ಹುಳಿಯಾರು: ಏಳೆಂಟು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಹುಳಿಯಾರು-ಬಾಣಾವರ ರಸ್ತೆಗೆ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿದರು. ಹುಳಿಯಾರಿನ ಒಣಕಾಲುವೆ ಬಳಿ 250 ಕೋಟಿ ರೂ. ವೆಚ್ಚದ ಈ ಕಾಮಗಾರಿಗೆ ಸಂಸದರು ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕಳೆದ ಏಳೆಂಟು ವರ್ಷಗಳ ಹಿಂದೆಯೇ ಈ ರಸ್ತೆಗೆ ಗುತ್ತಿಗೆ ಪಡೆದಿದ್ದವರು ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದರು.
ಪರಿಣಾಮ ಸಂಚಾರಕ್ಕೆ ಭಾರಿ ತೊಡಕಾಗುವ ಜೊತೆಗೆ ರಸ್ತೆಯ ಧೂಳಿನಿಂದ ಇಲ್ಲಿನ ನಿವಾಸಿಗಳು, ಸಂಚಾರಿಗಳು ಹಾಗೂ ಬೆಳೆಗಳ ಮೇಲೆ ದುಷ್ಪರಿಣಾಮ ಬೀರಿತ್ತು. ಇದನ್ನು ಮನಗಂಡು ಮರು ಟೆಂಡರ್ ಕರೆದು ಕಾಮಗಾರಿಗ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಸಂಸದರ ನಿಧಿಯಿಂದ ಈ ಹಿಂದೆ ಹುಳಿಯಾರು ಅಂಚೆ ಕಚೇರಿ ಕಟ್ಟಡಕ್ಕೆ 4.40 ಲಕ್ಷ ರೂ. ಮೀಸಲಿಟ್ಟು ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಆದರೆ, ಉಳಿದ ಬಾಬ್ತು ಹಣವನ್ನು ಅಂಚೆ ಇಲಾಖೆ ಒದಗಿಸದ ಕಾರಣ ಕಾಮಗಾರಿ ಆರಂಭಿಸಲಾಗಿಲ್ಲ. ಹಾಗಾಗಿ ಸಂಸದರ ನಿಧಿಯಲ್ಲಿ ನೀಡಿದ ಹಣದಲ್ಲೇ ಎಷ್ಟಾಗುತ್ತೋ ಅಷ್ಟು ಕಾಮಗಾರಿ ಮಾಡಿ ಉಳಿದ ಕಾಮಗಾರಿಯನ್ನು ಅಂಚೆ ಇಲಾಖೆ ಹಣ ಬಿಡುಗಡೆ ಮಾಡಿದ ನಂತರ ಮಾಡಿದರಾಯ್ತು ಎಂದು ಗುತ್ತಿಗೆದಾರರಿಗೆ ತಿಳಿಸಿರುವುದಾಗಿ ಹೇಳಿದರು.
ಮೈತ್ರಿ ಅಭ್ಯರ್ಥಿ ಖಚಿತ: ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ಅಭ್ಯರ್ಥಿ ಕಣಕ್ಕಿಳಿಯುವುದು ನಿಶ್ಚಿತ. ಆದರೆ, ಅಭ್ಯರ್ಥಿ ಯಾರಾಗಬಹುದೆಂದು ಹೇಳುವ ಸೂಕ್ತ ವ್ಯಕ್ತಿ ನಾನಲ್ಲ. ನಾನು ಆಯ್ಕೆ ಸಮಿತಿಯಲ್ಲಿಲ್ಲ. ಹಾಗಾಗಿ ಸಂಸದನಾಗಿ ಗೆದ್ದ ಮರು ಗಳಿಗೆಯಿಂದ ಇಲ್ಲಿಯವೆಗೂ ವಿರಮಿಸದೆ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಲ್ಲಿ ಕೆಲಸ ಮಾಡಿದ್ದೇನೆ. ಸಂಸತ್ ಅಧಿವೇಶನದಲ್ಲೂ ಜಿಲ್ಲೆಯ ಅನೇಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದೇನೆ. ಒಟ್ಟಾರೆ ಕ್ಷೇತ್ರದ ಜನರ ವಿಶ್ವಾಸಕ್ಕೆ ಪಾತ್ರನಾಗಿದ್ದೇನೆ ಎಂದರು.
