ಬೆಂಗಳೂರು: ರಾಜಧಾನಿಯ ಐತಿಹಾಸಿಕ ಧಾರ್ಮಿಕ ವೈಭವದ ಪ್ರತೀಕವಾದ ಹೂವಿನ ಕರಗದ ಶಕ್ಯುತ್ಸವ ವಿಜೃಂಭಣೆಯಿಂದ ನೆರವೇರಿತು. ತಿಗಳರ ಪೇಟೆಯಲ್ಲಿನ ಶ್ರೀ ಧರ್ಮರಾಯ ದೇವಾಲಯದಲ್ಲಿ ಚೈತ್ರ ಹುಣ್ಣಿಮೆಯ ದಿನವಾದ ಮಂಗಳವಾರ ಮಧ್ಯರಾತ್ರಿ ಕರಗದ ಪೂಜಾರಿ ಜ್ಞಾನೇಂದ್ರ ಸಂಪ್ರದಾಯದಂತೆ ಅರಿಶಿನ ವಸ್ತ್ರಧಾರಿಯಾಗಿ ಮಲ್ಲಿಗೆ ಹೂವಿನಿಂದ ಅಲಂಕಾರಗೊಂಡ ಕರಗ ಹೊತ್ತು ಹೊರಬರುತ್ತಿದ್ದಂತೆ ವೀರಕುಮಾರರ ಗೋವಿಂದಾ….ಗೋವಿಂದಾ…. ಉದ್ಘೋಷ ಮುಗಿಲು ಮುಟ್ಟಿತು.
ಕಳೆದ ಒಂಬತ್ತು ದಿನಗಳಿಂದ ವ್ರತನಿಷ್ಠೆ, ನಿಯಮಗಳನ್ನು ಪಾಲಿಸಿದ್ದ ಪೂಜಾರಿ ಧಾರ್ಮಿಕ ವಿಧಿವಿಧಾನ ಮುಗಿಸಿ ಕರಗ ಹೊತ್ತು ಧರ್ಮರಾಯ ದೇವಾಲಯದ ಆವರಣದಲ್ಲಿ ತಮಟೆ ವಾದನ, ಮಂಗಳವಾದ್ಯಕ್ಕೆ ಹೆಜ್ಜೆ ಹಾಕಿದಾಗ ನೆರೆದಿದ್ದ ಸಮೂಹ ಹರ್ಷೋದ್ಗಾರ ವ್ಯಕ್ತಪಡಿಸಿತು. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸಹಸ್ರಾರು ಸಂಖ್ಯೆಯ ಭಕ್ತವೃಂದ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದ ಬೀದಿಗಳಲ್ಲಿ ಹೂವಿನ ಕರಗ ವೀಕ್ಷಿಸಿ ಪುಳಕಿತರಾದರು.
ಕರಗ ಶಕೊತ್ಸವ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಮುತ್ತಲ ಪ್ರದೇಶಗಳಲ್ಲಿ ಧಾರ್ಮಿಕ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಕರಗ ಶಕೊÂàತ್ಸವ ಹಿನ್ನೆಲೆಯಲ್ಲಿ ಕರಗ ಸಾಗುವ ಮಾರ್ಗದುದ್ದಕ್ಕೂ ರಸ್ತೆಗಳಲ್ಲಿ ರಂಗೋಲಿ ಬಿಡಿಸಿ ಹೂವು ಚೆಲ್ಲಿ ಸ್ವಾಗತ ಕೋರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಧರ್ಮರಾಯಸ್ವಾಮಿ ದೇವಸ್ಥಾನದ ಹೊರಟ ಹೂವಿನ ಕರಗ ಅಲ್ಲಿಂದ ಹಳೇ ಬೆಂಗಳೂರು ಭಾಗಗಳಾದ ಹಲಸೂರು ಗೇಟ್, ನಗರ್ತಪೇಟೆ, ಅರಳಪೇಟೆ, ಗಾಣಿಗರ ಪೇಟೆ, ಅಣ್ಣಮ್ಮನ ದೇವಾಲಯ, ಕಬ್ಬನ್ ಪೇಟೆ, ಹಾಲು ಬೀದಿ, ಕಿಲಾರಿ ರಸ್ತೆ , ಬಳೇಗರಡಿ ಮಾರ್ಗವಾಗಿ ಮಸ್ತಾನ್ ಸಾಹೇಬರ ದರ್ಗಾ, ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ, ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿಕೊಂಡ ಕರಗ ಬುಧವಾರ ಸೂರ್ಯೋದಯಕ್ಕೂ ಮುನ್ನ ಧರ್ಮರಾಯ ದೇಗುಲ ತಲುಪಿತು.
ಸಿಎಂ ಸಿದ್ದರಾಮಯ್ಯ, ಶಾಸಕ ಆರ್.ವಿ. ದೇವರಾಜ್, ಮೇಯರ್ ಪದ್ಮಾವತಿ ಪಾಲ್ಗೊಂಡಿದ್ದರು. ಕರಗ ಶಕೊತ್ಸವ ಹಿನ್ನೆಲೆಯಲ್ಲಿ ಹಲಸೂರು ಗೇಟ್, ಉಪ್ಪಾರಪೇಟೆ, ಕಾಟನ್‌ಪೇಟೆ, ಚಾಮರಾಜಪೇಟೆ, ಸಿಲ್ವರ್ ಜ್ಯೂಬಿಲಿ ಪಾರ್ಕ್, ಕೆ.ಆರ್.ಮಾರುಕಟ್ಟೆ, ಕಂಗೇರಿ ಗೇಟ್, ಬ್ಯಾಟರಾಯನಪುರ ಠಾಣೆ ವ್ಯಾಪ್ತಿಗಳಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಎಲ್ಲೆಲ್ಲಿ ವಿಶೇಷ ಪೂಜೆ?
ಗಣಪತಿ ದೇವಾಲಯ ಹಾಗೂ ಮುತ್ಯಾಲಮ್ಮ ದೇವಾಲಯ, ಹಲಸೂರುಪೇಟೆ ಆಂಜನೇಯಸ್ವಾಮಿ, ಶ್ರೀರಾಮ ದೇವಾಲಯ ಮತ್ತು ಶ್ರೀಪ್ರಸನ್ನ ಗಂಗಾಧರೇಶ್ವರಸ್ವಾಮಿ ದೇವಾಲಯ, ನಗರ್ತರ ಪೇಟೆಯ ಶ್ರೀವೇಣುಗೋಪಾಲ ಕೃಷ್ಣಸ್ವಾಮಿ ದೇವಾಲಯ ಹಾಗೂ ಶ್ರೀನಗರೇಶ್ವರ ಸ್ವಾಮಿ, ಶ್ರೀಪ್ರಸನ್ನ ಗಂಗಾಧರೇಶ್ವರಸ್ವಾಮಿ ದೇವಾಲಯ, ಸಿದ್ದಣ್ಣ ಗಲ್ಲಿ ಭೈರೇದೇವರ ದೇವಾಲಯ ಸೇರಿದಂತೆ ಪ್ರಮುಖ ದೇವಾಲಯಗಳು ಹಾಗೂ ವಹಿ° ಕುಲಸ್ಥರ ಮನೆಯಲ್ಲಿ ವಿಶೇಷ ಧಾರ್ಮಿಕ ಪೂಜೆ ಸ್ವೀಕರಿಸಲಾಯಿತು.