Advertisement

ಮಂಗಳೂರು ಸೆಂಟ್ರಲ್‌ಗೆ ಮಾರ್ಚ್‌ನಲ್ಲಿ ಹೆಚ್ಚುವರಿ ಟಿಕೆಟ್‌ ಮೆಷಿನ್‌ ಅಳವಡಿಕೆ

01:21 AM Feb 11, 2023 | Team Udayavani |

ಮಂಗಳೂರು: ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ಮೂರು ಹೆಚ್ಚುವರಿ ಸ್ವಯಂಚಾಲಿತ ಟಿಕೆಟ್‌ ವಿತರಣೆ ಯಂತ್ರ ಒದಗಿಸಲು ತೀರ್ಮಾನಿಸಲಾಗಿದೆ ಎಂದು ದಕ್ಷಿಣ ರೈಲ್ವೇ ವಿಭಾಗೀಯ ಪ್ರಬಂಧಕ ತ್ರಿಲೋಕ್‌ ಕೊಠಾರಿ ತಿಳಿಸಿದ್ದಾರೆ.

Advertisement

ಅವರು ದಕ್ಷಿಣ ರೈಲ್ವೇ ವಿಭಾಗೀಯ ರೈಲ್ವೇ ಬಳಕೆದಾರರ (ಪಾಲಕ್ಕಾಡ್‌ ವಿಭಾಗ) ಸಲಹಾ ಸಮಿತಿಯ ಸದಸ್ಯ ಜಿ. ಹನುಮಂತ ಕಾಮತ್‌ ಅವರ ಪ್ರಶ್ನೆಗೆ ಉತ್ತರಿಸಿದ್ದು, ಪ್ರಸ್ತುತ ಒಂದು ಟಿಕೆಟ್‌ ವಿತರಣೆ ಯಂತ್ರ ಮಾತ್ರ ಲಭ್ಯವಿದೆ, ಈ ವರ್ಷದ ಮಾರ್ಚ್‌ನಲ್ಲಿ ಹೆಚ್ಚುವರಿ ಯಂತ್ರಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ನಿಲ್ದಾಣದಲ್ಲಿ ಟಿಕೆಟ್‌ ಮೆಷಿನ್‌ ಕೊರತೆಯಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಉದಯವಾಣಿ ಈ ಹಿಂದೆಯೇ ಗಮನ ಸೆಳೆದಿತ್ತು.

ಮಂಗಳೂರು ಸೆಂಟ್ರಲ್‌ನಲ್ಲಿ ಇಲೆಕ್ಟ್ರಾನಿಕ್‌ ಕೋಚ್‌ ಡಿಸ್‌ಪ್ಲೇ ಇಂಡಿಕೇಟರ್‌ ಮತ್ತು ಇಲೆಕ್ಟ್ರಾನಿಕ್‌ ಪ್ಲಾಟ್‌ಫಾರಂ ಡಿಸ್‌ಪ್ಲೇ ಬೋರ್ಡ್‌ ಗಳನ್ನು ಹಾಕಬೇಕು ಎಂಬ ಒತ್ತಾಯಕ್ಕೆ ಉತ್ತರಿಸಿ, ಇದಕ್ಕಾಗಿ ಪ್ರತ್ಯೇಕ ಟೆಂಡರ್‌ ಕರೆಯಲಾಗಿದೆ. ಇದರಲ್ಲಿ 5 ಲೈನ್‌ ರೈಲು ಆಗಮನ/ನಿರ್ಗಮನ ಬೋರ್ಡ್‌ ಹಾಗೂ ಎಟ್‌ ಎ ಗ್ಲಾನ್ಸ್‌ ಡಿಸ್‌ಪ್ಲೇ ಬೋರ್ಡ್‌ಗಳು ಸೇರಿವೆ, ಇವುಗಳನ್ನು ಟಿಕೆಟ್‌ ಕೌಂಟರ್‌ ಪ್ರದೇಶದಲ್ಲಿ ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.

