Advertisement

Flag Hoisting ವೇಳೆ ಅಂಬೇಡ್ಕರ್,ಗಾಂಧೀಜಿ ಭಾವಚಿತ್ರ ಇಡದೆ ಅವಮಾನ;ವಿದ್ಯಾರ್ಥಿಗಳ ಪ್ರತಿಭಟನೆ

03:28 PM Aug 16, 2023 | Team Udayavani |

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾನಿಲಯದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಅಂಬೇಡ್ಕರ್ ಹಾಗೂ ಗಾಂಧೀಜಿಯವರ ಭಾವಚಿತ್ರ ಇಡದೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ  ಆ.16ರ ಬುಧವಾರ ಗುಲ್ಬರ್ಗ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ.

Advertisement

ಘಟನೆಗೆ ಕಾರಣಿಕರ್ತರಾದ ಸಿಬ್ಬಂದಿ ಹಾಗೂ ಆಡಳಿತ ಕುಲಸಚಿವ ಶರಣಪ್ಪ ಸತ್ಯಂಪೇಟೆ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾರ್ಯಸೌಧದ ಮುಂದೆ ವಿದ್ಯಾರ್ಥಿಗಳು ಮುಷ್ಕರ ಮಾಡಿದರು.

ಈ ವೇಳೆ ಕುಲಪತಿ ಪ್ರೊ. ದಯಾನಂದ್ ಅಗಸರ ಹಲವಾರು ಬಾರಿ ಮನವಿ ಮಾಡಿದರೂ ವಿದ್ಯಾರ್ಥಿಗಳು ಹಿಂದೆ ಸರಿಯಲಿಲ್ಲ. ಅಲ್ಲದೆ, ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವಗಳನ್ನೇ ಬಲಿಕೊಟ್ಟ ಮಹಾನ್ ನಾಯಕರಿಗೆ ಅಪಮಾನ ಮಾಡಲಾಗಿದೆ. ಇದೊಂದು ಉದ್ದೇಶಪೂರ್ವಕ ಕೃತ್ಯವಾಗಿದೆ ಎಂದರು.

ಧ್ವಜಾರೋಹಣದ ವೇಳೆ ಹೋರಾಟಗಾರರಾದ ಮಹಾತ್ಮ ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಕಡ್ಡಾಯವಾಗಿ ಇಟ್ಟು ಪೂಜೆ ಮಾಡಬೇಕೆನ್ನುವುದು ಸುಪ್ರೀಂಕೋರ್ಟ್ ಆದೇಶವು ಆಗಿತ್ತು. ಆದರೆ ಅದನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಲಾಗಿದೆ.

Advertisement

ಈ ಕುರಿತು ಕೇಳಿದಾಗ ಕುಲಸಚಿವರು ಅಸಮರ್ಪಕವಾಗಿ ಹೇಳಿಕೆ ನೀಡಿದ್ದಲ್ಲದೆ, ಭಾವಚಿತ್ರ ಇಡುವ ಕುರಿತು ಕಾರಣಗಳನ್ನು ನೀಡಿ ಸಮರ್ಥನೆ ಮಾಡಿಕೊಂಡಿದ್ದಾರೆ. ಆದ್ದರಿಂದ ಇದೊಂದು ಉದ್ದೇಶಪೂರ್ವಕ ಅವಮಾನವಾಗಿದ್ದು, ಕೂಡಲೇ ಸಂಬಂಧಪಟ್ಟ ಎಲ್ಲ ಸಿಬ್ಬಂದಿ ಹಾಗೂ ಆಡಳಿತ ಕುಲಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು.

ಈ ಪ್ರತಿಭಟನೆಯಿಂದಾಗಿ ಎರಡು -ಮೂರು ಗಂಟೆಗಳ ಕಾಲ ಗುಲ್ಬರ್ಗ ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ದಲಿತ ವಿದ್ಯಾರ್ಥಿಗಳು ಸೇರಿದಂತೆ ಇತರೆ ವಿದ್ಯಾರ್ಥಿಗಳು ಈ ಘಟನೆ ಕುರಿತು ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ಕುಲಪತಿಗಳ ಮೇಲೆ ಒತ್ತಡ ಹೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next