Advertisement

ಬಹುಗ್ರಾಮ ನೀರಿನ ಯೋಜನೆಗೆ ತತ್‌ಕ್ಷಣ ಸ್ಪಂದನೆ

01:38 AM Nov 09, 2019 | mahesh |

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಜಿ.ಪಂ. ಸದಸ್ಯರು-ಅಧಿಕಾರಿಗಳು ಚರ್ಚಿಸಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಬೇಡಿಕೆ ಸಲ್ಲಿಸಿದಲ್ಲಿ ರಾಜ್ಯ ಸರಕಾರ ಅದಕ್ಕೆ ತತ್‌ಕ್ಷಣ ಸ್ಪಂದಿಸಲಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

Advertisement

ಅವರು ಶುಕ್ರವಾರ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ದ.ಕ.ಜಿ.ಪಂ.ಹಾಗೂ ಬಂಟ್ವಾಳ ತಾ.ಪಂ.ನ ಆಶ್ರಯದಲ್ಲಿ ದ.ಕ. ಜಿಲ್ಲೆಯ ಎಲ್ಲ ಗ್ರಾ.ಪಂ.ಅಧ್ಯಕ್ಷ ರು, ಉಪಾಧ್ಯಕ್ಷರು ಹಾಗೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ಚಿಂತನ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಂಟ್ವಾಳದ ಬಹುಗ್ರಾಮ ಯೋಜನೆ ಪೂರ್ಣಗೊಳಿಸುವುದಕ್ಕೆ ಅಗತ್ಯವಿರುವ 45.50 ಕೋ.ರೂ.ಗಳ ಹೆಚ್ಚಿನ ಅನುದಾನವನ್ನು ಸರಕಾರ ನೀಡಲಿದೆ. ತೆರಿಗೆ ಸಂಗ್ರಹದಲ್ಲಿ ಉತ್ತಮ ಸಾಧನೆ ಮಾಡಿರುವ ದ.ಕ. ಜಿಲ್ಲೆಯು ಇತರರಿಗೆ ಮಾದರಿಯಾಗಿದೆ ಎಂದರು.

ಪ್ರಧಾನಿ ಮೋದಿ ಕಲ್ಪನೆಯ ಸ್ವಚ್ಛ ಭಾರತ್‌ ಅಭಿಯಾನಕ್ಕೆ ರಾಜ್ಯ ಸರಕಾರ ಹೆಚ್ಚಿನ ಆದ್ಯತೆ ನೀಡಿದ್ದು, ಗ್ರಾಮೀಣ ಭಾಗದ ತ್ಯಾಜ್ಯ ವಿಲೇವಾರಿಯ ದೃಷ್ಟಿಯಿಂದ 7-8 ಗ್ರಾ.ಪಂ.ಗಳು ಸೇರಿ ಘಟಕ ಸ್ಥಾಪಿಸುವುದಕ್ಕೆ ಪ್ರೇರೇಪಣೆ ನೀಡಲಿದ್ದೇವೆ. ಸೋಲಾರ್‌ ದೀಪಗಳ ಅಳವಡಿಕೆಗೂ ಸರಕಾರ ಸಹಕಾರ ನೀಡಲಿದೆ. ಗ್ರಾಮೀಣ ರಸ್ತೆಗಳ ದುರಸ್ತಿಗೆ ಈಗಾಗಲೇ 1500 ಕೋ.ರೂ.ಗಳ ನೆರವನ್ನು ಮುಖ್ಯಮಂತ್ರಿ ಘೋಷಿಸಿದ್ದಾರೆ ಎಂದು ವಿವರಿಸಿದರು.

ಮುಖ್ಯಅತಿಥಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕೆಲವೇ ದಿನಗಳಲ್ಲಿ ಜಿ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಕಾರ್ಯಾಗಾರ ನಡೆಸಿ ಅವರ ವಿವೇಚನಾ ನಿಧಿಯ ಅನುದಾನವನ್ನು 1 ಕೋ.ರೂ.ಗಳಿಗೆ ಹೆಚ್ಚಿಸುವ ಕಾರ್ಯ ಮಾಡಿದ್ದಾರೆ. ಜಿಲ್ಲೆಯ ಎಲ್ಲ ಗ್ರಾಮಗಳಲ್ಲೂ ಶ್ಮಶಾನ ನಿರ್ಮಿಸುವ ನಿಟ್ಟಿನಲ್ಲಿ ತಮ್ಮ ವಿವೇಚನಾ ನಿಧಿಯಿಂದ 10 ಲಕ್ಷ ರೂ.ಗಳನ್ನು ನೀಡುವ ಜತೆಗೆ ಪಂಚಾಯತ್‌ ಜನಪ್ರತಿನಿಧಿಗಳ ಗೌರವ ಧನ ಏರಿಕೆ ಮಾಡುವಂತೆ ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಮಾತನಾಡಿದರು. ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹಾಗೂ ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಬೇಡಿಕೆಗಳನ್ನು ಮುಂದಿಟ್ಟರು. ಕೊಳ್ನಾಡು ಗ್ರಾ.ಪಂ. ಅಧ್ಯಕ್ಷ ಕೆ. ಸುಭಾಶ್ಚಂದ್ರ ಶೆಟ್ಟಿ ಹಾಗೂ ವಿಟ್ಲಪಟ್ನೂರು ಗ್ರಾ.ಪಂ. ಅಧ್ಯಕ್ಷ ರವೀಶ ತಮ್ಮ ಗ್ರಾ.ಪಂ.ಗಳ ಸಾಧನೆಗಳನ್ನು ವಿವರಿಸಿದರು.

