ಭವಿನಾಬೆನ್ ಪಟೇಲ್ (34) ಈ ಬಾರಿ ಟೋಕ್ಯೋ ಪ್ಯಾರಾಲಿಂಪಿಕ್ಸ್‌ಗೆ ತೆರಳಿದ್ದಾಗ, ಆಕೆ ಪದಕದ ಸುತ್ತಿಗೇರಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಆಕೆ ಈಗ ಟಿಟಿಯಲ್ಲಿ ಫೈನಲ್ ಗೇರಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಕೇವಲ 12 ತಿಂಗಳಿದ್ದಾಗ ಪೋಲಿಯೊ ಬಂದು ಆಕೆಯ ಎರಡೂ ಕಾಲುಗಳು ನಿರ್ಬಲಗೊಂಡಿವೆ. ಗುಜರಾತ್‌ನ ಮೆಹ್ಸಾನ ಜಿಲ್ಲೆಯ ಸುಂಧಿಯ ಎಂಬ ಹಳ್ಳಿಯವರಾದ ಭವಿನಾ ಹಸ್ಮುಖ್‌ಭಾಯ್ ಪಟೇಲ್ ಎಂಬ ವ್ಯಕ್ತಿಯ ಮಗಳು.
ಹಳ್ಳಿಯವರಾದ ಆಕೆಗೆ ಟೇಬಲ್ ಟೆನಿಸ್ ಎಂಬ ಕ್ರೀಡೆಯಿದೆ, ಅದರಲ್ಲಿ ಅಂಗವಿಕಲರೂ ಭವಿಷ್ಯ ಕಂಡು ಕೊಳ್ಳಬಹುದು ಎಂಬ ಬಗ್ಗೆ ಗೊತ್ತೇ ಇರಲಿಲ್ಲ! ಅಂತಾಕೆ ಇದೀಗ ಲಕ್ಷಾಂತರ ಮಂದಿಯ ಸ್ಫೂರ್ತಿಯ ಸೆಲೆಯಾಗಿದ್ದಾರೆ. ತನ್ನೀ ಪ್ರಯಾಣದ ಬಗ್ಗೆ ಆಕೆಯಾಡಿರುವ ನುಡಿಗಳು ಹೀಗಿವೆ…
“ಮೊದಲು ನಾನು ಟಿಟಿ ಆಡಿದ್ದು ಕೇವಲ ಮನಃರಂಜನೆಗಾಗಿ ಮಾತ್ರ. ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕ್ಲಬ್ ಕೂಟದಲ್ಲಿ ಕಂಚು ಗೆದ್ದಾಗ ನಾನು ಅದನ್ನು ಗಂಭೀರವಾಗಿ ಪರಿಗಣಿಸಿದೆ. ಈ ಕ್ರೀಡೆಯಲ್ಲಿ ಏನಾದರೂ ಸಾಧಿಸಬಹುದೆಂಬ ಭರವಸೆ ಬಂತು. ಅದಾದ ಮೇಲೆ ಊಟ, ನಿದ್ರೆ ಹಿಂದೆ ಸರಿದು ಟಿಟಿಯ ಗುಂಗು ಹಿಡಿಯಿತು. ಇದಕ್ಕೆಲ್ಲಮುಖ್ಯ ಕಾರಣ ತಾನು 2005ರಲ್ಲಿ ಕಂಪ್ಯೂಟರ್ ಸೈನ್ಸ್ ಕಲಿಯಲು ಅಹ್ಮದಾಬಾದ್‌ಗೆ ತೆರಳಿದ್ದು. ಅಲ್ಲಿನ ಐಟಿಐ ಸಂಸ್ಥೆಯಲ್ಲಿ ಈ ಕ್ರೀಡೆಯ ಪರಿಚಯವಾಯಿತು.
ಇದನ್ನೂ ಓದಿ:ಭಾರತಕ್ಕೆ ಐತಿಹಾಸಿಕ ಗೆಲುವು : ಟೇಬಲ್ ಟೆನಿಸ್ ನಲ್ಲಿ ಬೆಳ್ಳಿ ಗೆದ್ದ ಭವೀನಾ
ಅಲ್ಲಿ ದೃಷ್ಟಿದೋಷ ಹೊಂದಿದ್ದ ಮಕ್ಕಳು ಟಿಟಿ ಆಡುವುದನ್ನು ನೋಡಿದೆ, ನನಗೂ ಸ್ಫೂರ್ತಿ ಬಂತು. 2008ರ ಅನ್ನುವ ಹೊತ್ತಿಗೆ ಟಿಟಿಯಲ್ಲಿ ನಿಜಕ್ಕೂ ಮುಳುಗಿದ್ದೆ. 2011ರಲ್ಲಿ ಬ್ಯಾಂಕಾಕ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಕೂಟದಲ್ಲಿ ಬೆಳ್ಳಿ ಪದಕ ಗೆದ್ದೆ. ಅಲ್ಲಿಂದ ಬದುಕೇ ಬದಲಾಯಿತು’. “ನಾನು ಅಂಗವಿಕಲೆ ಎಂದು ಕೊಳ್ಳುವುದಿಲ್ಲ. ನನ್ನಲ್ಲಿ ನಿರಂತರವಾಗಿ ಆತ್ಮ ವಿಶ್ವಾಸವಿದೆ. ಇಂದು ನಾನು, ನಾವು ಯಾರಿಗೂ ಕಡಿಮೆಯಿಲ್ಲ ಎಂದು ಸಾಬೀತು ಮಾಡಿದ್ದೇನೆ. ಪ್ಯಾರಾ ಟೇಬಲ್ ಟೆನಿಸ್ ಉಳಿದ ಕ್ರೀಡೆಗಳಷ್ಟೇ ಮುಂದುವರಿದಿದೆ’ ಎಂದು ಆತ್ಮವಿಶ್ವಾಸದಿಂದ ಭವಿನಾಬೆನ್ ಹೇಳಿಕೊಂಡಿದ್ದಾರೆ.