Advertisement

ಅಂಡರ್‌ಪಾಸ್‌ಗಳಿಗೆ “ರೂಫ್ ಕವರ್‌ ಅಳವಡಿಕೆ’ ಯೋಜನೆ; ಬಿಬಿಎಂಪಿಯಿಂದ ರೂಪುರೇಷೆ ಸಿದ್ಧ

02:55 PM Jun 03, 2023 | Team Udayavani |

ಬೆಂಗಳೂರು: ಕೆ.ಆರ್‌.ವೃತ್ತದ ಅಂಡರ್‌ಪಾಸ್‌ ಬಳಿ ಹೈದರಾಬಾದ್‌ ಮೂಲದ ಇನ್ಫೋಸಿಸ್‌ ಉದ್ಯೋಗಿ ಭಾನುರೇಖಾ ಸಾವಿನ ಪ್ರಕರಣದ ನಂತರ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಹೀಗಾಗಿಯೇ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರಿನ ಕೆಲ ಅಂಡರ್‌ ಪಾಸ್‌ಗಳಿಗೆ ರೂಫ್ ಕವರ್‌ ಅಳವಡಿಕೆಗೆ ಯೋಜನೆ ರೂಪಿಸಿದೆ. ದಿಢೀರ್‌ ಮಳೆ ಸುರಿದಾಗ ನೀರು ತುಂಬಿ ಹೊಳೆಯಂತಾಗುವ ಅಂಡರ್‌ ಪಾಸ್‌ಗಳಲ್ಲಿ ಪ್ರಾರಂಭಿಕ ಹಂತದಲ್ಲಿ ರೂಫ್ ಕವರ್‌ ಹಾಕಲು ತೀರ್ಮಾನಿಸಿದೆ.

Advertisement

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ 50ಕ್ಕೂ ಅಧಿಕ ಅಂಡರ್‌ ಪಾಸ್‌ಗಳಿವೆ. ಬಹಳಷ್ಟು ಅಂಡರ್‌ ಪಾಸ್‌ಗಳು “ಎಲ್‌’ ಆಕಾರದಲ್ಲಿ ವಿನ್ಯಾಸ ಮಾಡಲಾಗಿದೆ. ಹೀಗಾಗಿಯೇ ಭಾರೀ ಮಳೆ ಬಂದಾಗ ಡ್ರೈನೇಜ್‌ ತುಂಬಿಕೊಂಡು ಮಳೆನೀರು
ಹೊರಗೆ ಹೋಗದಂತಹ ಪರಿಸ್ಥಿತಿ ಉಂಟಾಗುತ್ತದೆ.ಹೀಗಾಗಿ ಅಧಿಕ ಪ್ರಮಾಣದ ನೀರು ಅಂಡರ್‌ಪಾಸ್‌ ಒಳ ಪ್ರವೇಶಿಸುವುದನ್ನು ತಪ್ಪಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ. ಅಂಡರ್‌ಪಾಸ್‌ನಲ್ಲಿ ರೂಫ್ ಕವರ್‌ ಅಳವಡಿಕೆ
ಮಾಡುವ ಸಂಬಂಧ ಈಗಾಗಲೇ ರೂಪುರೇಷೆಗಳನ್ನು ಸಿದ್ಧಪಡಿಸಿದೆ. ರೂಫ್ ಕವರ್‌ ಅಳವಡಿಕೆ ಯಾವ ರೀತಿಯಲ್ಲಿ ಇರಬೇಕು ಎಂಬುವುದು ಸೇರಿದಂತೆ ಯೋಜನೆ ಕಾರ್ಯಗತ ಬಗ್ಗೆ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಚರ್ಚಿಸಲಾಗಿದೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜತೆಗೆ ಭಾರೀ ಮಳೆ ಬಿದ್ದಾಗ ಯಾವ ಯಾವ ಅಂಡರ್‌ಪಾಸ್‌ಗಳಲ್ಲಿ ಅಧಿಕ ನೀರು ತುಂಬಿಕೊಳ್ಳಲಿದೆ ಎಂಬ ಕುರಿತ ವರದಿಯನ್ನೂ ಸಿದ್ಧಪಡಿಸಲಾಗಿದೆ. ಅದರ ಆಧಾರದ ಮೇಲೆ ಅಂಡಾರ್‌ ಪಾಸ್‌ಗಳಿಗೆ ಮೊದಲ ಹಂತದ ರೂಫ್
ಕವರ್‌ ಅಳವಡಿಸಲಾಗುವುದು. ಜನರಿಗೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಲಾಗುವುದು ಎಂದು ಹೇಳಿದ್ದಾರೆ.

