ಬೆಂಗಳೂರು: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಪ್ರೌಢಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ನೋಂದಾಯಿಸಿಕೊಳ್ಳಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸೂಚನೆ ನೀಡಿದೆ.
2020ರ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಮೌಲ್ಯಮಾಪನ ಕಾರ್ಯಕ್ಕಾಗಿ ಶಾಲಾ ಲಾಗಿನ್‌ನಲ್ಲಿ ಆನ್‌ಲೈನ್ ಮೂಲಕ ನೋಂದಾಯಿಸಿಕೊಳ್ಳಬೇಕು. ಶಾಲಾ ಮುಖ್ಯ ಶಿಕ್ಷಕರು ತಮ್ಮ ಶಾಲೆಯ ಅರ್ಹ ಶಿಕ್ಷಕರನ್ನು ನೋಂದಾಯಿಸುವುದು ಮತ್ತು 2018-19ನೇ ಸಾಲಿನ ನೋಂದಾಯಿತ ಶಿಕ್ಷಕರ ವಿವರವನ್ನು ಅಪ್‌ಡೇಟ್ ಮಾಡುವುದು ಕಡ್ಡಾಯ ಎಂದು ಮಂಡಳಿ ತಿಳಿಸಿದೆ.
ಶಾಲಾ ಮುಖ್ಯ ಶಿಕ್ಷಕರು ಹೆಸರನ್ನು ನೋಂದಾಯಿಸುವ ಸಂದರ್ಭದಲ್ಲಿ ಮೌಲ್ಯಮಾಪನದ ವಿಷಯ ಮತ್ತು ಅವುಗಳ ವಿಷಯ ಸಂಕೇತವನ್ನು ಸರಿಯಾಗಿ ಗಮನಿಸಿಕೊಂಡು ನೋಂದಾಯಿಸಬೇಕು. ತಮ್ಮ ಶಾಲೆಯಲ್ಲಿ ಶಿಕ್ಷಕರು ಬೋಧಿಸುವ ಭಾಷಾ ವಿಷಯ ಮತ್ತು ಕೋರ್ ವಿಷಯಗಳ ಮಾಧ್ಯಮ ಖಚಿತಪಡಿಸಿಕೊಂಡು ನೋಂದಾಯಿಸಬೇಕು.
ಯಾವುದೇ ಕಾರಣಕ್ಕೂ ಭಾಷಾ ವಿಷಯ ಅಥವಾ ಕೋರ್ ವಿಷಯದ ಶಿಕ್ಷಕರ ನೋಂದಣಿ ಯನ್ನು ತಪ್ಪಾಗಿ ಮಾಡಬಾರದು. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ. ಹೀಗಾಗಿ, ಎಚ್ಚರಿಕೆಯಿಂದ ನೋಂದಣಿ ಕಾರ್ಯ ಮುಗಿಸಬೇಕು ಎಂದು ಸೂಚನೆ ನೀಡಿದೆ.
ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಶಿಕ್ಷಕರು 2020ರ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಮೌಲ್ಯಮಾಪಕರಾಗಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಮೌಲ್ಯಮಾಪಕರಾಗಿ ನೋಂದಣಿ ಮಾಡಿಕೊಳ್ಳದ ಶಾಲೆಗಳ ವಿರುದ್ಧ ಕ್ರಮ ಕೈಗೊಂಡು, ಆ ಶಾಲೆಗಳ ವಿದ್ಯಾರ್ಥಿಗಳ ಪರೀಕ್ಷಾ ಪ್ರವೇಶ ಪತ್ರವನ್ನು ತಡೆ ಹಿಡಿಯಲಾಗುತ್ತದೆ. ಜೊತೆಗೆ, ಅಂತಹ ಶಾಲಾ ಮುಖ್ಯಸ್ಥರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಮಂಡಳಿ ಎಚ್ಚರಿಕೆ ನೀಡಿದೆ.