ಹೊಸದಿಲ್ಲಿ : “ಕಲ್ಲು ತೂರುವವರನ್ನು ಸೇನೆಯ ಜೀಪಿಗೆ ಕಟ್ಟುವ ಬದಲು ಅರುಂಧತಿ ರಾಯ್ ಅವರನ್ನು ಸೇನೆಯ ಜೀಪಿಗೆ ಕಟ್ಟಿ’ ಎಂದು ಬಿಜೆಪಿ ಸಂಸದ, ಹಿರಿಯ ಬಾಲಿವುಡ್ ನಟ ಪರೇಶ್ ರಾವಲ್ ಟ್ವೀಟ್ ಮಾಡಿ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.
ಪರೇಶ್ ರಾವಲ್ ತಮ್ಮ ಈ ವಿವಾದಾತ್ಮಕ ಟ್ವೀಟನ್ನು ಪೋಸ್ಟ್ ಮಾಡಿದ ಕೂಡಲೇ ಅನೇಕಾನೇಕ ಬಳಕೆದಾರರು ಅದಕ್ಕೆ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
26 ವರ್ಷದ ಫಾರೂಖ್ ಅಹ್ಮದ್ ದಾರ್ ಎಂಬ ಯುವಕನನ್ನು ಮಿಲಿಟರಿ ಜೀಪ್ ಗೆ ಕಟ್ಟಿ ಎಳೆದೊಯ್ದ ಪ್ರಕರಣದ ಬಗ್ಗೆ ಟೀಕೆ ಎದುರಾದ ನಂತರ ಆರ್ಮಿ ನ್ಯಾಯಾಂಗ ತನಿಖೆಗೆ ಆದೇಶ ನೀಡಿತ್ತು. ಪರೇಶ್ ಅವರು ಈಗ ಯಾವ ಕಾರಣಕ್ಕಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಆದರೆ ಪರೇಶ್ ರಾವಲ್ ಅವರ ಟ್ವೀಟ್ ಅನ್ನು 3 ಸಾವಿರ ಮಂದಿ ಮರು ಟ್ವೀಟ್ ಮಾಡಿದ್ದಾರೆ. ಸುಮಾರು 6000 ಟ್ವೀಟಿಗರು ಲೈಕ್ ಮಾಡಿರುವುದಾಗಿ ವರದಿ ತಿಳಿಸಿದೆ.
ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಒಡನೆಯೇ ಅರುಂಧತಿ ರಾಯ್ ಅವರ ರಕ್ಷಣೆಗೆ ಧಾವಿಸಿ ಬಂದು, “ಪಿಡಿಪಿ/ಬಿಜೆಪಿ ಮೈತ್ರಿಕೂಟವನ್ನು ಬೆಸೆದ ವ್ಯಕ್ತಿಯನ್ನು ಯಾಕೆ ಸೇನೆಯ ಜೀಪಿಗೆ ಕಟ್ಟಬಾರದು?’ ಎಂದು ಖಡಕ್ ಆಗಿ ಪ್ರಶ್ನಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರಿಂದ ಭಾರತೀಯ ಸೈನಿಕರನ್ನು ರಕ್ಷಿಸಲು ಸೇನಾಧಿಕಾರಿಯೊಬ್ಬರು ಕಲ್ಲು ತೂರಿದ ವ್ಯಕ್ತಿಯೊಬ್ಬನನ್ನು ಸೇನೆಯ ಜೀಪಿನ ಮುಂಭಾಗಕ್ಕೆ ಕಟ್ಟಿದ ಘಟನೆಗೆ ಸಂಬಂಧಿಸಿ ಪರೇಶ್ ರಾವಲ್ ಅವರು ಈ ಟ್ವೀಟ್ ಮಾಡಿದ್ದರು.
2014ರ ಲೋಕಸಭಾ ಚುನಾವಣೆಯಲ್ಲಿ ಪರೇಶ್ ರಾವಲ್ ಅವರು ಅಹ್ಮದಾಬಾದ್ ಪೂರ್ವ ಕ್ಷೇತ್ರದಿಂದ ಚುನಾಯಿತರಾಗಿದ್ದರು.