ಬೆಂಗಳೂರು: ಆರೋಗ್ಯ ವಿಮಾ ಪಾಲಿಸಿಗಳನ್ನು ಕೆಲ ಆಸ್ಪತ್ರೆಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಇದರಲ್ಲಿ ಹಲವು ವಿಮಾ ಕಂಪೆನಿಗಳು ಶಾಮೀಲಾಗಿವೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಕೇಂದ್ರ ಸಾಂಖೀಕ ಮತ್ತು ಯೋಜನಾ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದರು. ನಗರದ ಆರ್‌ಜಿ ರಾಯಲ್ ಹೋಟೆಲ್‌ನಲ್ಲಿ ಶನಿವಾರ ಜನರಲ್ ಇನ್ಷೊರನ್ಸ್ ಏಜೆಂಟ್ಸ್ ಫೆಡರೇಷನ್ ಇಂಟಿಗ್ರೇಟೆಡ್ ಹಮ್ಮಿಕೊಂಡಿದ್ದ ಆರೋಗ್ಯ ವಿಮಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕೆಲವು ಆಸ್ಪತ್ರೆಗಳು ಆದಾಯದ ದೃಷ್ಟಿಯಿಂದ ವಿಮಾ ಕಂಪೆನಿಗಳನ್ನೇ ಅವಲಂಭಿತವಾಗಿವೆ. ಬಡ-ಮಧ್ಯಮ ವರ್ಗಗಳ ವಿಮಾ ಪಾಲಿಸಿಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಶೋಷಣೆ ಮಾಡುತ್ತಿವೆ. ಇಂತಹ ಪ್ರವೃತ್ತಿ ನಿಲ್ಲಬೇಕು. ಈ ನಿಟ್ಟಿನಲ್ಲಿ ವಿಮಾ ಏಜೆಂಟರುಗಳ ಒಕ್ಕೂಟದ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿದರು.
ಪರಿಹಾರ ನಿಧಿಯೂ ದುರುಪಯೋಗ: ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೂಡ ದುರುಪಯೋಗ ಆಗಿರುವುದನ್ನು ನಾನು ಸ್ವತಃ ಕಂಡಿದ್ದೇನೆ. ನಾನು ಮುಖ್ಯಮಂತ್ರಿ ಆಗಿದ್ದಾಗ, ಪರಿಹಾರ ನಿಧಿಯಿಂದ ಬಡ ರೋಗಿಗಳಿಗೆ ಆರ್ಥಿಕ ನೆರವು ನೀಡಿದ್ದೆ. ನಂತರ ಅನಿರೀಕ್ಷಿತವಾಗಿ ಆ ಆಸ್ಪತ್ರೆಗಳಿಗೆ ಭೇಟಿ ನೀಡಿದಾಗ, ಅದು ಮಧ್ಯವರ್ತಿಗಳ ಪಾಲು ಆಗಿರುವುದು ಕಂಡುಬಂತು. ಆದ್ದರಿಂದ ಈ ರೀತಿಯ ದುರುಪಯೋಗಗಳನ್ನು ತಡೆಗಟ್ಟುವ ಅವಶ್ಯಕತೆ ಇದೆ ಎಂದರು.
ಅನ್ನ ಮತ್ತು ಅಕ್ಷರಕ್ಕಿಂತ ಮುಖ್ಯವಾದುದು ಮನುಷ್ಯನ ಆರೋಗ್ಯ. ಆದರೆ, ದುಶ್ಚಟ, ಪರಿಸರ ಹಾಳಾಗುತ್ತಿರುವುದು, ಕಳಪೆ ಗುಣಮಟ್ಟದ ಆಹಾರ ಮತ್ತಿತರ ಸಮಸ್ಯೆಗಳ ನಡುವೆಯೂ ದೇಶದ 125 ಕೋಟಿ ಜನರ ಆರೋಗ್ಯ ಕಾಪಾಡುವುದು ಒಂದು ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಪೂರಕ ಹೆಜ್ಜೆಗಳನ್ನು ಇಟ್ಟಿದೆ. ಇದಕ್ಕೆ ಜನ ಮತ್ತು ವಿಮಾ ಕಂಪೆನಿಗಳು ಮತ್ತು ಏಜೆಂಟರ ಸಹಕಾರವೂ ಮುಖ್ಯ ಎಂದರು.
ಇದೇ ವೇಳೆ ಎಲ್ಲ ಪ್ರಕಾರದ ವಿಮೆಗಳಿಗೆ ಏಕರೂಪದ ವಿಮಾ ಸೌಲಭ್ಯ ಮತ್ತು ಕಮೀಷನ್ ನೀಡಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಜನರಲ್ ಇನ್ಷೊರನ್ಸ್ ಏಜೆಂಟ್ಸ್ ಫೆಡರೇಷನ್ ಇಂಟಿಗ್ರೇಟೆಡ್ ಮನವಿ ಸಲ್ಲಿಸಿತು. ಅಧ್ಯಕ್ಷ ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಯುನೈಟೆಡ್ ಇಂಡಿಯಾ ಇನ್ಷೊರನ್ಸ್ ಲಿ., ಬೆಂಗಳೂರು ಪ್ರಾದೇಶಿಕ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಡಾ.ಎಂ.ಅಬ್ದುಲ್ ಅಜೀಜ್, ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಎಸ್.ಬಿ. ಶ್ರೀನಿವಾಸಾಚಾರಿ ಮತ್ತಿತರರು ಉಪಸ್ಥಿತರಿದ್ದರು.