ಮಧುಗಿರಿ: ಮೊನ್ನೆಯಷ್ಟೆ ಮಧುಗಿರಿ ಜಿಲ್ಲೆ ಯಾಗುವ ಎಲ್ಲ ಅರ್ಹತೆಯಿದ್ದು ಜಿಪಂ ಸಿಇಒ, ಎಸ್ಪಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಮಾತ್ರ ಬರಬೇಕಿದ್ದು, ಎಲ್ಲ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಸಹಕಾರ ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ಕೆ.ಎನ್.ರಾಜಣ್ಣ ಬಹಿರಂಗ ಸಭೆಯಲ್ಲಿ ಹೇಳಿದ್ದರು. ಆದರೆ ಈಗ ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದ ರಾಜ್ಯ ಗುಪ್ತಚರ ಇಲಾಖೆ ಮಧುಗಿರಿ ಘಟಕವು ಸದ್ದಿಲ್ಲದೆ ತುಮಕೂರಿಗೆ ಶಿಫ್ಟ್ ಆಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದನ್ನು ಸಚಿವರು ತಡೆಯಬೇಕಿದೆ.
ತಾಲೂಕು ಆಡಳಿತ, ಆಂತರೀಕ ಚಟುವಟಿಕೆಗಳು, ಅಕ್ರಮ ಚಟುವಟಿಕೆಗಳು ಹಾಗೂ ರಾಜಕೀಯ ಸ್ಥಿತಿಗತಿಗಳನ್ನು ಸರ್ಕಾರದ ಗಮನಕ್ಕೆ ತರುತ್ತಿದ್ದ ರಾಜ್ಯ ಗುಪ್ತಚರ ಘಟಕವು ಕಳೆದ 3 ದಶಕಗಳಿಂದ ಮಧುಗಿರಿ ಉಪವಿಭಾಗದಲ್ಲಿ ತನ್ನ ಕಾರ್ಯ ಚಟುವಟಿಕೆಯನ್ನು ಯಶಸ್ವಿಯಾಗಿ ನಿಭಾಯಿಸಿತ್ತು. ಪಾವಗಡದಲ್ಲಿನ ನಕ್ಸಲ್ ಸಮಸ್ಯೆಯನ್ನು ಹತ್ತಿಕ್ಕಲು ರಾಜ್ಯ ಗುಪ್ತದಳವನ್ನು ಆರಂಭಿಸಲಾಗಿತ್ತು. ನಂತರ ನಕ್ಸಲ್ ಚಟುವಟಿಕೆ ಪೂರ್ಣವಾಗಿ ನಿಂತಿದ್ದು, ಬಳಿಕ ಅಕ್ರಮ ಚಟುವಟಿಕೆ, ಆಂತರಿಕ ಬುಡಮೇಲು ಚುಟುವಟಿಕೆಗಳನ್ನು ಘಟಕ ವರದಿ ಮಾಡುತ್ತಿತ್ತು. ಈಗಲೂ ಗುಪ್ತದಳ ಅನಿವಾರ್ಯ: ಮಧುಗಿರಿ ಉಪವಿಭಾಗ ಈಗ 4 ತಾಲೂಕುಗಳನ್ನು ಒಳಗೊಂಡ ಜಿಲ್ಲಾ ಕೇಂದ್ರದತ್ತ ಮುಖ ಮಾಡಿರುವ ಗಡಿನಾಡ ಪ್ರದೇಶ. ಇಲ್ಲಿನ ಮಧುಗಿರಿ ಹಾಗೂ ಶಿರಾ ನೆರೆಯ ಆಂದ್ರದ ಜತೆಗೆ ಅಂಟಿಕೊಂಡಿರುವ ಕ್ಷೇತ್ರಗಳು. ಇಲ್ಲಿ ಈಗಲೂ ಅಕ್ರಮ ಮದ್ಯ, ಜೂಜು, ಹಾಗೂ ಕಾನೂನು ಬಾಹಿರ ಕೃತ್ಯಗಳು ಈಗಲೂ ನಡೆಯುತ್ತಿವೆ. ಇದರೊಂದಿಗೆ ರಾಜಕೀಯವಾಗಿ ಗಲಭೆಗಳು ನಡೆಯುವ ಪರಿಸ್ಥಿತಿ ತಳ್ಳಿ ಹಾಕುವಂತಿಲ್ಲ. ಮಧುಗಿರಿಯಲ್ಲಿ ಈಗಲೂ ಧರ್ಮಗಳ ಮಧ್ಯೆ ದ್ವೇಷದ ಭಾವನೆ ಬೂದಿ ಮುಚ್ಚಿದ ಕೆಂಡದಂತಿದೆ.
