ಮಹಾನಗರ: ಕೇರಳ ಸರಕಾರ ಕಥಕ್ಕಳಿಯನ್ನು ರಾಜ್ಯದ ಅಧಿಕೃತ ಕಲೆಯನ್ನಾಗಿ ಘೋಷಿಸಿದಂತೆ ರಾಜ್ಯ ಸರಕಾರ ಯಕ್ಷಗಾನವನ್ನು ರಾಜ್ಯದ ಅಧಿಕೃತ ಕಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದ್ದಾರೆ.
ಎಸ್‌ಡಿಎಂ ಕಾನೂನು ಮಹಾ ವಿದ್ಯಾಲಯ ಹಾಗೂ ಎಸ್‌ಡಿಎಂ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರ ವತಿಯಿಂದ ನಗರದ ಎಸ್‌ಡಿಎಂ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಆರಂಭವಾದ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆ ‘ಯಕ್ಷೋತ್ಸವ 2018’ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಕೃತಿ, ಆಚಾರ-ವಿಚಾರಗಳ ಮೂಲಕ ಜಗತ್ತಿನಲ್ಲೇ ಹೆಸರು ಪಡೆದಿರುವ ಭಾರತದ ಬಗ್ಗೆ ನಮ್ಮೆಲ್ಲರಿಗೂ ಹೆಮ್ಮೆ ಇದೆ. ಯಕ್ಷಗಾನ ಸೇರಿದಂತೆ ಬಹುತೇಕ ಕಲೆಗಳು ನಮ್ಮ ದೇಶ ಹೊರತುಪಡಿಸಿಯೂ ವಿದೇಶಗಳಲ್ಲಿ ಹೊಸ ಛಾಪು ಮೂಡಿಸಿದೆ. ಯುವ ಸಮುದಾಯದಲ್ಲಿ ಈ ಕಲೆ ಬಗ್ಗೆ ಇನ್ನಷ್ಟು ಆಸಕ್ತಿ ಮೂಡುವಂತಾಗಲು ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಇಂತಹ ಸ್ಪರ್ಧೆ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಎಸ್‌ಡಿಎಂ ಕಾನೂನು ಮಹಾ ವಿದ್ಯಾಲಯದ ಪ್ರಾಂಶುಪಾ ಡಾ| ತಾರಾನಾಥ್, ಯಕ್ಷೋತ್ಸವ ವಿದ್ಯಾರ್ಥಿ ಸಂಚಾಲಕರಾದ ಅಶ್ವಿನ್, ಸದಾನಂದ ಆಸ್ರಣ್ಣ ಉಪಸ್ಥಿತರಿದ್ದರು. ಯಕ್ಷೋತ್ಸವ ಸಂಚಾಲಕ ಪ್ರೊ| ನರೇಶ್ ಮಲ್ಲಿಗೆಮಾಡು ಸ್ವಾಗತಿಸಿದರು. ಮಣಿಕಂಠ ವಂದಿಸಿದರು. ನಿತಿನ್ ಕಾರ್ಯಕ್ರಮ ನಿರೂಪಿಸಿದರು.
ಸದುಪಯೋಗಿಸಿ
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ಎಸ್‌ಡಿಎಂ ಉದ್ಯಮಾಡಳಿತ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ| ದೇವರಾಜ್ ಕೆ., 28 ವರ್ಷಗಳಿಂದ ಯುವ ಸಮುದಾಯದಲ್ಲಿ ಯಕ್ಷಗಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.