ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಪಂಪಾಸರೋವರದ ಜಿರ್ಣೋದ್ಧಾರ ಕಾಮಗಾರಿಯಲ್ಲಿ ಪುರಾತತ್ವ ಇಲಾಖೆ ವಿಧಿಸಿದ್ದ ನಿಯಮಗಳನ್ನು ಮೀರಿ ಕಾಮಗಾರಿ ಹಾಗೂ ಜಯಲಕ್ಷ್ಮೀ ಮೂರ್ತಿ ಹಾಗೂ ಶ್ರೀಚಕ್ರ ಸ್ಥಳಾಂತರವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಶ ಕಿಶೋರ್ ತಿಳಿಸಿದರು.
ಅವರು ಬುಧವಾರ ಪಂಪಾಸರೋವರಕ್ಕೆ ಭೇಟಿ ನೀಡಿ ಜೀರ್ಣೋದ್ಧಾರ ಕಾಮಗಾರಿ ಮತ್ತು ಮೂರ್ತಿ, ಶ್ರೀಚಕ್ರ ಸ್ಥಳಾಂತರ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಂಪಾಸರೋವರ ಜೀರ್ಣೋದ್ಧಾರ ಮಾಡಲು ಪ್ರಾಚ್ಯವಸ್ತು, ಪುರಾತತ್ವ ಇಲಾಖೆ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಷರತ್ತು ಬದ್ಧವಾಗಿ ಪರವಾನಿಗೆ ನೀಡಲಾಗಿದೆ. ಪುರಾತತ್ವ ಇಲಾಖೆ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಸಮ್ಮುಖದಲ್ಲಿ ನಿತ್ಯ ಕಾಮಗಾರಿ ಕೈಗೊಳ್ಳಬೇಕೆನ್ನುವ ಷರತ್ತು ಉಲ್ಲಂಘನೆಯಾಗಿರುವ ಕುರಿತು ಸಾರ್ವಜನಕರ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಈಗಾಗಲೇ ತಹಶೀಲ್ದಾರ್ ಹಾಗೂ ಸಹಾಯಕ ಆಯುಕ್ತರಿಂದ ಜೀರ್ಣೋದ್ಧಾರ ಕಾಮಗಾರಿಯಲ್ಲಿ ನಿಯಮಗಳ ಉಲ್ಲಂಘನೆ ಹಾಗೂ ಜಯಲಕ್ಷ್ಮೀ ಮೂರ್ತಿ ಶ್ರೀಚಕ್ರ ಸ್ಥಳಾಂತರ ಮಾಡಿದ ಕುರಿತು ಸಮಗ್ರ ವರದಿ ಕೇಳಿ ಪಡೆಯಲಾಗಿದೆ. ಇದಲ್ಲಿ ಕೆಲವು ನಿಯಮಗಳನ್ನು ಮೀರಿ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಕಾಮಗಾರಿ ನಡೆಸಲಾಗಿದೆ. ಮೂರ್ತಿ ಮತ್ತು ಶ್ರೀಚಕ್ರ ಸ್ಥಳಾಂತರ ಮಾಡಲಾಗಿದ್ದು, ಸಮಗ್ರ ವರದಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ.
ಜಯಲಕ್ಷ್ಮೀ ದೇವಾಲಯ ಧಾರ್ಮಿಕ ದತ್ತು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಮೂರ್ತಿ ಶ್ರೀಚಕ್ರ ಪುನರ್ ಪ್ರತಿಷ್ಠಾಪನೆ ಇತರೆ ಧಾರ್ಮಿಕ ಕಾರ್ಯಕ್ರಮಗಳನ್ನು ಸರಕಾರದ ಶಿಷ್ಟಾಚಾರದಂತೆ ನೆರವೇರಿಸಲಾಗುತ್ತದೆ. ಸದ್ಯ ಮುಂದಿನ ಆದೇಶ ಬರುವ ತನಕ ಜೀರ್ಣೋದ್ಧಾರ ಕಾಮಗಾರಿ ನಡೆಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ತಹಶೀಲ್ದಾರ್ ಯು. ನಾಗರಾಜ ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳು ಕಂದಾಯ ಇಲಾಖೆಯ ಅಧಿಕಾರಿಗಳಿದ್ದರು.
ಪುರಾತನ ಪಂಪಾಸರೋವರವನ್ನು ಸಚಿವ ಬಿ. ಶ್ರೀರಾಮುಲು ನೇತೃತ್ವದಲ್ಲಿ ಜೀರ್ಣೋದ್ಧಾರ ಮಾಡಲಾಗುತ್ತಿದ್ದು, ಮೇ 25ರಂದು ಪುರಾತತ್ವ ಇಲಾಖೆ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿ ಕಾರಿಗಳ ಅನುಪಸ್ಥಿತಿಯಲ್ಲಿ ಜಯಲಕ್ಷ್ಮೀ ಮೂರ್ತಿ ಹಾಗೂ ಶ್ರೀಚಕ್ರ ಪಾಣಿ ಬಟ್ಲು ಸ್ಥಳಾಂತರ ಮಾಡಿ ಈಶ್ವರ ಗುಡಿಯಲ್ಲಿರಿಸಲಾಗಿತ್ತು.
ಇದರಿಂದ ಸ್ಥಳೀಯರು ಆನೆಗೊಂದಿ ರಾಜವಂಶಸ್ಥರು ಆತಂಕ ವ್ಯಕ್ತಪಡಿದ್ದರು. ಸ್ಥಳಕ್ಕೆ ಈಗಾಗಲೇ ಶಾಸಕ ಪರಣ್ಣ ಮುನವಳ್ಳಿ, ರಾಜವಂಶಸ್ಥೆ ಲಲಿತಾರಾಣಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಾಜಿ ಸಚಿವ ಎಸ್. ಶಿವರಾಜ ತಂಗಡಗಿ ಹಾಗೂ ಎಂ. ಮಲ್ಲಿಕಾರ್ಜುನ ನಾಗಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ತಾಲೂಕು ಜಿಲ್ಲಾಮಟ್ಟದ ಮುಖಂಡರು ಭೇಟಿ ನೀಡಿ ನಿಯಮ ಉಲ್ಲಂಘಿಸಿ ಕಾಮಗಾರಿ ನಡೆಸಿದ್ದರ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು.
ಆನೆಗೊಂದಿ ಭಾಗದಲ್ಲಿ ಸಣ್ಣಪುಟ್ಟ ಕೆಲಸ ಕಾರ್ಯಗಳಿಗೆ ಆಕ್ಷೇಪವೆತ್ತುವ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ನಿಯಮ ಉಲ್ಲಂಘಿಸಿ ಪಂಪಾಸರೋವರದಲ್ಲಿ ನಡೆಯುತ್ತಿರುವ ಕಾಂಗಾರಿ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದ್ದರು. ಬುಧವಾರ ಸ್ಥಳಕ್ಕೆ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಶ ಕಿಶೋರ್ ಭೇಟಿ ನೀಡಿ ಪರಿಶೀಲಿಸಿ ಕಾಮಗಾರಿ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ.