ಶಹಾಬಾದ: ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರುವ ಮಾಜಿ ಪ್ರಧಾನಿ ಜವಾಹರಲಾಲ ನೆಹರು ಪುತ್ಥಳಿ ಸದಾಕಾಲ ನೋಡುಗರ ಗಮನ ಸೆಳೆಯುತ್ತಲೇ ಇದ್ದು, ಇದನ್ನು ಸಮರ್ಪಕ ಜಾಗದಲ್ಲಿ ಪ್ರತಿಷ್ಠಾಪಿಸಬೇಕು ಎಂದು ಪ್ರಜ್ಞಾವಂತರು ಒತ್ತಾಯಿಸಿದ್ದಾರೆ.
ಈಗಿನ ಸಮುದಾಯ ಆರೋಗ್ಯ ಕೇಂದ್ರದ ಸ್ಥಳ ಮೊದಲು ಪುರಸಭೆಯ ಉದ್ಯಾನವನ ಆಗಿತ್ತು. ಆಗ ನೆಹರು ಪುತ್ಥಳಿಯನ್ನು ಸಾರ್ವಜನಿಕರ ಆಕರ್ಷಣೆಗಾಗಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಮುಂದೆ ಇದೇ ಉದ್ಯಾನವನ ನೆಹರು ಉದ್ಯಾನವನ (ನೆಹರು ಗಾರ್ಡನ್) ಆಗಿ ಪರಿವರ್ತನೆ ಆಗಿತ್ತು. ಆನಂತರ ಉದ್ಯಾನವನದ ಸ್ಥಳವನ್ನು ಆಸ್ಪತ್ರೆಯ ಕಟ್ಟಡದ ನಿರ್ಮಾಣಕ್ಕಾಗಿ ಆಗಿನ ಪುರಸಭೆಯವರು ಆರೋಗ್ಯ ಇಲಾಖೆಗೆ ಬಿಟ್ಟು ಕೊಟ್ಟಿದ್ದರು.
ಮೂರು ದಶಕಗಳ ಹಿಂದಿನ ನೆಹರು ಉದ್ಯಾನವನದಲ್ಲಿರುವ ಗಿಡ, ಮರ, ಕಾರಂಜಿ ಹಾಗೂ ಗ್ರಂಥಾಲಯವನ್ನು ತೆರವುಗೊಳಿಸಲಾಯಿತು. ಆದರೆ ನೆಹರು ಪುತ್ಥಳಿ ಮಾತ್ರ ಹಾಗೇ ಉಳಿಯಿತು. ಪುತ್ಥಳಿ ಕಟ್ಟಡದೊಳಗೆ ಬಂದರೂ ಅದನ್ನು ಸ್ಥಳಾಂತರಿಸುವ ಗೋಜಿಗೆ ಗುತ್ತಿಗೆದಾರ ಹಾಗೂ ಪುರಸಭೆ ಅಧಿಕಾರಿಗಳು ಹೋಗಲಿಲ್ಲ. ಕಟ್ಟಡ ಸಂಪೂರ್ಣ ನಿರ್ಮಾಣವಾದರೂ ನೆಹರು ಮೂರ್ತಿಯನ್ನಿಟ್ಟೇ ಉದ್ಘಾಟನೆ ಮಾಡಲಾಯಿತು. ಅಂದಿನಿಂದ ಇಂದಿನ ವರೆಗೆ ನೆಹರು ಮೂರ್ತಿ ಸಮುದಾಯ ಆರೋಗ್ಯ ಕೇಂದ್ರದಲ್ಲಿಯೇ ಇದೆ.
ನವೆಂಬರ್ 14 ನೆಹರು ಜನ್ಮದಿನ. ಆ ದಿನ ಮಾತ್ರ ಮಾಲಾರ್ಪಣೆ ಮಾಡಲು ಅವರ ನೆನಪಾಗುತ್ತದೆ. ಉಳಿದ ದಿನವೂ ಅವರನ್ನು ಸ್ಮರಿಸುವಂತೆ ಆಗಲು ಮೂರ್ತಿಯನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ, ಪ್ರತಿಷ್ಠಾಪಿಸಬೇಕು ಎಂದು ಕಾಂಗ್ರೆಸ್ ಮುಖಂಡರಾದ ನಾಗಣ್ಣ ರಾಂಪೂರೆ, ರಾಜೇಶ ಯನಗುಂಟಿಕರ್ ಆಗ್ರಹಿಸಿದ್ದಾರೆ.
ರಸ್ತೆ ಅಗಲೀಕರಣವಾಗಿ ಸುಮಾರು ಎಂಟು ವರ್ಷಗಳಾಗಿವೆ. ಅಂದು ವಿವಿಧ ವೃತ್ತಗಳಲ್ಲಿ ತೆರವು ಮಾಡಿದ ಗಾಂಧೀಜಿ, ಲಾಲಬಹದ್ದೂರ ಶಾಸ್ತ್ರೀ ಮೂರ್ತಿಗಳನ್ನು ಬಟ್ಟೆ ಕಟ್ಟಿ ನಗರಸಭೆಯ ಕೋಣೆಯೊಂದರಲ್ಲಿ ಇಡಲಾಗಿದೆ. ಈ ಎಲ್ಲ ಮೂರ್ತಿಗಳ ಜತೆಗೆ ನೆಹರು ಮೂರ್ತಿಯನ್ನು ಸೂಕ್ತ ಸ್ಥಳದಲ್ಲಿ ಪ್ರತಿಷ್ಠಾಪಿಸಬೇಕು.
-ಲೋಹಿತ್ ಕಟ್ಟಿ, ಸಾಮಾಜಿಕ ಚಿಂತಕ