ಚನ್ನರಾಯಪಟ್ಟಣ: ಪಟ್ಟಣದಲ್ಲಿ ದುರ್ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರವಹಿಸಬೇಕಾಗಿದ್ದು, ಪೊಲೀಸ್ ಇಲಾಖೆ ಅಧಿಕಾರಿಗಳು ಶಿಸ್ತುಬದ್ಧ ಕೆಲಸ ಮಾಡಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಸೂಚನೆ ನೀಡಿದರು.
ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಪೊಲೀಸ್ ಠಾಣೆಯಲ್ಲಿ ಅನೇಕ ಮಂದಿ ಅಧಿಕಾರಿಗಳು ಹಾಗೂ ಪೇದೆಗಳು ಕಾನೂನಾತ್ಮಕವಾಗಿ ಸೇವೆ ನೀಡದೆ ಮಧ್ಯವರ್ತಿಗಳಾಗಿದ್ದಾರೆ. ಇದರಿಂದ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ, ಇಲಾಖೆಯ ಮಾಹಿತಿ ಹಾಗೂ ಅಧಿಕಾರಿಗಳ ಬಿಗಿ ಕ್ರಮದ ಬಗ್ಗೆ ಇಲಾಖೆ ಸಿಬ್ಬಂದಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿರುವುದು ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಲು ಕಾರಣವಾಗಿದೆ ಎಂದರು.
ಹೆಚ್ಚು ಗಸ್ತು ಅಗತ್ಯ: ನಿಗದಿತ ಸಮಯಕ್ಕೆ ಮದ್ಯದ ಅಂಗಡಿ, ಬಾರ್, ರೆಸ್ಟೋರೆಂಟ್, ಡಾಬಾ ಮುಚ್ಚಬೇಕು. ತಡರಾತ್ರಿ ವರೆಗೆ ಯಾವುದೇ ಹೋಟೆಲ್, ಬೀದಿ ಬದಿ ತಿಂಡಿ ಅಂಗಡಿಗಳು ತೆರೆಯದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ತಾಲೂಕಿನಲ್ಲಿ ಗಾಂಜಾ ಮಾರಾಟ ಮಾಡುವ ತಂಡಗಳು ತಲೆ ಎತ್ತಿವೆ ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದ್ದು ಪೊಲೀಸರು ಅವುಗಳಿಗೆಲ್ಲಾ ಕಡಿವಾಣ ಹಾಕಿ ಎಂದರು.
ಸರ್ಕಾರಿ ಆಸ್ಪತ್ರೆ ಶ್ರೀಕಂಠಯ್ಯ ವೃತ್ತ, ನವೋದಯ ವೃತ್ತ, ಬಾಗೂರು ರಸ್ತೆ, ಬಸ್‌ನಿಲ್ದಾಣ, ಮೈಸೂರು ವೃತ್ತ ಸೇರಿ ಪಟ್ಟಣಕ್ಕೆ ಜನದಟ್ಟಣೆ ಇರುವ ಪ್ರದೇಶಗಳು, ಮುಖ್ಯ ಪ್ರವೇಶದ್ವಾರ ಸೇರಿದಂತೆ ಕೆಲವೆಡೆ ಸಿ.ಸಿ. ಕ್ಯಾಮೆರಾ ಅಳವಡಿಸಲಾಗುವುದು ಎಂದು ತಿಳಿಸಿದರು.
ತಾಲೂಕಿನಲ್ಲಿ ಹಿರೀಸಾವೆ, ಶ್ರವಣಬೆಳಗೊಳ, ನುಗ್ಗೇಹಳ್ಳಿ, ಗ್ರಾಮಾಂತರ, ನಗರ ಠಾಣೆ, ಸಂಚಾರ ಪೊಲೀಸ್ ಗಳಿಂದ ಸುಮಾರು 53 ಹುದ್ದೆ ಖಾಲಿ ಇವೆ, ಇನ್ನು ಅಗತ್ಯ ಇರುವಷ್ಟು ವಾಹನ ಸೌಲಭ್ಯವೂ ಇಲ್ಲ, ಸಿಬ್ಬಂದಿ ಕೊರತೆ ನೀಗಿಸಲು ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು. ವೃತ್ತ ನಿರೀಕ್ಷಕ ಕುಮಾರ, ಗ್ರಾಮಾಂತ ಠಾಣೆ ಜಿತೇಂದ್ರ ಇದ್ದರು