“ಎಲ್‌’ ಆಕಾರದಲ್ಲಿರುವ ಅಂಡರ್‌ಪಾಸ್‌ಗಳು: ಬೆಂಗಳೂರಿನಲ್ಲಿ ಇರುವ ಬಹುತೇಕ ಅಂಡರ್‌ ಪಾಸ್‌ಗಳ ವಿನ್ಯಾಸ ದೋಷಪೂರಿತವಾಗಿವೆ. ಇಳಿಜಾರು ರೀತಿಯ ಆಕೃತಿಯಿರುವ ಹಿನ್ನೆಲೆಯಲ್ಲಿ ಒಮ್ಮೆಲೆ ಮಳೆ ಬಿದ್ದರೆ ನೀರು ತುಂಬಿಕೊಳ್ಳುತ್ತವೆ. ಜತೆ ಅಂಡರ್‌ಪಾಸ್‌ನ ನೀರುಗಾಲುವೆಗಳು ಕೂಡ ಸರಿಯಾದ ರೀತಿಯಲ್ಲಿ ಇಲ್ಲ. ಹಾಗೆಯೇ ಅಂಡರ್‌ ಪಾಸ್‌ನ ಒಂದು ತುದಿಯಿಂದ ನೋಡಿದರೆ ಮತ್ತೂಂದು ಪ್ರಯಾಣಿಕರಿಗೆ ಗೋಚರಿಸಬೇಕು. ಆದರೆ ಸಿಲಿಕಾನ್‌ ಸಿಟಿಯ ಬಹುತೇಕ ಅಂಡರ್‌ ಪಾಸ್‌ಗಳು ಈ ರೀತಿಯಲ್ಲಿ ಇಲ್ಲ ಎಂಬುವುದು ರಸ್ತೆ ತಜ್ಞರ ಮಾತಾಗಿದೆ. ಜತೆಗೆ ಸಂಚಾರ ದಟ್ಟಣೆ ಹೊಂದಿರುವ ಮೇಕ್ರಿ ಸರ್ಕಲ್‌ . ನಾಯಂಡಹಳ್ಳಿ ಜಂಕ್ಷನ್‌, ಕುಂದಲಹಳ್ಳಿ ಗೇಟೆ ಅಂಡರ್‌ಪಾಸ್‌, ಎಚ್‌ಎಎಲ್‌ ಓಲ್ಡ್‌ ಏರ್‌ಪೋರ್ಟ್‌ ರಸ್ತೆಯ ಸುರಂಜನ್‌ ದಾಸ್‌ ಜಂಕ್ಷನ್‌ ಸಮೀಪದ ಅಂಡರ್‌
ಪಾಸ್‌  ಮತ್ತಿತರರ ಅಂಡರ್‌ ಪಾಸ್‌ಗಳು “ಎಲ್‌’ ಆಕಾರದಲ್ಲಿವೆ. ಆ ಹಿನ್ನೆಲೆಯಲ್ಲಿ ಅಧಿಕ ನೀರು ತುಂಬಿಕೊಂಡ ಪ್ರಯಾಣಕ್ಕೆ ಅಡ್ಡಿಯಾಗುತ್ತಿವೆ. ಅವುಗಳನ್ನು ಸರಿಪಡಿಸುವ ಕಾರ್ಯ ಕೂಡ ನಡೆಯಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

