Advertisement

ಬ್ಯಾಂಕ್‌ ವ್ಯವಹಾರದ ಮೇಲೆ ತೀವ್ರ ನಿಗಾ

06:00 AM Apr 08, 2018 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಾಗಿರುವ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಒತ್ತು ನೀಡಿರುವ ಕೇಂದ್ರ ಚುನಾವಣಾ ಆಯೋಗ ಅಕ್ರಮ ಹಣ ಸಾಗಣೆ, ಹಂಚಿಕೆ ತಡೆಗಾಗಿ ಬ್ಯಾಂಕ್‌ಗಳಲ್ಲಿ ಹಣ ವಿತ್‌ಡ್ರಾ, ಠೇವಣಿ ಮೇಲೂ ಹದ್ದಿನ ಕಣ್ಣಿಟ್ಟಿದೆ.

Advertisement

ಈ ಸಂಬಂಧ ಆಯೋಗದ ಸೂಚನೆಯಂತೆ ರಾಜ್ಯ ಮಟ್ಟದ ಬ್ಯಾಂಕರ್ ಸಮಿತಿಯು (ಎಸ್‌ಎಲ್‌ಬಿಸಿ) ಒಂದು ಲಕ್ಷ ರೂ. ಹಾಗೂ 10 ಲಕ್ಷ ರೂ.ಗಿಂತ ಹೆಚ್ಚು ಹಣ ಠೇವಣಿ, ಡ್ರಾ ಮಾಡುವ ಖಾತೆದಾರರ ವಿವರ ನೀಡುವಂತೆ ಎಲ್ಲ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ಅದರಂತೆ ನಿತ್ಯ ದೊಡ್ಡ ಮೊತ್ತದ ನಗದು ವ್ಯವಹಾರ ನಡೆಸುವ ಸುಮಾರು 6,000 ಖಾತೆದಾರರ ವಿವರ ಪಡೆಯುತ್ತಿರುವ ಸಮಿತಿ ಇದನ್ನು ಆಯೋಗಕ್ಕೆ ಸಲ್ಲಿಸುತ್ತಿದೆ.

ದೊಡ್ಡ ಮೊತ್ತದ ಮೇಲೆ ಕಣ್ಣು: ಈ ಸಂಬಂಧ ಆಯೋಗದ ನಿರ್ದೇಶನದಂತೆ ಎಸ್‌ಎಲ್‌ಬಿಸಿ ರಾಜ್ಯದ ಎಲ್ಲ ಬ್ಯಾಂಕ್‌ಗಳಿಗೆ ಕೆಳಕಂಡ ಸೂಚನೆ ನೀಡಿದೆ. ಬ್ಯಾಂಕ್‌ನಿಂದ ಬ್ಯಾಂಕ್‌ಗೆ, ಎಟಿಎಂ ಕೇಂದ್ರ ಇತರೆಡೆ ಹಣ ಸಾಗಿಸುವಾಗ ಸೂಕ್ತ ದಾಖಲೆ ವಿವರ ಇಟ್ಟುಕೊಂಡಿರಬೇಕು. ಅನುಮಾನಾಸ್ಪದ ವ್ಯವಹಾರ ಕಂಡುಬಂದರೆ ವರದಿ ಮಾಡಬೇಕು. ಮುಖ್ಯವಾಗಿ ಒಂದು ಲಕ್ಷ ರೂ. ಹಾಗೂ 10 ಲಕ್ಷ ರೂ. ಮೊತ್ತದ ಹಣ ವಿತ್‌ಡ್ರಾ, ಠೇವಣಿ ವಿವರ ಸಲ್ಲಿಸುವಂತೆ ಸೂಚನೆ ನೀಡಿದೆ.

ಮಾ.27ರಿಂದಲೇ ಜಾರಿ: ನೀತಿ ಸಂಹಿತೆ ಜಾರಿಯಾದ ಮಾ.27ರಿಂದಲೇ ಎಸ್‌ಎಲ್‌ಬಿಸಿ ಸಮಿತಿಯು ಬ್ಯಾಂಕ್‌ಗಳಿಂದ ಮಾಹಿತಿ ಸಂಗ್ರಹಿಸಲಾರಂಭಿಸಿದೆ. ಪ್ರತಿ ಬ್ಯಾಂಕ್‌ಗಳಿಂದ ನಿತ್ಯ ಪಡೆಯುವ ಮಾಹಿತಿಯನ್ನು ಕ್ರೋಡೀಕರಿಸಿ ಆಯೋಗಕ್ಕೆ ರವಾನಿಸುವ ಕಾರ್ಯ ಸದ್ದಿಲ್ಲದೇ ನಡೆದಿದೆ. ಆಯೋಗವು ಇವುಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ. ಅಗತ್ಯಬಿದ್ದರೆ ಈ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ರವಾನಿಸಿ ಹೆಚ್ಚಿನ ಪರಿಶೀಲನೆಗೆ ಒಳಪಡಿಸಲು ಸೂಚಿಸಬಹುದಾಗಿದೆ.