Advertisement

ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಜನಾರ್ದನ ಗೌಡ, ಯು.ಪಿ. ಇಬ್ರಾಹಿಂ, ಸಿಇಒ ಡಾ| ಆರ್‌. ಸೆಲ್ವಮಣಿ, ಸಚಿವರ ವಿಶೇಷಾಧಿಕಾರಿ ಜಯರಾಮ್‌, ಪುತ್ತೂರು ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ಬಂಟ್ವಾಳ ತಾ.ಪಂ. ಉಪಾಧ್ಯಕ್ಷ ಅಬ್ಟಾಸ್‌ ಆಲಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಬಂಟ್ವಾಳ ತಹಶೀಲ್ದಾರ್‌ ರಶ್ಮಿ ಎಸ್‌.ಆರ್‌., ಜಿಲ್ಲೆಯ ತಾಲೂಕು ಪಂಚಾಯತ್‌ಗಳ ಕಾರ್ಯ ನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.

ಜಿ.ಪಂ. ಯೋಜನಾ ನಿರ್ದೇಶಕ ಮಧುಕುಮಾರ್‌ ಸ್ವಾಗತಿಸಿದರು. ಬಂಟ್ವಾಳ ತಾ.ಪಂ. ಇಒ ರಾಜಣ್ಣ ವಂದಿಸಿದರು. ನಿವೃತ್ತ ಶಿಕ್ಷಕ ಬಿ. ರಾಮಚಂದ್ರ ರಾವ್‌ ಕಾರ್ಯಕ್ರಮ ನಿರ್ವಹಿಸಿದರು.

ಬಹುಗ್ರಾಮ ಯೋಜನೆ ಉದ್ಘಾಟನೆ
ಸಭೆಗೆ ಮೊದಲು ಈಶ್ವರಪ್ಪ ಅವರು ಕಡೇಶ್ವಾಲ್ಯದಲ್ಲಿ ಮಾಣಿ ಮತ್ತು ಇತರ 51 ಜನವಸತಿ ಪ್ರದೇಶಗಳ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆಯನ್ನು ಉದ್ಘಾಟಿಸಿದರು. ಈ ವೇಳೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‌ಕುಮಾರ್‌ ಕಟೀಲು, ಶಾಸಕ ರಾಜೇಶ್‌ ನಾೖಕ್‌ ಮೊದಲಾದವರಿದ್ದರು.

ಇಲಾಖೆ ಬದಲಿಸೋಣ!
ನಾನು ದೇವರ ಮೇಲೆ ಭಕ್ತಿ ಇದ್ದವನು ಗ್ರಾಮೀಣಾಭಿವೃದ್ಧಿ ಸಚಿವನಾಗಿದ್ದೇನೆ, ಪಂಚಾಯತ್‌ರಾಜ್‌ ಇಲಾಖೆಯ ಇಂಚಿಂಚು ಮಾಹಿತಿ ಇರುವ ಕೋಟ ಅವರು ಮುಜರಾಯಿ ಸಚಿವರಾಗಿದ್ದಾರೆ. ಹೀಗಾಗಿ ನಾವು ಇಲಾಖೆಗಳನ್ನು ಬದಲಾಯಿಸಿಕೊಳ್ಳೋಣ ಎಂದು ಈಶ್ವರಪ್ಪ ಹಾಸ್ಯ ಮಾಡಿದರು.

“ಅನರ್ಹ ಶಾಸಕರಿಗೆ ಅನ್ಯಾಯವಾಗದು ‘
ಅನರ್ಹ ಶಾಸಕರ ರಾಜೀನಾಮೆಯಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದದ್ದು ಸತ್ಯ. ಯಾವುದೇ ಕಾರಣಕ್ಕೂ ಅವರಿಗೆ ಅನ್ಯಾಯ ಮಾಡುವುದಿಲ್ಲ ಎಂದು ಈಶ್ವರಪ್ಪ ತಿಳಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್‌ ಶಾಸಕರು ರಾಜೀನಾಮೆ ನೀಡಿ ಹೊರ ಬಂದಿದ್ದಾರೆ. ಅನರ್ಹ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್‌ ಶೀಘ್ರವೇ ತೀರ್ಪು ಪ್ರಕಟಿಸಲಿದೆ. ಆ ತೀರ್ಪಿಗೆ ತಲೆ ಬಾಗುತ್ತೇವೆ ಎಂದರು.

ಸಿದ್ದರಾಮಯ್ಯ ತಿರುಕನ ಕನಸು
ಸಿದ್ದರಾಮಯ್ಯ ಮತ್ತೆ ಸಿಎಂ ಆಗಲು ತಿರುಕನ ಕನಸು ಕಾಣುತ್ತಿದ್ದಾರೆ. ಇನ್ನೊಂದೆಡೆ ಡಿಕೆಶಿ ತಾನೇ ಮುಂದಿನ ಸಿಎಂ ಎಂಬ ಭ್ರಮೆಯಲ್ಲಿದ್ದಾರೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next