Advertisement
ಸೂರ್ಯನ ಬೆಳಕಿನಿಂದ ನಿಸರ್ಗ ದತ್ತ ವಿದ್ಯುತ್ ಪಡೆಯುವ ಸೌರ ವಿದ್ಯುತ್ ಉಪಕರಣಗಳನ್ನು ದಾನಿಗಳ ನೆರವು ಪಡೆದುಕೊಂಡು ಶಾಲೆಯ ಛಾವಣಿಯಲ್ಲಿ ಅಳವಡಿಸಲಾಗಿದೆ. ಆಗಾಗ ಕೈಕೊಡುವ ವಿದ್ಯುತ್, ತಿಂಗಳಾಂತ್ಯದ ದುಬಾರಿ ಬಿಲ್ ಪಾವತಿಸುವ ಜಂಜಾಟದಿಂದ ಶಾಲೆಗೆ ಮುಕ್ತಿ ಸಿಕ್ಕಿದೆ.
ಎಲ್‌ಎನ್‌ಟಿ ಸಂಸ್ಥೆಯು ಶಾಲೆಯ ಬೇಡಿಕೆಗೆ ಸ್ಪಂದಿಸಿ ಸೌರ ವಿದ್ಯುತ್ ಕೊಡುಗೆ ನೀಡಿದೆ. 750 ವಾಟ್‌ನ ಪ್ಯಾನಲ್, 2 ಕೆವಿ ಯುಪಿಎಸ್, 150 ಎಎಚ್ ಸಾಮರ್ಥ್ಯದ ಬ್ಯಾಟರಿ ಒಳಗೊಂಡ 1.10 ಲಕ್ಷ ರೂ. ವೆಚ್ಚದ ಸೋಲಾರ್ ಸಿಸ್ಟಮ್ ಆಳವಡಿಸಲಾಗಿದೆ. ನೀರಿನ ಪಂಪ್ ಒಂದನ್ನು ಹೊರತು ಪಡಿಸಿದರೆ ಶಾಲೆಯ ತರಗತಿ ಕೋಣೆಯಲ್ಲಿರುವ 12 ಫ್ಯಾನ್, 12 ಬಲ್ಬ್, ಮಿಕ್ಸಿ, ಗ್ರೈಂಡರ್ ಹಾಗೂ ಕಂಪ್ಯೂಟರ್ ಸೋಲಾರ್ ವಿದ್ಯುತ್ ಮೂಲಕ ಚಾಲನೆಗೊಳ್ಳುತ್ತವೆ. ಇದರಿಂದಾಗಿ ವಿದ್ಯುತ್ ಉಳಿತಾಯವಾಗುತ್ತಿದ್ದು, ಶಾಲೆಗೆ ಪ್ರಯೋಜನಕಾರಿಯಾಗಿದೆ.
Related Articles
ಒಂದು ಹಂತದಲ್ಲಿ ಬಾಗಿಲು ಹಾಕ ಬಹುದಾದ ಶಾಲೆಗಳ ಪಟ್ಟಿಗೆ ಸೇರ್ಪಡೆಯಾಗುವ ಹಂತದಲ್ಲಿದ್ದ ಈ ಶಾಲೆಯು ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ನಿರಂತರ ಪ್ರಯತ್ನದ ಫಲವಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿಕೊಂಡಿತ್ತು.
Advertisement
ಪ್ರಸ್ತುತ ಪೂರ್ವ ಪ್ರಾಥಮಿಕ ಒಟ್ಟಾಗಿ 108 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಗುಣಮಟ್ಟದ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ಪಠ್ಯೇತರ ಚಟುವಟಿಕೆಗೂ ಈ ಶಾಲೆಯಲ್ಲಿ ಆದ್ಯತೆ ನೀಡಲಾಗುತ್ತಿದೆ. ದಾನಿಗಳು ಸಂಘ- ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳ ಕೊಡುಗೆಯೂ ಶಾಲೆಯ ಅಭಿವೃದ್ಧಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಹಾಗಾಗಿ ವಿದ್ಯಾರ್ಥಿಗಳ ಸೇರ್ಪಡೆ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.
