ಉಡುಪಿ: ಧೈರ್ಯ, ವಿಶ್ವಾಸದಿಂದ ಯಾವುದೇ ಸಮಸ್ಯೆ ಎದುರಿಸ ಬಹುದು ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಮಾ. 16ರಂದು ಪಿಪಿಸಿ ಕಾಲೇಜಿನಲ್ಲಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿ, ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ಧೆ “ಸಂಧ್ಯಾವಾಣಿ’ ಉದ್ಘಾಟನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ ಹಿಂದೆ ಮನೆ ಮನೆಗಳಲ್ಲಿ ಕೇಳುತ್ತಿದ್ದ ತಾಳದ ಸದ್ದು ಇಂದು ಕಡಿಮೆಯಾಗಿದೆ. ಮಕ್ಕಳಿಗೆ ಅವಕಾಶ ಹಿಡಿತದಲ್ಲಿಟ್ಟುಕೊಂಡು ಸ್ವಾತಂತ್ರ್ಯ ನೀಡಬೇಕು.
ಆಗ ಮಕ್ಕಳಲ್ಲಿರುವ ಬೌದ್ಧಿಕ ಪ್ರೌಢಿಮೆ ಅನಾವರಣಗೊಳ್ಳುತ್ತದೆ. ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಿದಾಗ ಮಾತ್ರ ನಾವು ಬೆಳೆಯುತ್ತೇವೆ ಎಂದರು.
ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಸುಕನ್ಯಾ ಮೇರಿ ಜೆ. ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪೊಲೀಸ್ ಅಧೀಕ್ಷಕ ಹೃಷಿಕೇಶ್ ಸೋನಾವಾನೆ, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯ ಪರ್ಕಳ, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಪ್ರದೀಪ್ ಕುಮಾರ್, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಭಾಗ್ಯಾ ಪಡಿಯಾರ್, ಕಾರ್ಯದರ್ಶಿ ಆದಿತ್ಯ ಪೈ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ| ರಾಮಕೃಷ್ಣ ಉಡುಪ ಸ್ವಾಗತಿಸಿದರು. ತೃತೀಯ ಬಿ.ಕಾಂ. ವಿದ್ಯಾರ್ಥಿ ತೇಜೇಶ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ತೃತೀಯ ಬಿ.ಕಾಂ.ನ ಸಂಪತ್ ಕುಮಾರ್ ವಂದಿಸಿದರು.
ಪಠ್ಯೇತರ ಚಟುವಟಿಕೆಯಿಂದ ಆತ್ಮವಿಶ್ವಾಸ ವೃದ್ಧಿ
ಬರೇ ಪುಸ್ತಕಗಳ ಓದು ಜೀವನಕ್ಕೆ ಪ್ರಯೋಜನವಾಗದು. ಪಠ್ಯೇತರ ಚಟುವಟಿಕೆ ಮಾತ್ರ ನೆನಪಿನಲ್ಲಿ ಅಚ್ಚಾಗಿ ಉಳಿದು ಬಿಡುತ್ತದೆ. ಇದು ಜೀವನ ಪರ್ಯಂತ ಆತ್ಮವಿಶ್ವಾಸ ನೀಡುತ್ತದೆ.
– ಪ್ರಮೋದ್ ಮಧ್ವರಾಜ್, ಸಚಿವ