Advertisement

ಕೋಲಾರದಲ್ಲಿ ಸಮಗ್ರ ವಿದ್ಯುತ್‌ ಅಭಿವೃದ್ಧಿ ಯೋಜನೆ

01:27 PM Aug 26, 2017 | |

ಕೋಲಾರ: ನಗರ ಪ್ರದೇಶಗಳಲ್ಲಿ ಯಾವುದೇ ರೀತಿಯ ವಿದ್ಯುತ್‌ ಅವಘಡಗಳು ನಡೆಯದಂತೆ ವಿಶೇಷ ಯೋಜನೆಯನ್ನು 9 ಕೋಟಿ ರೂ. ಅನುದಾನದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಶಾಸಕ ವರ್ತೂರು ಪ್ರಕಾಶ್‌ ಪ್ರಕಟಿಸಿದರು. ನಗರದ ಕಾರಂಜಿಕಟ್ಟೆ ಶ್ರೀ ದ್ರೌಪತಾಂಬೆ ದೇವಾಲಯದ ಆವರಣದಲ್ಲಿ ಬೆಸ್ಕಾಂ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ನಗರ ಪ್ರದೇಶದ ಸಮಗ್ರ ವಿದ್ಯುತ್‌ ಅಭಿವೃದ್ಧಿ ಯೋಜನೆ ಹಾಗೂ ದೀನ ದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಸಮಗ್ರ ವಿದ್ಯುತ್‌ ಅಭಿವೃದ್ಧಿ: ಕೇಂದ್ರ ಸರಕಾರ ನಗರ ಪ್ರದೇಶದಲ್ಲಿ ಯಾವುದೇ ವಿದ್ಯುತ್‌ ಅವಘಡಗಳು ಸಂಭವಿಸದಂತೆ ಸಮಗ್ರ ವಿದ್ಯುತ್‌ ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತಂದಿದ್ದು, ಅಂದಾಜು ವೆಚ್ಚ 9 ಕೋಟಿ ರೂ. ಅನುದಾನದಲ್ಲಿ ವಿದ್ಯುತ್‌ ಕಾಮಗಾರಿಗಳು ನಡೆಯಲಿವೆ. ನಗರ ಪ್ರದೇಶದಲ್ಲಿ 6 ಕೋಟಿ ರೂ. ಅಂದಾಜು ವೆಚ್ಚದ ಅನುದಾನದಲ್ಲಿ ವಿದ್ಯುತ್‌ ಕಾಮಗಾರಿಗಳು ನಡೆಯಲಿದ್ದು, ಉಳಿದ 3 ಕೋಟಿ ರೂ.ನಲ್ಲಿ ಗ್ರಾಮ ಜ್ಯೋತಿ ಯೋಜನೆಯ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವುದಾಗಿ ತಿಳಿಸಿದರು. ಕೋಲಾರ ಮಾದರಿ ನಗರ: ನಗರದಲ್ಲಿ ವಿದ್ಯುತ್‌ ಅವಘಡಗಳು ಆಗಾಗ ಸಂಭವಿಸುತ್ತಿರುತ್ತವೆ. ಜನಸಾಮಾನ್ಯರು, ಮಕ್ಕಳು, ಮೂಕ ಪ್ರಾಣಿಗಳು, ಕೆಲವೊಮ್ಮೆ ಬೆಸ್ಕಾಂ ಲೈನ್‌ಮನ್‌ಗಳು ಕೂಡ ಸಾವನ್ಪಪ್ಪಿದ್ದಾರೆ. ಈ ರೀತಿಯ ಅನಾಹುತಗಳನ್ನು ತಪ್ಪಿಸಲು ಅಂಡರ್‌ಗ್ರೌಂಡ್‌ ಕೇಬಲ್‌ ಅಳವಡಿಸುವ
