Advertisement

ಮರಳು ಸಮಸ್ಯೆ ಪರಿಹರಿಸಲು ತತ್‌ಕ್ಷಣ ಕ್ರಮ: ಸುನಿಲ್‌

06:25 AM Oct 05, 2018 | Team Udayavani |

ಕಾರ್ಕಳ: ಮರಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಜತೆಗೆ ಹಾಗೂ ಸ್ಥಳೀಯ ಪಿಡಿಒ ಸಹಕಾರ ಪಡೆದು ತಾಲೂಕಿನಲ್ಲೇ ಮರಳಿರುವುದನ್ನು ಗುರುತು ಮಾಡಲಾಗುವುದು. ಅನಂತರ ಮುಂದಿನ ಕ್ರಮ ಕೈಗೊಂಡು ಟೆಂಡರ್‌ ಮೂಲಕ ಮರಳು ತೆಗೆಯಲು ಅವಕಾಶ ಮಾಡಿಕೊಡಲಾಗುತ್ತದೆ. ಮುಂದಿನ 15 ದಿನಗಳ ಇದರ ಪ್ರಕ್ರಿಯೆ ಮುಗಿಸುವ ಬಗ್ಗೆ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಅವರು ಹೇಳಿದರು.

Advertisement

ಅ. 4ರಂದು ತಾ.ಪಂ. ಸಭಾಂಗಣದಲ್ಲಿ  ನಡೆದ ತಾಲೂಕು ಮಟ್ಟದ ಸಮೀಕ್ಷಾ ಸಭೆ ಹಾಗೂ ಸಾರ್ವಜನಿಕ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ, ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.

ಸಭೆಯಲ್ಲಿ ನಿರ್ಣಯ 
ಅಂತರ್‌ಜಿಲ್ಲಾ  ಮರಳು ಸಾಗಾಟದ ವಿಚಾರಕ್ಕೆ ಸಂಬಂಧಿಸಿದಂತೆ ದ.ಕ ಜಿಲ್ಲಾಧಿಕಾರಿ ಅವರ ಜತೆಗೆ ಸಭೆ ನಡೆಸಿ ಅಲ್ಲಿಂದ ಮರಳು ತರಲು ಅನುಮತಿ ಪಡೆಯುವ ಬಗ್ಗೆಯೂ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಪುರಸಭೆಯ ವ್ಯಾಪ್ತಿಯೊಳಗೆ 25 ಸೆಂಟ್ಸ್‌ ಜಾಗ ತುಂಡು ಮಾಡಿ ಕೊಡಲು ಸಮಸ್ಯೆ ಆಗುತ್ತಿದ್ದು, ಅದನ್ನು ತತ್‌ಕ್ಷಣ ಪರಿಹರಿಸುವ ಆದೇಶ ಸಭೆಯಲ್ಲಿ ಆಗಿದೆ. ಲೇಔಟ್‌ ನಿರ್ಮಾಣದ ಸಮಸ್ಯೆಗಳ ಬಗ್ಗೆಯೂ ಸಾರ್ವಜನಿಕರಿಂದ ತಿಳಿದು ಬಂದಿದೆ. ಈ ಬಗ್ಗೆ ಮೇಲಧಿಕಾರಿಗಳಲ್ಲಿ ಚರ್ಚಿಸಬೇಕಿದೆ. ಹೀಗಾಗಿ ಮತ್ತೂಂದು ಸುತ್ತಿನ ಸಭೆ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಮತ್ತು ಗ್ರಾಮೀಣ ಅಭಿವೃದ್ಧಿಯ ಮುಖ್ಯ ಕಾರ್ಯದರ್ಶಿಗಳನ್ನು ಉಡುಪಿ ಜಿಲ್ಲೆಗೆ ಕರೆಸಿ ಅವರ ಸಮ್ಮುಖದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ಸಮಸ್ಯೆ ಬಗೆಹರಿಸಲು ಪ್ರಯತ್ನ
ಸಾಕಷ್ಟು ಸಮಸ್ಯೆಗಳಿರುವ ಬಗ್ಗೆ ಸಾರ್ವಜನಿಕರಿಂದ ತಿಳಿದುಬಂದಿದ್ದು, ಈ ಬಗ್ಗೆ ಜಿಲ್ಲಾ ಮಟ್ಟದಲ್ಲಿ, ಸ್ಥಳೀಯ ಇಲಾಖೆಯ ಮಟ್ಟದಲ್ಲಿ ಯಾವುದನ್ನು ಪರಿಹರಿಸಲು ಸಾಧ್ಯವಾಗುತ್ತೋ ಅದನ್ನು ಪರಿಹಾರ ಮಾಡುವ ಪ್ರಯತ್ನ ಮಾಡಲಾಗುವುದು.

Advertisement

ವಿಪರೀತ ಮಳೆಯಿಂದಾಗಿ ರಸ್ತೆಗಳು ಹದಗೆಟ್ಟಿದ್ದು, ಆ ರಸ್ತೆಗಳಿಗೆ ಮೊದಲ ಆದ್ಯತೆ ನೀಡಿ ಗುಂಡಿಗಳನ್ನು ಮುಚ್ಚುವ ಕಾರ್ಯ ಹಾಗೂ ಮರು ಡಾಮರು ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.

ಸಭೆಯಲ್ಲಿ 9/11, ಮರಳುಗಾರಿಕೆ ಹಾಗೂ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಹಾಗೂ ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಅವರೊಂದಿಗೆ ಚರ್ಚೆ ನಡೆಯಿತು.ತಾ.ಪಂ. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಜಿ.ಪಂ. ಸದಸ್ಯರಾದ ಸುಮಿತ್‌ ಶೆಟ್ಟಿ ಕೌಡೂರು, ಉದಯ ಎಸ್‌. ಕೋಟ್ಯಾನ್‌, ರೇಶ್ಮಾ ಉದಯ ಶೆಟ್ಟಿ, ಜ್ಯೋತಿ ಹರೀಶ್‌, ದಿವ್ಯಶ್ರೀ ಅಮೀನ್‌, ತಾ.ಪಂ. ಉಪಾಧ್ಯಕ್ಷ ಗೋಪಾಲ ಮೂಲ್ಯ ಉಪಸ್ಥಿತರಿದ್ದರು.

ಬಜೆಟ್‌ ಆಧಾರದಲ್ಲಿ  ಅಭಿವೃದ್ಧಿ
ಅಭಿವೃದ್ಧಿ ಕುರಿತಂತೆ ಸಾಕಷ್ಟು ಅರ್ಜಿಗಳು ಬಂದಿವೆ. ಸರಕಾರ ರಚನೆಯಾಗಿ ಮೂರ್‍ನಾಲ್ಕು ತಿಂಗಳಾಗಿದೆ. ಈ ಬಾರಿ ನಮ್ಮ ಜಿಲ್ಲೆಗೆ ಬರುವ ಬಜೆಟ್‌ ನೋಡಿ ಅನಂತರ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ  ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next