“ಯು’ ಆಕಾರ ರೂಫ್ ಕವರ್‌ ಅಳವಡಿಕೆ
ಕನ್ನಿಂಗ್‌ಹ್ಯಾಮ್‌ ರೋಡ್‌-ಸ್ಯಾಂಕಿ ರೋಡ್‌ ಜಂಕ್ಷನ್‌ ಬೆಸೆಯುವ ಹೋಟೆಲ್‌ ಲಿಮೆರಿಡಿಯನ್‌ ಬಳಿಯ ಅಂಡರ್‌ಪಾಸ್‌ ಮಳೆ ಬಂದರೆ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆ ಆಗಲಿದೆ. ಹೆಚ್ಚಿನ ಪ್ರಮಾಣದಲ್ಲಿ ಸುತ್ತಮುತ್ತಲಿನ ಪ್ರದೇಶ ನೀರು ಅಂಡರ್‌ ಪಾಸ್‌ ಸೇರುವುದರಿಂದ ಪ್ರಯಾಣಿಕರು ಸುಗಮವಾಗಿ ಸಂಚರಿಸಲು ಆಗುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂದಿವೆ. ಹೀಗಾಗಿ ಕನ್ನಿಂಗ್‌ಹ್ಯಾಮ್‌ ರೋಡ್‌-ಸ್ಯಾಂಕಿ ರೋಡ್‌ ಜಂಕ್ಷನ್‌ ಬೆಸೆಯುವ ಹೋಟೆಲ್‌ ಲಿಮೆರಿಡಿಯನ್‌ ಬಳಿಯ ಅಂಡರ್‌ಪಾಸ್‌ನಲ್ಲಿ “ಯು’ ಆಕಾರದಲ್ಲಿ ರೂಫ್ ಕವರ್‌ ಅಳವಡಿಕೆಗೆ ಯೋಜನೆ ರೂಪಿಸಲಾಗಿದೆ. ಜತೆಗೆ ಕಾವೇರಿ ಥಿಯೇಟರ್‌ ಅಂಡರ್‌ಪಾಸ್‌ನಲ್ಲಿ ಅಧಿಕ ಪ್ರಮಾಣದಲ್ಲಿ ನೀರು ನಿಲ್ಲಿದೆ ಎಂಬ ದೂರು ಕೇಳಿಬಂದಿದ್ದು ಅಲ್ಲಿ ಕೂಡ‚ ಶೀಘ್ರ ರೂಫ್ ಕವರ್‌ ಅಳವಡಿಸಲಾಗುವುದು ಎಂದು ಪಾಲಿಕೆಯ ಹಿರಿಯ ಎಂಜಿನಿಯರ್‌ ಮಾಹಿತಿ ನೀಡಿದ್ದಾರೆ. ರೂಫ್ ಕವರ್‌ ಅಳವಡಿಕೆಗೆ 12-13 ಲಕ್ಷ ರೂ.ವೆಚ್ಚವಾಗುವ ನಿರೀಕ್ಷೆಯಿದೆ. ಪ್ರಾರಂಭಿಕವಾಗಿ ಕನ್ನಿಂಗ್‌ಹ್ಯಾಮ್‌ ರೋಡ್‌-ಸ್ಯಾಂಕಿ
ರೋಡ್‌ ಜಂಕ್ಷನ್‌ ಅಂಡರ್‌ಪಾಸ್‌ ಮತ್ತು ಕಾವೇರಿ ಥಿಯೇಟರ್‌ ಅಂಡರ್‌ಪಾಸ್‌ಗಳಲ್ಲಿ ರೂಫ್ ಕವರ್‌ ಅಳವಡಿಕೆ ಮಾಡಿದ ನಂತರ ಮುಂದಿನ ಹೆಜ್ಜೆಯಿಸಲಾಗುವುದು ಎಂದಿದ್ದಾರೆ.

Advertisement

ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ರಾಜಧಾನಿಯ ಕೆಲವು ಅಂಡರ್‌ಪಾಸ್‌ಗಳಿಗೆ ಪಾಲಿಕೆಯಿಂದ ರೂಫ್ ಕವರ್‌ ಅಳವಡಿಸಲಾಗುವುದು. ಆರಂಭಿಕ ಹಂತವಾಗಿ ಕನ್ನಿಂಗ್‌ಹ್ಯಾಮ್‌ ರೋಡ್‌-ಸ್ಯಾಂಕಿ ರೋಡ್‌ ಜಂಕ್ಷನ್‌ ಬೆಸೆಯುವ ಅಂಡರ್‌ ಪಾಸ್‌ ಮತ್ತು ಕಾವೇರಿ ಥಿಯೇಟರ್‌ ಬಳಿಯ ಅಂಡರ್‌ಪಾಸ್‌ಗೆ ರೂಫ್ ಕವರ್‌ ಅಳವಡಿಸಲಾಗುವುದು.
-ಬಿ.ಎಸ್‌.ಪ್ರಹ್ಲಾದ್‌, ಮುಖ್ಯ ಎಂಜಿನಿಯರ್‌ ಬಿಬಿಎಂಪಿ

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next