ  ಸಿಲುಕಿ ತೊಂದರೆಗೊಳಗಾದವರಿಗೆ ಬದುಕು ಕಟ್ಟಿಕೊಳ್ಳಲು ಇದರಿಂದ ಅನುಕೂಲವಾಗುತ್ತದೆ. ಸಾಲ ಬಯಸಿ ಬರುವ ಅರ್ಜಿಗಳನ್ನು ತಿರಸ್ಕರಿಸದಂತೆ ಸೂಚಿಸಲಾಗಿದೆ.
– ಆರ್‌. ಶಿವಪ್ರಕಾಶ್‌, ಸಹಕಾರ ಸಂಘಗಳ ಅಪರ ನಿಬಂಧಕರು

Advertisement

Udayavani is now on Telegram. Click here to join our channel and stay updated with the latest news.

Next