ಬೆಂಗಳೂರು: ಶೈಕ್ಷಣಿಕ ವರ್ಷದಲ್ಲಿ ಶೇ.75ರಷ್ಟು ಹಾಜರಾತಿ ಹೊಂದಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಆಂತರಿಕ ಅಂಕಗಳನ್ನು ಮಾತ್ರ ಅಪ್‌ಲೋಡ್ ಮಾಡುವಂತೆ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷೆ ಮಂಡಳಿಯು ಶಾಲಾಡಳಿತ ಮಂಡಳಿಗೆ ನಿರ್ದೇಶನ ನೀಡಿದೆ.
ಶಾಲಾಡಳಿತ ಮಂಡಳಿಯು
//www.kseeb.kar.nic.in ವೆಬ್‌ಸೈಟ್‌ನಲ್ಲಿ ಲಾಗ್‌ಇನ್ ಆಗಿ ಲಭ್ಯವಿರುವ ತಂತ್ರಾಂಶ ಬಳಸಿ ಮಾ.6ರೊಳಗೆ ಎಲ್ಲ ಶಾಲೆಗಳ ಮುಖ್ಯಸ್ಥರು ಆಯಾ ಶಾಲೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಆಂತರಿಕ ಅಂಕ ನಮೂದಿಸಬೇಕು ಎಂದು ಸೂಚಿಸಲಾಗಿದೆ.
ಲಾಗಿನ್ ಆದ ಕೂಡಲೇ “ಇಂಟರ್‌ನಲ್ ಮಾರ್ಕ್ಸ್ ಎಂಟ್ರಿ’ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ವಿದ್ಯಾರ್ಥಿ ಯ ನೋಂದಣಿ ಸಂಖ್ಯೆ ನಮೂದಿಸಿ, ಶೇ.75ರಷ್ಟು ಹಾಜರಾತಿ ಹೊಂದಿರುವ ಬಗ್ಗೆ “ಎಸ್ ಅಥವಾ ನೋ’ ಎಂದು ನಮೂದಿಸಿ ವೀವ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಆಗ ವಿದ್ಯಾರ್ಥಿಗಳ ಪೂರ್ಣ ಮಾಹಿತಿ ಬರುತ್ತದೆ. ನಿರ್ದಿಷ್ಟ ವಿದ್ಯಾರ್ಥಿಯೇ ಎಂಬುದನ್ನು ಖಚಿತ ಪಡಿಸಿಕೊಂಡು ಆಂತರಿಕ ಅಂಕ ಅಪ್‌ಲೋಡ್ ಮಾಡಬೇಕು. ಶೇ.75ಕ್ಕಿಂತ ಕಡಿಮೆ ಹಾಜರಾತಿಯಿರುವ ವಿದ್ಯಾರ್ಥಿಯ ಆಂತರಿಕ ಅಂಕ ನೋಂದಣಿಗೆ ಅವಕಾಶ ಇರುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಪ್ರತಿ ವಿದ್ಯಾರ್ಥಿಯ ಆಂತರಿಕ ಅಂಕಗಳನ್ನು ನಮೂದಿಸಿ, ಅಂತಿಮ ಗೊಳಿಸುವ ಮೊದಲು, ಅಂತರಿಕ ಅಂಕದ ವರದಿಯ ಬಗ್ಗೆ ವಿದ್ಯಾರ್ಥಿ ಪೋಷಕರಿಗೆ ಮಾಹಿತಿ ನೀಡಿ, ಪೋಷ ಕರ ಸಹಿ ಪಡೆಯಬೇಕು. ಪ್ರಥಮ ಭಾಷೆಗೆ ಗರಿಷ್ಠ ಅಂಕ 25 ಇರುವುದನ್ನು ಮುಖ್ಯೋಪಾಧ್ಯಾಯರು ಗಮನದಲ್ಲಿಟ್ಟುಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು ಮತ್ತು ಬೇಜವಾಬ್ದಾರಿತನ ತೋರಿಸಬಾರದು ಎಂದು ಮಂಡಳಿ ಎಚ್ಚರಿಕೆ ನೀಡಿದೆ.