Advertisement
ಉದ್ಯಮದ ಕಾನ್ಸೆಪ್ಟ್ಗಳು, ಮಾದರಿಗಳು ಹೊಸ ರೂಪ ಪಡೆದುಕೊಳ್ಳುತ್ತಿವೆ. ಕೆಲ ಸಂಸ್ಥೆಗಳು ಕಚೇರಿಗಳನ್ನು ಕಿರಿದಾಗಿಸುತ್ತಿದ್ದರೆ, ಇನ್ನು ಕೆಲ ಸಂಸ್ಥೆಗಳು ಕಚೇರಿಗಳನ್ನೇ ಬಂದ್ ಮಾಡಿ ವರ್ಕ್ ಪ್ರಾಮ್ ಹೋಮ್ ಸಂಸ್ಕೃತಿ ಅಳವಡಿಸಿಕೊಳ್ಳುತ್ತಿವೆ. ವರ್ಷಾರಂಭದಲ್ಲಿ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿಯೇ ವೆಚ್ಚ ಕಡಿಮೆ ಮಾಡುವ ಬಗ್ಗೆ ಹಲವು ಉದ್ಯಮಗಳು ಯೋಜನೆ ರೂಪಿಸಿಕೊಂಡಿದ್ದವು. ಆದರೆ ಕೋವಿಡ್-19 ಸಂಕಷ್ಟ ಹೆಚ್ಚಿಸಿದ್ದರಿಂದ ಯೋಜನೆಯನ್ನು ತ್ವರಿತ ಗತಿಯಲ್ಲಿ ಅನುಷ್ಠಾನಗೊಳಿಸುತ್ತಿವೆ. ಕೈಗಾರಿಕಾ ವಸಾಹತುಗಳಲ್ಲಿ ಬಹು ಘಟಕಗಳನ್ನು ಹೊಂದಿದ್ದ ಉದ್ಯಮಗಳು ಕೆಲ ಘಟಕಗಳನ್ನು ಬಂದ್ ಮಾಡಲು ಮುಂದಾದರೆ, ಇನ್ನು ಕೆಲವು ವಿಲೀನಗೊಳಿಸಲು ಮುಂದಾಗಿವೆ.
Related Articles
Advertisement
ಆರ್ಥಿಕ ಹಿಂಜರಿತದಿಂದ ಮೊದಲೇ ರಿಯಲ್ ಎಸ್ಟೇಟ್ ಉದ್ಯಮದ ಸ್ಥಿತಿ ನಿರಾಶಾದಾಯಕವಾಗಿತ್ತು, ಆದರೀಗ ಕೊರೊನಾ ಗಾಯದ ಮೇಲೆ ಬರೆ ಎಳೆದಿದೆ. ಬಹುಕೊಠಡಿ ಮನೆಗಳಿಗಿಂತ 1ಬಿಎಚ್‌ಕೆ ಮನೆಗಳಿಗೆ, ವಾಣಿಜ್ಯ ಸಂಕಿರ್ಣಗಳಲ್ಲಿ ಸಣ್ಣ ಅಂಗಡಿ, ಕಚೇರಿಗಳಿಗೆ ಹೆಚ್ಚು ಬೇಡಿಕೆ ಬರಬಹುದೆಂದು ನಗರದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಅಭಿಪ್ರಾಯಪಡುತ್ತಾರೆ.
ಕೋವಿಡ್ ಸಾಮಾಜಿಕ, ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಿದಂತೆ ಔದ್ಯಮಿಕ ಕ್ಷೇತ್ರದ ಮೇಲೆ ಕೂಡ ಪರಿಣಾಮ ಉಂಟು ಮಾಡಿದೆ. ಹಲವು ವ್ಯಾಪಾರೋದ್ಯಮಗಳ ವರ್ಷನ್ ಬದಲಿಸಲು ಕಾರಣವಾಗಿದೆ.