ಇದನ್ನೆಲ್ಲ ಗುಪ್ತಚರ ಇಲಾಖೆಯು ವರದಿ ಮಾಡಿ ತಡೆಯಲು ಸಹಕಾರ ನೀಡಿತ್ತು. ಇಂತಹ ಘಟಕವನ್ನು ಈಗ ಮಧುಗಿರಿಯಿಂದ ತುಮಕೂರಿಗೆ ಮುಂದೆ ಜಿಲ್ಲೆಯಾಗುವ ಮಧುಗಿರಿಯ ಸಾರ್ವಜನಿಕರ ಸುರಕ್ಷತೆ ಹಾಗೂ ಅಭಿವೃದ್ಧಿಗೆ ಇದು ಪರೋಕ್ಷವಾಗಿ ಹೊಡೆತ ಬೀಳಲಿದೆ. ಈಗಿದ್ದ ಮಧುಗಿರಿ ಗುಪ್ತಚರ ಘಟಕ ಬಾಡಿಗೆ ಕಟ್ಟಡದಲ್ಲಿದ್ದು, 2 ಪಿಎಸೈ, 2 ಎಸೈ, 4 ಪೇದೆಗಳು, 3 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಈ ಘಟಕವನ್ನು ತೆರವುಗೊಳಿಸಲು ಇದೇ 2023 ಜನವರಿಯಲ್ಲೇ ಆದೇಶ ಬಂದಿದ್ದು, ಚುನಾವಣೆಗಾಗಿ ಉಳಿಸಿ ಕೊಳ್ಳಲಾಗಿತ್ತು. ಇದರಿಂದಲೇ ಗುಪ್ತಚರ ಘಟಕ ಅನಿವಾರ್ಯತೆ ಎಷ್ಟೆಂಬುದು ಅರ್ಥವಾಗಲಿದ್ದು ಇದು ಮುಂದುವರಿಯಬೇಕಿದೆ ಎಂಬುದು ಪ್ರಾಜ್ಞರ ಒತ್ತಾಯವಾಗಿದೆ.
ತಾಲೂಕಿನಲ್ಲಿ ಗುಪ್ತಚರ ಘಟಕ ಅನಿವಾರ್ಯವೇಕೆ? : ಮಧುಗಿರಿ ಉಪವಿಭಾಗಕ್ಕೆ ರಾಜ್ಯ ಗುಪ್ತಚರ ಇಲಾಖೆಯ ಘಟಕ ಅನಿವಾರ್ಯ. ಏಕೆಂದರೆ ಮುಂದೆ ಜಿಲ್ಲೆಯಾಗುವ ಮಧುಗಿರಿ ಸೂತ್ತಲೂ ನೆರೆರಾಜ್ಯ ಸುತ್ತುವರಿದಿದೆ. ಅಲ್ಲದೆ ಎಲ್ಲ 4 ಕ್ಷೇತ್ರದಲ್ಲೂ ಅಲ್ಪಸಂಖ್ಯಾತರು ಹಾಗೂ ಮೇಲ್ವರ್ಗದ ದ್ವೇಷ ಭಾವನೆ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ವಾತಾವರಣವಿದೆ. ಮುಂದೆ ಎದುರಾಗಬಹುದಾದ ಕೋಮು ಗಲಭೆಗಳನ್ನು ತಡೆಯಲು ಹಾಗೂ ನೆರೆ ರಾಜ್ಯದಿಂದ ನಡೆಯುವ ಅಕ್ರಮ ನುಸುಳುವಿದೆ, ಮಾದಕ ದಂಧೆಯನ್ನು ಪತ್ತೆಹಚ್ಚಿ ಹತ್ತಿಕ್ಕಲು ಮಧುಗಿರಿ ಉಪ ವಿಭಾಗಕ್ಕೆ ಗುಪ್ತಚರ ಘಟಕ ಬೇಕಾಗಿದೆ. ಈ ವಿಚಾರವನ್ನು ಮನಗಂಡು ಸಹಕಾರ ಸಚಿವರು ಹಾಗೂ ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣನವರು ಈ ಘಟಕವನ್ನು ಮತ್ತೆ ಮಧುಗಿರಿಯಲ್ಲೇ ಉಳಿಸಿಕೊಳ್ಳಬೇಕಿದೆ.
–ಮಧುಗಿರಿ ಸತೀಶ್