ನವಯುಗ/ಮಹಾಲಕ್ಷ್ಮೀ
ಎಕ್ಸ್‌ಪ್ರೆಸ್‌ ಪುನರಾರಂಭ?
ಮಂಗಳೂರು ಸೆಂಟ್ರಲ್‌ ಹಾಗೂ ವೈಷ್ಣೋದೇವಿ ಕಾಟ್ರಾ ಮಧ್ಯೆ ನವಯುಗ ಎಕ್ಸ್‌ಪ್ರೆಸ್‌ ರೈಲನ್ನು ಮತ್ತೆ ಆರಂಭಿಸುವ ಪ್ರಸ್ತಾವ ರೈಲ್ವೇ ಮಂಡಳಿಯಲ್ಲಿದ್ದು, ಶೀಘ್ರ ಅನು ಮೋದನೆ ಲಭಿಸುವ ನಿರೀಕ್ಷೆ ಇದೆ. ಮಂಗಳೂರು-ಮೀರಜ್‌ ಮಧ್ಯೆ ಮೀಟರ್‌ ಗೇಜ್‌ನಿಂದ ಬ್ರಾಡ್‌ಗೆಜ್‌ ಆಗುವಾಗ ಸ್ಥಗಿತಗೊಂಡಿದ್ದ ಬಹು ಬೇಡಿಕೆಯ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್‌ ಕೂಡ ಮಂಡಳಿಯ ಪರಿಶೀಲನೆ ಯಲ್ಲಿದೆ ಎಂದು ತಿಳಿಸಿದರು.

Advertisement

ನಂ.12133/34 ಸಿಎಸ್‌ಎಂಟಿ ಮುಂಬಯಿ -ಮಂಗಳೂರು ಜಂಕ್ಷನ್‌ ಸೂಪರ್‌ಫಾಸ್ಟ್‌ ಎಕ್ಸ್‌ ಪ್ರಸ್‌, 16575/76 ಯಶವಂತಪುರ -ಮಂಗಳೂರು ಜಂಕ್ಷನ್‌ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ ಹಾಗೂ ನಂ.07377/78 ವಿಜಯಪುರ -ಮಂಗಳೂರು ಜಂಕ್ಷನ್‌ ರೈಲುಗಳನ್ನು ಸೆಂಟ್ರಲ್‌ಗೆ ವಿಸ್ತರಣೆ ಮಾಡಬೇಕೆಂಬ ಬಹಳ ಹಳೆಯ ಬೇಡಿಕೆಯನ್ನು ಸೆಂಟ್ರಲ್‌ನಲ್ಲಿ ಹೆಚ್ಚುವರಿ ಪ್ಲಾಟ್‌ಫಾರಂ ಪೂರ್ಣವಾದ ಬಳಿಕ ಪರಿಶೀಲಿಸಲಾಗುವುದು ಎಂದು ತಿಳಿಸಲಾಗಿದೆ.

ಸಂಜೆ ಮಡಗಾಂವ್‌ ಕಡೆಗೆ ರೈಲುಗಳಿಲ್ಲದ ಕಾರಣ ನಂ.10108 ಮಂಗಳೂರು ಸೆಂಟ್ರಲ್‌ -ಮಡಗಾಂವ್‌ ಮೆಮು ರೈಲನ್ನು ಅಪರಾಹ್ನ 2.45ರ ಬದಲಿಗೆ 4.30ಕ್ಕೆ ಆರಂಭಿಸಬೇಕು ಎಂಬ ಒತ್ತಾಯಕ್ಕೆ ಪ್ರತಿಕ್ರಿಯಿಸಿ, ಇದನ್ನು ಮಂಗಳೂರು ಸೆಂಟ್ರಲ್‌ನಲ್ಲಿ ಹೆಚ್ಚುವರಿ ಪ್ಲಾಟ್‌ಫಾರಂ ನಿರ್ಮಾಣದ ಬಳಿಕ ಹಾಗೂ ಕೊಂಕಣದಲ್ಲಿ ಹೆಚ್ಚುವರಿ ಮಾರ್ಗ ಲಭ್ಯವಾದ ಬಳಿಕ ಪರಿಗಣಿಸಬಹುದು. ಅಲ್ಲದೆ ಇದಕ್ಕೆ ಅನುಕೂಲವಾಗುವಂತೆ ನಂ. 06488 ಸುಬ್ರಹ್ಮಣ್ಯ ರೋಡ್‌ -ಮಂಗಳೂರು ರೈಲನ್ನು ತಡವಾಗಿ ಬಿಡುವಂತೆ ನೈಋತ್ಯ ರೈಲ್ವೇಯನ್ನು ಕೋರಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಮಂಗಳೂರು ಸೆಂಟ್ರಲ್‌ ನಿಲ್ದಾಣಕ್ಕೆ ಎರಡು ಲಿಫ್ಟ್‌ ಗಳನ್ನು ಒದಗಿಸಲಾಗುವುದು, ಕಾಸರಗೋಡು, ಮಂಗಳೂರು ಜಂಕ್ಷನ್‌ ಸಹಿತ 30 ಸ್ಟೇಶನ್‌ಗಳಲ್ಲಿ ಅಮೃತ್‌ ಭಾರತ್‌ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದೂ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next