ಕಾರ್ಯಕ್ರಮವೂ ಈ ಯೋಜನೆಯಲ್ಲಿದೆ. ಇದರಿಂದ ಕೋಲಾರ ನಗರ ಮಾದರಿ ನಗರವಾಗುವುದರಲ್ಲಿ
ಯಾವುದೇ ಸಂಶಯವಿಲ್ಲ ಎಂದರು. ಬಡವರಿಗೆ ಉಚಿತ ವಿದ್ಯುತ್‌, ಎಲ್‌ಇಡಿ ಬಲ್ಬ್: ಗ್ರಾಮೀಣ ಭಾಗದಲ್ಲಿ ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬಗಳಿಗೆ ಉಚಿತ ವಿದ್ಯುತ್‌ ಹಾಗೂ ಎಲ್‌ಇಡಿ ಬಲ್ಬ್ಗಳನ್ನು ನೀಡುತ್ತಿರುವುದು ಸಹ ಕಾರ್ಯಕ್ರಮದ ವಿಶೇಷವಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಫ‌ಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಬಡವರಿಗೆ ಶೀಘ್ರವಾಗಿ ಯೋಜನೆ ಸೌಲಭ್ಯ ತಲುಪುವಂತೆ ಮಾಡಬೇಕು ಎಂದು ಹೇಳಿದರು. ದಿವಂಗತ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಡವರಿಗೆ ಉಚಿತ ವಿದ್ಯುತ್‌ ಒದಗಿಸಲಾಗಿತ್ತು. ನಂತರ ಈ ಯೋಜನೆಯನ್ನು ಸ್ಥಗಿತಗೊಳಿಸಲಾಯಿತು ಎಂದು ನೆನಪಿಸಿಕೊಂಡ ಶಾಸಕರು, ಇದೀಗ ಕೇಂದ್ರ ಸರ್ಕಾರ ಉಚಿತ ವಿದ್ಯುತ್‌ ನೀಡಲು ಮುಂದೆ ಬಂದಿರುವುದು ಸಂತಸ ತಂದಿದೆ ಎಂದರು. ಈ ಸಂದರ್ಭದಲ್ಲಿ ದರಖಾಸ್ತು ಸಮಿತಿ ಅಧ್ಯಕ್ಷ ಬೆಗ್ಲಿ ಪ್ರಕಾಶ್‌, ತಾಪಂ ಅಧ್ಯಕ್ಷ ಆಂಜಿನಪ್ಪ, ನಗರಸಭಾ ಮಾಜಿ ಅಧ್ಯಕ್ಷ ರಘುರಾಂ, ಸದಸ್ಯರಾದ ಶಾಂತಮ್ಮ ಆಂಜಿನಪ್ಪ, ಡೆಕೋರೇಷನ್‌ ಕೃಷ್ಣ, ಸಿ.ಸೋಮಶೇಖರ್‌, ಮಂಜುನಾಥ್‌, ಕೆಡಿಎ ನಿರ್ದೇಶಕ ಅಪ್ಪಿ ನಾರಾಯಣಸ್ವಾಮಿ, ಬೆಸ್ಕಾಂ ಅಧೀಕ್ಷಕ ಎಂಜಿನಿಯರ್‌ ಚೌಡಪ್ಪ, ಕಾರ್ಯ ನಿರ್ವಾಹಕ ಎಂಜಿನಿಯರ್‌ ಗುರುಸ್ವಾಮಿ, ನಗರ ಎಇಇ ಸತೀಶ್‌, ಕಾಮಗಾರಿ ಎಇಇ ವೆಂಕಟೇಶ್‌, ಶ್ರೀನಾಥ್‌, ಎಇ ವಿಜಯಕುಮಾರ್‌, ಗ್ರಾಮಾಂತರ ಎಇಇ ವಾಸುದೇವ ಗುತ್ತಿಗೆದಾರ ಗುರುರಾಜ್‌,ಕಿರಣ್‌, ತಿಗಳ ಸಮಾಜದ ಯಜಮಾನ್‌, ಗೌಡರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next