ಜಿಪಂ ಸದಸ್ಯ ವೈ.ಸಿ.ಸಿದ್ದರಾಮಯ್ಯ, ಪಪಂ ಅಧ್ಯಕ್ಷೆ ಗೀತಾಪ್ರದೀಪ್, ಸದಸ್ಯ ಜಬೀಉಲ್ಲಾ, ಎಚ್.ಆರ್.ವೆಂಕಟೇಶ್, ಆಯುಬ್ ಖಾನ್, ಹುಳಿಯಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ವೆಂಕಟೇಶ್, ಹುಳಿಯಾರು ಯೂತ್ ಕಾಂಗ್ರೆಸ್ ಅಧ್ಯಕ್ಷ ಸಕ್ಲೇನ್, ಮಾಜಿ ಅಧ್ಯಕ್ಷ ಎಚ್.ಅಶೋಕ್, ತಾಪಂ ಮಾಜಿ ಸದಸ್ಯ ವೈ.ಆರ್.ಮಲ್ಲಿಕಾರ್ಜುನಯ್ಯ, ಕಾಂಗ್ರೆಸ್ ಮುಖಂಡ ಪ್ರಸನ್ನಕುಮಾರ್, ಸಾಮಾಜಿಕ ಜಾಲತಾಣದ ಸಂಚಾಲಕ ಇಮ್ರಾಜ್ ಮತ್ತಿತರರಿದ್ದರು.
ಉಪಮುಖ್ಯಮಂತ್ರಿ ಬರಲೇ ಇಲ್ಲ: ಹುಳಿಯಾರಿನ ವಿವಿಧ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬರುತ್ತಾರೆಂದು ಭಾರಿ ಪ್ರಚಾರ ಮಾಡಲಾಗಿತ್ತು. ವಾಟ್ಸ್ ಆ್ಯಪ್‌ನಲ್ಲಿ ಮಂಗಳವಾರ ಪ್ರವಾಸ ವಿವರ ಹಾಕಲಾಗಿತ್ತು. ಹಾಗಾಗಿ ಶಂಕುಸ್ಥಾಪನಾ ಸ್ಥಳಕ್ಕೆ ಅಗ್ನಿಶಾಮಕದಳ, ಆ್ಯಂಬುಲೆನ್ಸ್ ನಿಲ್ಲಿಸಲಾಗಿತ್ತು. ಪಟ್ಟಣ ಪಂಚಾಯ್ತಿಯಿಂದ ಪ್ರಮುಖ ರಸ್ತೆಗಳನ್ನು ತರಾತುರಿಯಲ್ಲಿ ಸ್ವತ್ಛ ಮಾಡಲಾಗಿತ್ತು.
ಆದರೆ, ಉಪಮುಖ್ಯಮಂತ್ರಿಗಳು ಮಾತ್ರ ಕಾರ್ಯಕ್ರಮಕ್ಕೆ ಬರಲಿಲ್ಲ. ಉಪಮುಖ್ಯಮಂತ್ರಿ ಮಂಗಳವಾರದ ಹುಳಿಯಾರು ಕಾರ್ಯಕ್ರಮ ಪಟ್ಟಿಯಲ್ಲಿ ಅಲೆಮಾರಿಗಳಿಗೆ ಹಕ್ಕುಪತ್ರ ನೀಡುವುದಾಗಿ ತಿಳಿಸಲಾಗಿತ್ತು. ಹಾಗಾಗಿ ಅಪಾರ ಸಂಖ್ಯೆಯಲ್ಲಿ ಅಲೆಮಾರಿಗಳು ಶಂಕುಸ್ಥಾಪನಾ ಸ್ಥಳ ಮತ್ತು ಪಟ್ಟಣ ಪಂಚಾಯ್ತಿ ಬಳಿ ಜಮಾಯಿಸಿದ್ದರು. ಆದರೆ, ಉಪಮುಖ್ಯಮಂತ್ರಿಗಳೂ ಬರಲಿಲ್ಲ, ಹಕ್ಕುಪತ್ರ ವಿತರಿಸಲಿಲ್ಲ.
ಈ ಬಗ್ಗೆ ಸಂಸದ ಮುದ್ದಹನುಮೇಗೌಡ ಪ್ರತಿಕ್ರಿಯಿಸಿ, ರಾಜೀವಗಾಂಧಿ ವಸತಿ ನಿಗಮದಲ್ಲಿ ಸಂಪೂರ್ಣವಾಗಿ ಹಕ್ಕುಪತ್ರಗಳು ಸಿದ್ಧವಾಗಿರಲಿಲ್ಲ. ಹಾಗಾಗಿ ವಿತರಿಸಲಾಗಿಲ್ಲ. ಕಂಪನಹಳ್ಳಿ ಬಳಿ ಅಲೆಮಾರಿಗಳಿಗೆ ನಿವೇಶನ ನೀಡುವುದು ನಿಶ್ವಿತವಾಗಿದ್ದು, ಶೀಘ್ರದಲ್ಲೇ ಹಕ್ಕುಪತ್ರ ನೀಡುವುದಾಗಿ ಹೇಳಿ ನಿರ್ಗಮಿಸಿದರು.