ಕಳೆದ ವರ್ಷ ನಟಿ ರಶ್ಮಿಕಾ ಮಂದಣ್ಣ “ವೃತ್ರ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದರು. ಚಿತ್ರದ ಫಸ್ಟ್‌ಲುಕ್ ಕೂಡ ಔಟ್ ಆಗಿದ್ದು, ಅದರಲ್ಲಿ ರಶ್ಮಿಕಾ ವಿಭಿನ್ನವಾಗಿ ಕಾಣುತ್ತಿದ್ದರು. ಅದಾದ ಕೆಲ ದಿನಗಳಲ್ಲೇ ಅದೇನಾಯಿತೋ ಏನೋ, ರಶ್ಮಿಕಾ ಮಂದಣ್ಣ ಚಿತ್ರದಿಂದ ಹೊರನಡೆದಿದ್ದರು.
ಅದಾದ ಬಳಿಕ “ವೃತ್ರ’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಜಾಗಕ್ಕೆ ತಮಿಳಿನಲ್ಲಿ ಮಣಿರತ್ನಂ ಚಿತ್ರದಲ್ಲಿ ಅಭಿನಯಿಸಿ ಪರಿಚಿತರಾಗಿದ್ದ ನಿತ್ಯಾಶ್ರೀ ಅವರನ್ನು ಕರೆತಂದ ಚಿತ್ರತಂಡ ಸದ್ದಿಲ್ಲದೆ ಚಿತ್ರೀಕರಣವನ್ನು ಪೂರ್ಣಗೊಳಿಸಿತ್ತು. ಇದೀಗ “ವೃತ್ರ’ ಚಿತ್ರದ ಪೋಸ್ಟ್ ಪ್ರೊಡಕ್ಷನ್‌ನ ಅಂತಿಮ ಹಂತದಲ್ಲಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಟೈಟಲ್ ಪೋಸ್ಟರ್‌ನ್ನು ಬಿಡುಗಡೆ ಮಾಡಿದೆ.
ಈ ಹಿಂದೆ ರಕ್ಷಿತ್ ಶೆಟ್ಟಿ ತಂಡದಲ್ಲಿ ಗುರುತಿಸಿಕೊಂಡಿದ್ದ ಗೌತಮ್ ಅಯ್ಯರ್ “ವೃತ್ರ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿ¨ªಾರೆ. ಅಂದಹಾಗೆ ಇದೊಂದು ಮಹಿಳಾ ಪ್ರಧಾನ, ಮರ್ಡರ್ ಮಿಸ್ಟರಿ ಚಿತ್ರವಾಗಿದೆ. ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರ ವೃತ್ತಿ ಜೀವನದಲ್ಲಿ ನಡೆದ ಕೆಲವು ಕಥೆಗಳು ಚಿತ್ರಕ್ಕೆ ಸ್ಪೂರ್ತಿಯಾಗಿದೆ ಎಂದಿದೆ ಚಿತ್ರತಂಡ.
“ವೃತ್ರ’ ಚಿತ್ರದಲ್ಲಿ ನಿತ್ಯಾಶ್ರೀ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಪಾತ್ರ ಮತ್ತು ಚಿತ್ರದ ಬಗ್ಗೆ ಮಾತನಾಡುವ ನಿತ್ಯಾಶ್ರೀ, “ನಾನು ಮೂಲತಃ ರಂಗಭೂಮಿ ಕಲಾವಿದೆ. ಸಹಾಯಕ ನಿರ್ದೇಶಕಿಯಾಗಿ, ನೃತ್ಯಗಾತಿಯಾಗಿ ರಂಗಭೂಮಿಯಲ್ಲಿ ಕೆಲಸ ಮಾಡಿದ್ದೇನೆ. ಆ್ಯಕ್ಟಿಂಗ್ ಎಂದರೆ ನನಗೆ ಬಹಳ ಇಷ್ಟ. ಏನಾದರೂ ಹೊಸದಾಗಿ ಮಾಡಬೇಕು ಎಂದುಕೊಳ್ಳುತ್ತಿದ್ದ ಸಮಯದಲ್ಲಿ ಈ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಇದೊಂದು ಸಸ್ಪೆನ್ಸ್ ಮರ್ಡರ್ ಮಿಸ್ಟರಿ ಚಿತ್ರ. ಇದರಲ್ಲಿ ಆ್ಯಕ್ಷನ್ ಇಲ್ಲ. ಆದರೆ ಮಾಮೂಲಿ ಚಿತ್ರಗಳಿಗಿಂತ ತೀರಾ ವಿಭಿನ್ನವಾಗಿದೆ. ಈ ಥರದ ಪಾತ್ರ ಮಾಡಲು ನನಗೆ ಕಿರಣ್ ಬೇಡಿ ಅವರೇ ಸ್ಫೂರ್ತಿ’ ಎನ್ನುತ್ತಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಗೌತಮ್, “ಆತ್ಮಹತ್ಯೆ ಎಂದು ಭಾವಿಸಿದ್ದ ಕೇಸನ್ನು ಮತ್ತೆ ಓಪನ್ ಮಾಡಿ ಇದು ಕೊಲೆ ಎಂದು ಸಾಬೀತು ಮಾಡಲಾಗುತ್ತದೆ. ಆ ಕ್ಷಣದಿಂದ ಏನೇನು ಬೆಳವಣಿಗೆಗಳು ಆಗುತ್ತದೆ ಅನ್ನೋದೆ ಚಿತ್ರದ ಎಳೆ. ನಿತ್ಯಾಶ್ರೀ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ’ ಎನ್ನುತ್ತಾರೆ.
ಚಿತ್ರದಲ್ಲಿ ನಿತ್ಯಾಶ್ರೀ ಅವರೊಂದಿಗೆ ಸುಧಾರಾಣಿ, ಪ್ರಕಾಶ್ ಬೆಳವಾಡಿ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಶಂಬುಲಿಂಗಯ್ಯ, ರಾಜವಂತ್ ಸಿಂಗ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮಾಮೂಲಿ ಕಮರ್ಷಿಯಲ್ ಚಿತ್ರಗಳಲ್ಲಿರುವಂತೆ ಈ ಚಿತ್ರದಲ್ಲಿ ಹಾಡಿಲ್ಲ. ಚಿತ್ರಕ್ಕೆ ವಸಂತ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಆದಿತ್ಯ ವೆಂಕಟೇಶ್ ಛಾಯಾಗ್ರಹಣ, ಅರುಣ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ ಮುಂದಿನ ಮಾರ್ಚ್ ಅಂತ್ಯದೊಳಗೆ ಚಿತ್ರವನ್ನು ತೆರೆಗೆ ತರಲು ಪ್ಲಾನ್ ಮಾಡಿಕೊಂಡಿದೆ.