Advertisement

ಮುಂದೆ ರಸ್ತೆ ಗುಂಡಿಯಿದೆ ಹುಷಾರ್‌!

09:58 AM Nov 20, 2019 | Team Udayavani |

ಬೆಂಗಳೂರು: ಮಳೆಯ ಮುನ್ಸೂಚನೆಯಂತೆ ನಿಮಗೆ ರಸ್ತೆ ಅಪಘಾತ ಸಂಭವದ ಮುನ್ಸೂಚನೆಯೂ ದೊರೆತರೆ ಹೇಗಿರುತ್ತದೆ? ಅಚ್ಚರಿ ಆದರೂ ಸತ್ಯ. ಇಂತಹದ್ದೊಂದು ತಂತ್ರ ಜ್ಞಾನದ ಅಭಿವೃದ್ಧಿಗೆ ಸದ್ದಿಲ್ಲದೆ ಸಿದ್ಧತೆ ನಡೆಯುತ್ತಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಮುಂದಿನ ದಿನಗಳಲ್ಲಿ ನೀವು ಸಂಚರಿಸುವಾಗ ಅಪಘಾತ ಸಂಭವ ಇರುವ ರಸ್ತೆಯ ಬಗ್ಗೆ ಮುಂಚಿತವಾಗಿಯೇ ಸವಾರನಿಗೆ ಮಾಹಿತಿ ದೊರೆಯಲಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನವೊಂದನ್ನು ಹೊರತರಲು ಇಂಟೆಲ್‌ ಇಂಡಿಯಾ ಪ್ರಯತ್ನ ನಡೆಸಿದೆ.

Advertisement

ಕಾರಿನಲ್ಲಿ ಹೋಗುವಾಗ ದೊಡ್ಡ ರಸ್ತೆ ಗುಂಡಿ ಇದ್ದರೆ, ಕಡಿದಾದ ತಿರುವುಗಳಿದ್ದರೆ ಕೆಲವು ಸೆಕೆಂಡು ಮುಂಚಿತವಾಗಿಯೇ ಧ್ವನಿಯ ಮೂಲಕ ಸೂಚನೆ ನೀಡುತ್ತದೆ. ಅದರ ನಿರ್ದೇಶನದಂತೆ ವಾಹನ ಚಾಲಕ ಜಾಗರೂಕನಾಗಬಹುದು. ಈ ಸೂಚನೆ ಮೂರ್‍ನಾಲ್ಕು ಸೆಕೆಂಡು ಮುಂಚಿತವಾಗಿ ದೊರೆಯಲಿದೆ. ಇದರ ಮುಖ್ಯ ಉದ್ದೇಶ ರಸ್ತೆ ಅಪಘಾತಗಳ ಸಂಖ್ಯೆಯನ್ನು ತಗ್ಗಿಸುವುದಾಗಿದೆ.

ಸ್ವತಃ ಇಂಟೆಲ್‌ ಇಂಡಿಯಾ ಮುಖ್ಯಸ್ಥೆ ನಿವೃತಿ ರೈ ಈ ವಿಷಯ ತಿಳಿಸಿದ್ದಾರೆ. ನಗರದ ಅರಮನೆ ಆವರಣದಲ್ಲಿ ಹಮ್ಮಿಕೊಂಡಿದ್ದ “ಟೆಕ್‌ ಸಮಿಟ್‌’ ಗೋಷ್ಠಿಯೊಂದರಲ್ಲಿ ಭಾಗವಹಿಸಿ ಅನಂತರ “ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಕರ್ನಾಟಕ, ತೆಲಂಗಾಣ ಸರಕಾರಗಳ ಜತೆ ಸಂಪರ್ಕದಲ್ಲಿದ್ದೇವೆ ಎಂದರು.

ಅಧ್ಯಯನ ಹೀಗೆ
ಪ್ರಾಜೆಕ್ಟ್ ಅಡಿ ನಗರ ಮತ್ತು ಗ್ರಾಮೀಣ ರಸ್ತೆಗಳ ಸ್ಥಿತಿಗತಿ, ಮೂಲಸೌಕರ್ಯಗಳು ಮತ್ತು ಸಂಚಾರ ವ್ಯವಸ್ಥೆ ಸಹಿತ ಅಪಘಾತಗಳಿಗೆ ಕಾರಣಗಳ ಕುರಿತು ಅಧ್ಯಯನ ನಡೆಸಲಾಗುತ್ತಿದೆ. ಇದು ಕೇವಲ ಇಂಟೆಲ್‌ನಿಂದ ಅಸಾಧ್ಯದ ಮಾತು. ಇದನ್ನು ಮನಗಂಡು ಹೈದರಾಬಾದ್‌ನ ಐಐಐಟಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸಹಿತ ಹಲವು ಸಂಸ್ಥೆಗಳಿಂದಲೂ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತಿದೆ. ಇದನ್ನು ಕ್ರೋಡೀಕರಿಸಿ, ವಿಶ್ಲೇಷಣೆ ಮಾಡಿ, ಸುಸ್ಥಿತಿಯಲ್ಲಿರುವ ಮತ್ತು ಹಾಳಾದ ರಸ್ತೆಗಳು ಎಂದು ಪ್ರತ್ಯೇಕಿಸಲಾಗುವುದು. ಅದನ್ನು ಆಧರಿಸಿ ರಸ್ತೆಗಳ ಸ್ಥಿತಿಯನ್ನು ತಿಳಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ವಿವರಿಸಿದರು.

ಚಾಲಕನಿಗೆ ಎಚ್ಚರಿಕೆ
ಉದಾಹರಣೆಗೆ ವಾಹನದಲ್ಲಿ ತೆರಳುವಾಗ ಮುಂದೆ ತಿರುವು ಪಡೆಯಲಿರುವ ರಸ್ತೆಯಲ್ಲಿ ಬೃಹತ್‌ ಗುಂಡಿ ಇದೆ ಎಂದು ಆ ತಂತ್ರಜ್ಞಾನ ಹೇಳುತ್ತದೆ. ಆಗ ಚಾಲಕ ಜಾಗೃತಗೊಳ್ಳುತ್ತಾನೆ. ಅದೇ ರೀತಿ ಮತ್ತೂಂದೆಡೆ ಕಡಿದಾದ ತಿರುವು ಇರುತ್ತದೆ ಎಂದುಕೊಳ್ಳೋಣ. ಆ ತಿರುವಿನ ಬಗ್ಗೆ ಮೊದಲೇ ತಿಳಿಸಿದರೆ, ಚಾಲಕ ಎಚ್ಚರಿಕೆಯಿಂದ ಹೋಗುತ್ತಾನೆ.

Advertisement

-  ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next