ರಾಮನಗರ: ಪಟ್ಟಣಕ್ಕೆ ಸಮೀಪದ ರಾಮದೇವರ ಬೆಟ್ಟದಲ್ಲಿ ಭವ್ಯ ರಾಮ ಮಂದಿರ ನಿರ್ಮಿಸಲು ನಾವು ಸಿದ್ಧವಿದ್ದೇವೆ. ಅಯೋಧ್ಯೆಯಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪನೆಗಾಗಿ ಹಲವು ಶಿಲ್ಪಿಗಳ ಮೂಲಕ ಕೆತ್ತನೆ ಮಾಡಿಸಲಾಗಿದ್ದ ಮೂರ್ತಿಗಳಲ್ಲಿ ನಾಡಿನ ಶಿಲ್ಪಿ ಗಣೇಶ್ ಭಟ್ ಕೆತ್ತನೆ ರಾಮನ ಮೂರ್ತಿಯನ್ನು ರಾಮದೇವರ ಬೆಟ್ಟದಲ್ಲಿ ಪ್ರತಿಷ್ಠಾಪಿಸಲು ಚಿಂತನೆ ನಡೆಸಿದ್ದೇವೆ. ಈ ಸಂಬಂಧ ಶಿಲ್ಪಿ ಗಣೇಶ್‌ಭಟ್ ಅವರಿಗೂ ಮನವಿ ಮಾಡಿದ್ದೇನೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.
ಅಯೋಧ್ಯೆಯಲ್ಲಿ ಗಣೇಶ್‌ಭಟ್ ಕೆತ್ತನೆಯ ರಾಮನ ಮೂರ್ತಿ ಪ್ರತಿಷ್ಠಾಪನೆಯಾಗದ ಹಿನ್ನೆಲೆಯಲ್ಲಿ ಈ ಮೂರ್ತಿಯನ್ನು ಕರ್ನಾಟಕದಲ್ಲಿ ಯಾರಾದರೂ ತಂದು ಪ್ರತಿಷ್ಠಾಪಿಸಲಿ ಎಂಬ ಗಣೇಶ್‌ಭಟ್ ಅವರ ಆಶಯವನ್ನು “ಉದಯವಾಣಿ’ ಪ್ರಕಟಿಸಿತ್ತು.
ಈ ವರದಿ ಬೆನ್ನಲ್ಲೇ ರಾಮನಗರದಲ್ಲಿ ಪ್ರತಿಷ್ಠಾಪಿಸಲು ಶಾಸಕ ಇಕ್ಬಾಲ್ ಹುಸೇನ್ ಸಿದ್ಧವಿರುವ ಬಗ್ಗೆ ಸಹ ಪತ್ರಿಕೆ ವರದಿ ಮಾಡಿತ್ತು.
ಬುಧವಾರ ರಾಮದೇವರ ಬೆಟ್ಟದ ಅಭಿವೃದ್ಧಿ ಕಾರ್ಯದ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಭೇಟಿದ ನೀಡಿದ ವೇಳೆ ಮಾತನಾಡಿ, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಸುರೇಶ್ ಹಾಗೂ ಪ್ರವಾಸೋದ್ಯಮ ಸಚಿವರ ಜೊತೆ ಮಾತನಾಡಿದ್ದು, ಅವರು ಒಪ್ಪಿಗೆ ನೀಡಿದ್ದಾರೆ. ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಈ ಬಗ್ಗೆ ಸಾಕಷ್ಟು ಶ್ರಮ ಹಾಕಿದ್ದಾರೆಂದು ತಿಳಿಸಿದರು.