ಕೋವಿಡ್ ದೊಂದಿಗೆ ನಾವು ಹೊಂದಿಕೊಂಡು ಸುರಕ್ಷತಾ ಕ್ರಮಗಳೊಂದಿಗೆ ನಮ್ಮ ವ್ಯಾಪಾರೋದ್ಯಮ ನಡೆಸುವುದು ಅನಿವಾರ್ಯ. ಆರ್ಥಿಕ ಹಿಂಜರಿತ ಉದ್ಯಮಗಳ ಮಾದರಿಗಳನ್ನು ಬದಲಿಸುವಂತೆ ಮಾಡಿದೆ ಎಂಬುದು ನಿಸ್ಸಂಶಯ. ವರ್ಕ್ ಪ್ರಾಮ್ ಹೋಮ್ ಎಂಬುದು ಐಟಿ ಕ್ಷೇತ್ರಕ್ಕೆ ಹೊಸದಲ್ಲ. ಆದರೆ ಈಗ ಹಲವು ಕ್ಷೇತ್ರಗಳು ಇದೇ ಮಾದರಿ ಅನುಸರಿಸುತ್ತಿವೆ. ಹಲವು ಸಂಸ್ಥೆಗಳು ಕಚೇರಿಗಳನ್ನು ಕಿರಿದಾಗಿಸಿದರೆ, ಇನ್ನು ಕೆಲ ಕಚೇರಿ ಕಾನ್ಸೆಪ್ಟ್ ಇಲ್ಲವಾಗಿಸಿವೆ. ಕಚೇರಿ ಬಾಡಿಗೆ, ಸಿಬ್ಬಂದಿ ಪ್ರಯಾಣ, ಹೌಸ್‌ಕೀಪಿಂಗ್, ಭದ್ರತೆ ಸೇರಿದಂತೆ ಶೇ.20ರಿಂದ ಶೇ.30 ವೆಚ್ಚ ತಗ್ಗಿಸಲು ಮುಂದಾಗಿವೆ. ಉತ್ಪಾದನಾ ಕ್ಷೇತ್ರಕ್ಕೆ ಇದು ಅಮೋಘ ಅವಕಾಶ ಕಲ್ಪಿಸಿದಂತಾಗಿದೆ. ಗುಣಮಟ್ಟದ ಉತ್ಪನ್ನಗಳಿಗೆ ಉತ್ತಮ ಮೌಲ್ಯ ದೊರೆಯಲಿದೆ. ಜಗತ್ತು ನಮ್ಮ ದೇಶದೆಡೆಗೆ ನೋಡುತ್ತಿದ್ದು, ಕೃಷಿ ಹಾಗೂ ಆಹಾರೋದ್ಯಮಗಳ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುವುದು. ಆದರೆ ಇದು ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. –ರವಿ ಗುತ್ತಲ, ನಿರ್ದೇಶಕರು, ಸೆಂಟರ್ ಫಾರ್ ಇನ್ನೊವೇಶನ್ ಆ್ಯಂಡ್ ಪ್ರಾಡಕ್ಟ್ ಡೆವಲಪ್‌ಮೆಂಟ್, ಕೆಎಲ್‌ಇ ವಿಶ್ವವಿದ್ಯಾಲಯ
ಆರ್ಥಿಕ ಹಿನ್ನಡೆ ಎಂದು ಪರಿಗಣಿಸದೇ ಅವಕಾಶ ಎಂದೇ ತಿಳಿದರೆ ಏಳ್ಗೆಯಾಗಲು ಸಾಧ್ಯ. ಉದ್ಯಮ ಕ್ಷೇತ್ರದಲ್ಲಿ ಯಾವುದೇ ಬದಲಾವಣೆಯಾದರೂ ಉದ್ಯೋಗಿಗಳಂತೂ ಬೇಕು. ಉದ್ಯಮಗಳ ವಿಸ್ತರಣೆ ವಿಳಂಬವಾಗಬಹುದು. ಇಲ್ಲವೇ ಉದ್ಯಮಗಳ ಮಾದರಿ ಬದಲಾಗಬಹುದು. ಆದರೆ ಸ್ಟಾರ್ಟಪ್‌ಗ್ಳಿಗೆ ಇದು ಸುಸಂದರ್ಭ. ನವೀನ ಉತ್ಪನ್ನಗಳನ್ನು ಹಾಗೂ ವಿಭಿನ್ನ ಸೇವೆಗಳನ್ನು ಒದಗಿಸುವವರಿಗೆ ಇದು ಶುಭ ಕಾಲ. ಕೌಶಲ್ಯ ಹೊಂದಿದವರಿಗೆ ಬೇಡಿಕೆ ಹೆಚ್ಚಾಗಲಿದೆ, ಅಂಥವರು ಉತ್ತಮ ಅವಕಾಶ ಪಡೆಯಲು ಸಾಧ್ಯವಿದೆ. ನಿರ್ವಹಣಾ ತಜ್ಞರು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ ತೋರಲು ಅವಕಾಶವಿದೆ. –ಡಾ|ವಿಶ್ವನಾಥ ಕೊರವಿ ನಿರ್ದೇಶಕರು, ಚೇತನ ಬ್ಯುಸಿನೆಸ್ ಸ್ಕೂಲ್
ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಎಲ್ಲ ಉದ್ಯಮಿಗಳು ವೆಚ್ಚ ಕಡಿಮೆ ಮಾಡಲು ಮುಂದಾಗುವುದು ಸಹಜ ಪ್ರಕ್ರಿಯೆ. ಕಚೇರಿಗಳನ್ನು ಕಿರಿದಾಗಿಸಿಕೊಳ್ಳಲು ನಗರದ ಅನೇಕ ವ್ಯಾಪಾರೋದ್ಯಮಿಗಳು ಮುಂದಾಗುತ್ತಿದ್ದಾರೆ. ಕಿರಿದಾದ ಜಾಗದಲ್ಲಿ ಕಚೇರಿ ಒಳಾಂಗಣ ವಿನ್ಯಾಸ ಮಾಡಿಕೊಡುವಂತೆ ಕೇಳುವವರ ಸಂಖ್ಯೆ ಹೆಚ್ಚಾಗಿದೆ. ಇನ್ನು ಕೆಲವರು ಮನೆಯಲ್ಲೇ ಕಚೇರಿ ವಿನ್ಯಾಸ ಮಾಡಿಸಿಕೊಳ್ಳುತ್ತಿದ್ದಾರೆ. ಮುಂದೆ ನಗರದ ಶೋರೂಮ್‌ಗಳ ವಿನ್ಯಾಸ ಕೂಡ ಬದಲಾಗಬಹುದು. ಒಳಾಂಗಣ ವಿನ್ಯಾಸಗಾರರಿಗೆ ಈಗ ಬೇಡಿಕೆ ಹೆಚ್ಚಾಗಿದೆ. –ಪ್ರತಿಭಾ ಪುರೋಹಿತ, ಒಳಾಂಗಣ ವಿನ್ಯಾಸಗಾರರು.
-ವಿಶ್ವನಾಥ ಕೋಟಿ