Advertisement

ಜಾನುವಾರು ಬೀದಿಗೆ ಬಿಡದಂತೆ ಸೂಚನೆ

04:55 PM Sep 30, 2020 | Suhan S |

ವಿಜಯಪುರ: ರಸ್ತೆ ಅಪಘಾತ ತಪ್ಪಿಸಲು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆ ನೀಗಲು ಜಾನುವಾರುಗಳ ಮಾಲೀಕರು ತಮ್ಮ ದನಗಳನ್ನು ಬೀದಿಗೆ ಬಿಡದಂತೆ ನೋಡಕೊಳ್ಳಬೇಕು. ಒಂದೊಮ್ಮೆ ಮಾಲೀಕರು ತಮ್ಮ ದನಗಳನ್ನು ಬೀದಿಗೆ ಬಿಟ್ಟರೆ ಬೀದಿ ದನಗಳನ್ನು ಗೋಶಾಲೆಗೆ ರವಾನಿಸುವುದಾಗಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದರು.

Advertisement

ಮಂಗಳವಾರ ನಗರದಲ್ಲಿ ನಡೆದ ಪ್ರಾಣಿ ದಯಾ ಸಂಘ ಸಭೆ, ರಾಷ್ಟ್ರೀಯ ಕೃತಕ ಗರ್ಭಧಾರಣೆ ಮೂಲಕ ರಾಸುಗಳ ತಳಿ ಉನ್ನತೀಕರಣ ಕಾರ್ಯಕ್ರಮ ಹಾಗೂ ಜಾನುವಾರುಗಳ ಕಾಲು, ಬಾಯಿ ಬೇನೆ ಲಸಿಕಾ ಕಾರ್ಯಕ್ರಮಗಳ ಸಭೆಯಲ್ಲಿ ಅವರು ಮಾತನಾಡಿದರು.

ನಗರದ ರಸ್ತೆಗಳಲ್ಲಿ ಬಿಡಾಡಿ ದನಗಳ ಓಡಾಟದಿಂದ ಸಾರ್ವಜನಿಕರಿಗೆ ಅನಾನುಕೂಲಾಗುತ್ತಿದೆ. ನಗರದ ಸ್ವತ್ಛತೆ ಮತ್ತು ಸೌಂದರ್ಯ ಹೆಚ್ಚಿಸಲು ದನಗಳ ಮಾಲೀಕರು ತಮ್ಮ ಜಾನುವಾರುಗಳನ್ನು ಬೀದಿಗೆ ಬಿಡದಂತೆ ಸೂಕ್ತ ತಿಳಿವಳಿಕೆ ನೀಡಿ, ಪರಿಸ್ಥಿತಿ ಸುಧಾರಿಸದಿದ್ದಲ್ಲಿ ಬಳಿಕ ಕ್ರಮ ಕ್ರಮ ಕೈಗೊಳ್ಳಿ ಎಂದರು. ಸುಗಮ ವಾಹನ ಸಂಚಾರಕ್ಕೆ ಸಮಸ್ಯೆಯಾಗಿ ವಾಹನ ಚಾಲಕರ ನಿಯಂತ್ರಣ ತಪ್ಪಿ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ನಗರದಲ್ಲಿ ರಸ್ತೆಗಳಿಗೆ ದನಗಳನ್ನು ಬಿಟ್ಟಿರುವ ದನಗಳ ಮಾಲೀಕರು ತಕ್ಷಣ ತಮ್ಮ ದನಗಳನ್ನು ಮನೆಗಳಲ್ಲಿ ಕಟ್ಟಿಕೊಳ್ಳಬೇಕು. ಈ ವಿಷಯವಾಗಿ ಅಂತಿಮ ಗಡುವು ನೀಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಅದರಂತೆ ರಸ್ತೆಗಳಲ್ಲಿ ಓಡಾಡುವ ಬಿಡಾಡಿ ದನಗಳನ್ನು ಸರ್ಕಾರದಿಂದ ಸೌಲಭ್ಯ ಪಡೆಯುತ್ತಿರುವ ಗೋಶಾಲೆಗಳಿಗೆ ರವಾನಿಸಲಾಗುತ್ತದೆ. ಒಂದೊಮ್ಮೆ ರಸ್ತೆಗಳಲ್ಲಿ ಓಡಾಡುವ ಜಾನುವಾರುಗಳ ಮಾಲೀಕರು ಇದ್ದಲ್ಲಿ ಅವರಿಗೆ ದನಗಳನ್ನು ಬೀದಿಗೆ ಬಿಡದಂತೆ ಸೂಕ್ತ ಮಾಹಿತಿ ನೀಡಬೇಕು. ಮಹಾನಗರ ಪಾಲಿಕೆ ಅಧಿಕಾರಿಗಳು, ಪಶುಸಂಗೋಪನಾ ಇಲಾಖೆ ಅಧಿಕಾರಿಗಳು, ಪ್ರಾಣಿದಯಾ ಸಂಘದ ಸದಸ್ಯರು ಪರಸ್ಪರ ಸಮನ್ವಯತೆಯಿಂದ ಈ ಕೆಲಸ ನಿರ್ವಹಿಸಬೇಕು ಎಂದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಂತರ ವಿವಿಧ ತಾಲೂಕು ವ್ಯಾಪ್ತಿಯಲ್ಲಿ ಬೀದಿಯಲ್ಲಿ ಓಡಾಡುವ ದನಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ನಗರದಲ್ಲಿ 3 ಗೋಶಾಲೆಗಳು ಸರ್ಕಾರದ ಸಹಾಯಧನ ಸೌಲಭ್ಯಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಸೂಚಿಸಿದರು.

Advertisement

ಜಿಲ್ಲೆಯಾದ್ಯಂತ ಆ್ಯಂಟಿ ರ್ಯಾಬೀಸ್‌ ವ್ಯಾಕ್ಸಿನೇಶನ್‌ (ಲಸಿಕಾ ಕಾರ್ಯಕ್ರಮ), ಪ್ರಾಣಿ ಕಲ್ಯಾಣ ಕುರಿತು ಕಾರ್ಯಾಗಾರ, ದನಕರುಗಳ ಮಾಲೀಕರು, ಗೋಶಾಲೆಗಳ ಮಾಲೀಕರಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಅವರು ಸೂಚನೆ ನೀಡಿದರು. ಕಳೆದ ಆಗಸ್ಟ್‌ 1 ರಿಂದಲೇ ಆರಂಭಗೊಂಡಿರುವ ರಾಷ್ಟ್ರೀಯ ಕೃತಕ ಗರ್ಭಧಾರಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಮೇ 2021ರವರೆಗೆ ನಡೆಯಲಿರುವ ಈ ಕಾರ್ಯಕ್ರಮ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಬೇಕು. ಸದರಿ ಯೋಜನೆಯಡಿ ಉತ್ಕೃಷ್ಟ ತಳಿಯ ದೇಶಿ, ವಿದೇಶಿ ತಳಿಯ ರಾಸುಗಳ ಕೃತಕ ಗರ್ಭದಾರಣೆ ಪ್ರಮಾಣ ಮತ್ತು ಉತ್ತಮ ತಳಿ ಗುಣಗಳ ಕರುಗಳ ಜನನ ಹೆಚ್ಚಿಸಬೇಕು. ಜೊತೆಗೆ ಜಾನುವಾರುಗಳ ಉತ್ಪಾದಕತೆ ಹೆಚ್ಚಿಸಿ ರೈತರ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ರಾಷ್ಟ್ರೀಯ ಕೃತಕ ಗರ್ಭಧಾರಣೆಗೆ 500 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರತಿ ತಾಲೂಕಿಗೆ 100 ಗ್ರಾಮ ಆಯ್ಕೆ ನಿಗದಿ ಮಾಡಲಾಗಿದೆ. ಆಧಾರ್‌ ಸಂಖ್ಯೆ ಮಾದರಿಯಲ್ಲಿ ಜಾನುವಾರುಗಳಿಗೆ ಇನಾಫ್‌ ತಂತ್ರಾಂಶ ಯೋಜನೆಯಲ್ಲಿ ಕಿವಿಯೋಲೆ ಅಳವಡಿಸಿ, ಜಾನುವಾರಿನ ಸಮಗ್ರ ಮಾಹಿತಿ ದಾಖಲಿಸುವ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ಜಿಲ್ಲಾ-ತಾಲೂಕು ನೋಡಲ್‌ ಅಧಿಕಾರಿಗಳಿಗೆ ಈ ಕುರಿತು ಸೂಕ್ತ ಮಾರ್ಗದರ್ಶನಕ್ಕಾಗಿ ತರಬೇತಿ ನೀಡಬೇಕು. ಗ್ರಾಮಗಳಲ್ಲಿ ರೈತರಿಗೆ ಯೋಜನೆಗಳ ಕುರಿತು ಅರಿವು ಮೂಡಿಸಲು ಗೋಡೆಬರಹ, ಬ್ಯಾನರ್‌, ಪೋಸ್ಟರ್‌ ಮತ್ತು ಕರಪತ್ರ ಹಂಚಿಕೆಯಂಥ ಪ್ರಚಾರ ಕ್ರಮಗಳಿಂದ ಜಾಗೃತಿ ಮೂಡಿಸಬೇಕು ಎಂದರು.

ಸಭೆಯಲ್ಲಿ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಪ್ರಾಣೇಶ ಜಹಾಗೀರದಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ವಿಲಿಯ್ಸಂ, ಆರೋಗ್ಯ ಇಲಾಖೆ ಅಧಿ ಕಾರಿ ಮಹೇಂದ್ರ ಕಾಪ್ಸೆ, ಕೆಎಂಎಫ್‌ ಎಂಡಿ ಸಂಜೀವ ದಿಕ್ಷೀತ್‌, ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಅಶೋಕ ಅಲ್ಲಾಪುರ, ಪ್ರಾಣಿ ದಯಾ ಸಂಘದ ಸದಸ್ಯರಾದ ದೀಪಕ್‌ ತಾಳಿಕೋಟಿ, ಸಿದ್ದು ನ್ಯಾಮಗೊಂಡ, ರಶ್ಮಿ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next