ಪರಿಸರ ಮಿತ್ರ ಶಾಲೆ ಪ್ರಶಸ್ತಿಶಾಲೆಯ ಆವರಣದಲ್ಲಿ ಅಡಿಕೆ, ತೆಂಗು ಕೃಷಿ, ತರಕಾರಿ ಕೈ ತೋಟ, ಭತ್ತದ ಕೃಷಿ, ತರಕಾರಿ ಬೆಳೆಯುವ ಮೂಲಕ ಈ ಶಾಲೆ ಮೂರು ವರ್ಷಗಳಿಂದ ಗಮನ ಸೆಳೆದಿದೆ. ಶಾಲೆ ಹಿಂಭಾಗದಲ್ಲಿ ಕೈ ತೋಟವಿದ್ದು ತೊಂಡೆ, ಬೆಂಡೆ, ಬದನೆ ಮೊದಲಾದ ತರಕಾರಿ ಬೆಳೆಸಲಾಗಿದೆ. ಜತೆಗೆ 50 ತೆಂಗಿನ ಗಿಡಗಳನ್ನು ನೆಟ್ಟು, ವಿದ್ಯಾರ್ಥಿಗಳ ಹೆಸರಿನಲ್ಲಿ ಬೆಳೆಸಲಾಗುತ್ತಿದೆ. ಅಡಿಕೆ ಮರಗಳಲ್ಲೂ ವಿದ್ಯಾರ್ಥಿಗಳ ಹೆಸರಿನ ಫಲಕ ಅಳವಡಿಸಿ, ಅವರೇ ಅದರ ನಿರ್ವಹಣೆ ಮಾಡುವಂತೆ ಜವಾಬ್ದಾರಿ ವಹಿಸಲಾಗಿದೆ. ಅಡಿಕೆ ಗಿಡಗಳೀಗ ಫಲ ನೀಡುವ ಹಂತಕ್ಕೆ ಬೆಳೆದಿವೆ. ವಿದ್ಯಾರ್ಥಿಗಳಿಗೆ ತಾವು ಬೆಳೆಸಿದ ಗಿಡ ಎನ್ನುವ ಹೆಮ್ಮೆ ಮೂಡಿಸಿದೆ. ಶಾಲೆಯ ಪರಿಸರ ಹಸಿರಿನಿಂದ ಕಂಗೊಳಿಸುತ್ತಿದ್ದು, 2 ವರ್ಷಗಳಿಂದ ಜಿಲ್ಲಾ ಮಟ್ಟದ ಪರಿಸರಮಿತ್ರ ಪ್ರಶಸ್ತಿ ಗಳಿಸುತ್ತಿದೆ. ಶಾಲೆ ಪರಿಸರದಲ್ಲಿ ಸ್ವಚ್ಛತೆ ಕಾಯ್ದುಕೊಂಡು ಎರಡು ವರ್ಷಗಳಿಂದ ಜಿಲ್ಲಾ ಮಟ್ಟದ ಪರಿಸರ ಮಿತ್ರಶಾಲೆ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ನೈಸರ್ಗಿಕ ವ್ಯವಸ್ಥೆ
ಊರಿನ ಗಣ್ಯರು, ದಾನಿಗಳು, ಸಾಮಾಜಿಕ ಸೇವಾಕರ್ತರ ಪ್ರಯತ್ನದಿಂದ ಖಾಸಗಿ ಕಂಪೆನಿಯ ಸೋಲಾರ್ ಸಿಸ್ಟಂ ಶಾಲೆಗೆ ದೊರೆತಿದೆ. ವಿದ್ಯುತ್ ಬಳಕೆಯಲ್ಲಿ ಉಳಿತಾಯವಾಗುತ್ತಿದೆ. ವಿದ್ಯುತ್ ನಿಲುಗಡೆಯ ಭಯವಿಲ್ಲ. ಬೇಕೆಂದಾಗ ಬಳಸಲು ಅನುಕೂಲವಿದೆ. ನೈಸರ್ಗಿಕ ವ್ಯವಸ್ಥೆಯನ್ನು ಬಳಸಿಕೊಳ್ಳಲು ಜನರಲ್ಲಿ ಜಾಗೃತಿ ಹುಟ್ಟಲು ಕಾರಣವಾಗಿದೆ.
– ನಾರಾಯಣ ಪೂಜಾರಿ ಎಸ್.ಕೆ.
ಮುಖ್ಯ ಶಿಕ್ಷಕರು,
ಸ.ಹಿ.ಪ್ರಾ. ಶಾಲೆ ಮಜಿ – ವೀರಕಂಭ ರಾಜಾ ಬಂಟ್ವಾಳ