ಪಾರದರ್ಶಕತೆ ಇರಬೇಕು: ಆಯೋಗದ ಸೂಚನೆಯಂತೆ ಬ್ಯಾಂಕ್‌ಗಳು ಖಾತೆದಾರರ ವಿವರ ಸಲ್ಲಿಸುತ್ತಿದ್ದು, ಈ ಎಲ್ಲ ಖಾತೆದಾರರ ವಹಿವಾಟಿನ ಬಗ್ಗೆ ಅನುಮಾನ ವ್ಯಕ್ತಪಡಿಸಲು ಸಾಧ್ಯವಿಲ್ಲ. ಕಳೆದ ಎರಡು ತಿಂಗಳ ವಹಿವಾಟು ಪರಿಶೀಲಿಸಿ ಹೆಚ್ಚಿನ ವ್ಯತ್ಯಾಸವಿದ್ದರಷ್ಟೇ ಅಂತಹ ಖಾತೆಗಳ ವಿವರ ಸಲ್ಲಿಸಲಾಗುತ್ತದೆ. ಆಸ್ತಿ, ವಾಹನ ಮಾರಾಟ, ವ್ಯಾಪಾರ- ವ್ಯವಹಾರಕ್ಕೆ ಸಂಬಂಧಿಸಿ ನಿತ್ಯ ಬ್ಯಾಂಕ್‌ ವ್ಯವಹಾರದ ಬಗ್ಗೆ ಸೂಕ್ತ ದಾಖಲೆ ನೀಡಿ ಪಾರದರ್ಶಕತೆ ಕಾಪಾಡಿಕೊಂಡರೆ ಯಾವುದೇ ತೊಂದರೆ ಇಲ್ಲ. ಆಯೋಗದ ಸೂಚನೆಯಂತೆ ವಿವರ ಸಲ್ಲಿಸಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Advertisement

ಖಾತೆದಾರರ ವಿವರ ರವಾನೆ
ರಾಜ್ಯದಲ್ಲಿ ಒಟ್ಟು 47 ಬ್ಯಾಂಕ್‌ಗಳಿದ್ದು, ಸುಮಾರು 10,900 ಶಾಖೆಗಳಿವೆ. ಸರಾಸರಿ 2,500 ಖಾತೆಗಳಲ್ಲಿ ನಿತ್ಯ ಒಂದು ಲಕ್ಷ ರೂ.ಗಿಂತ ಹೆಚ್ಚು ಹಣ ಡ್ರಾ, ಠೇವಣಿ ನಡೆಯುತ್ತಿದ್ದು, ಆ ವಿವರ ಆಯೋಗಕ್ಕೆ ರವಾನೆಯಾಗುತ್ತಿದೆ. ನಿತ್ಯ ಸರಾಸರಿ 3,500 ಖಾತೆಗಳಲ್ಲಿ 10 ಲಕ್ಷ ರೂ.ಗಿಂತ ಹೆಚ್ಚು ಹಣ ಡ್ರಾ, ಠೇವಣಿಯಾಗುತ್ತಿದ್ದು, ಈ ವಿವರ ಸಲ್ಲಿಸಲಾಗುತ್ತಿದೆ. ಆ್ಯಪ್‌ ಆಧಾರಿತ ಹಣ ವರ್ಗಾವಣೆ ಹಾಗೂ ಡಿಜಿಟಲ್‌ ವ್ಯವಹಾರದಡಿ ಹಣ ವರ್ಗಾವಣೆಗೆ ನಿಗಾ ವಹಿಸಲು ಸಾಧ್ಯವಾಗಿಲ್ಲ. ಆದರೆ ಈ ವ್ಯವಹಾರ ಖಾತೆ ವಿವರ ಪತ್ತೆ ಹಚ್ಚಬಹುದಾಗಿದೆ. ವರ್ಗಾವಣೆಯ ಉದ್ದೇಶ ತಿಳಿಯುವುದು ಕಷ್ಟ ಎಂದು ಮೂಲಗಳು ಹೇಳಿವೆ.

ಯಾವ ವ್ಯವಹಾರದ ಮೇಲೆ ನಿಗಾ?
– ಒಂದು ಲಕ್ಷ ರೂ.ಗಿಂತ ಹೆಚ್ಚು ಹಣ ವಿತ್‌ಡ್ರಾ/ ಠೇವಣಿ ಮಾಡಿದ ಖಾತೆದಾರರ ವಿವರ
– 10 ಲಕ್ಷ ರೂ.ಗಿಂತ ಹೆಚ್ಚು ಹಣ ಡ್ರಾ/ ಠೇವಣಿ ಮಾಡಿದ ಖಾತೆದಾರರ ವಿವರ
– ಆರ್‌ಟಿಜಿಎಸ್‌, ಎನ್‌ಇಎಫ್ಟಿ  ಮೂಲಕ ಒಂದು ಖಾತೆಯಿಂದ ಹತ್ತಾರು ಖಾತೆಗಳಿಗೆ ಹಣ ವರ್ಗಾವಣೆ
– ಸ್ವಸಹಾಯ ಸಂಘಗಳು, ಜಂಟಿ ಹೊಣೆಗಾರಿಕಾ ಗುಂಪುಗಳ (ಎಸ್‌ಎಲ್‌ಜಿ) ಸಂಶಯಾಸ್ಪದ ವ್ಯವಹಾರ
– ಅಭ್ಯರ್ಥಿ, ಕುಟುಂಬ, ಅವಲಂಬಿತರ ಬ್ಯಾಂಕ್‌ ಖಾತೆಗೆ ಒಂದು ಲಕ್ಷ ರೂ.ಗಿಂತ ಹೆಚ್ಚು ಹಣ ಠೇವಣಿ/ ಡ್ರಾ
– ಯಾವುದೇ ರಾಜ್ಯಕೀಯ ಪಕ್ಷದ ಬ್ಯಾಂಕ್‌ ಖಾತೆಗೆ ಒಂದು ಲಕ್ಷ ರೂ.ಗಿಂತ ಹೆಚ್ಚು ಹಣ ಠೇವಣಿ, ಡ್ರಾ
– ಹಿಂದಿನ ಎರಡು ತಿಂಗಳಲ್ಲಿನ ವ್ಯವಹಾರಕ್ಕೆ ಭಿನ್ನವಾಗಿ ಅನುಮಾನಾಸ್ಪದ ವ್ಯವಹಾರ ಕಂಡುಬಂದರೆ

– ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next