ಸಿನಿಮಾವೊಂದರ ಹಾಡು, ಟ್ರೇಲರ್ ಹಿಟ್ ಆದರೆ, ಅದು ಆ ಸಿನಿಮಾದ ಮೊದಲ ಗೆಲುವು ಹಾಗೂ ಚಿತ್ರದ ಗುಣಮಟ್ಟದ ಸೂಚಕ ಎಂಬ ಮಾತು ಗಾಂಧಿನಗರದಲ್ಲಿದೆ. ಈಗ ತೆರೆಗೆ ಸಿದ್ಧವಾಗಿರುವ ಚಿತ್ರವೊಂದು ಈ ಎರಡೂ ವಿಚಾರಗಳಲ್ಲೂ “ಫಸ್ಟ್‌ಕ್ಲಾಸ್’ನಲ್ಲಿ ಪಾಸಾಗಿದೆ. ಹಾಗೆ ಪಾಸಾಗಿರುವ ಚಿತ್ರ “ಇನ್ಸ್‌ಪೆಕ್ಟರ್ ವಿಕ್ರಂ’.
ಪ್ರಜ್ವಲ್ ದೇವರಾಜ್ ನಟನೆಯ “ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರದ ಬಿಡುಗಡೆಯಾಗಿರುವ ಹಾಡು ಹಿಟ್ ಆಗಿರೋದು ನಿಮಗೆ ಗೊತ್ತೇ ಇದೆ. ಈಗ ಚಿತ್ರದ ಟ್ರೇಲರ್ ಕೂಡಾ ಹಿಟ್‌ಲಿಸ್ಟ್ ಸೇರಿದೆ. ಚಿತ್ರ ಫೆ.5ರಂದು ತೆರೆಕಾಣುತ್ತಿದೆ.
ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಟ್ರೇಲರ್ ಐದು ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದೆ. ಜೊತೆಗೆ ಮಾಸ್- ಕ್ಲಾಸ್ ಎರಡೂ ವರ್ಗದ ಜನ ಇಷ್ಟಪಟ್ಟಿದ್ದಾರೆ. ಟ್ರೇಲರ್ ನೋಡಿದವರಿಗೆ ಸಿನಿಮಾದ ಕಂಟೆಂಟ್ ಹಾಗೂ ಒಳಗಿರುವ ಅದ್ಧೂರಿತನದ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಸಿಗುವಂತಿದೆ.
ಚಿತ್ರದಲ್ಲಿ ರೆಗ್ಯುಲರ್ ಪ್ಯಾಟರ್ನ್ ಬಿಟ್ಟ ಆ್ಯಕ್ಷನ್, ಕಲರ್‌ಫುಲ್ ಸೆಟ್ ಇರೋದು ಟ್ರೇಲರ್‌ನಲ್ಲಿ ಎದ್ದು ಕಾಣುತ್ತಿದೆ. ಇನ್ನು ಟ್ರೇಲರ್‌ನಲ್ಲಿ ಕಾಣಿಸಿಕೊಂಡಿರುವ ರಘು ಮುಖರ್ಜಿಯವರ ಪಾತ್ರದ ಬಗ್ಗೆಯೂ ಕುತೂಹಲವಿದೆ.
ಈ ಟ್ರೇಲರ್‌ನ ಮತ್ತೂಂದು ವಿಶೇಷತೆ ಎಂದರೆ ಇಲ್ಲಿ ಯಾವುದೇ ಡೈಲಾಗ್ ಇಲ್ಲ. ಸಾಮಾನ್ಯವಾಗಿ ಟ್ರೇಲರ್‌ಗಳಲ್ಲಿ ಸಿನಿಮಾದ ಕೆಲವು ಹೈಲೈಟ್ ಡೈಲಾಗ್‌ಗಳನ್ನು ಹಾಕಲಾಗುತ್ತದೆ. ಆದರೆ, ಇಲ್ಲಿ ಹಿನ್ನೆಲೆ ಸಂಗೀತದ ಮೂಲಕವೇ ಇಡೀ ಟ್ರೇಲರ್ ಅನ್ನು ಕಟ್ಟಿಕೊಡಲಾಗಿದೆ. ಸಂಗೀತ ನಿರ್ದೇಶಕ ಅನೂಪ್ ಸೀಳೀನ್ ಅವರ ಹಿನ್ನೆಲೆ ಸಂಗೀತಕ್ಕೆ ಮೆಚ್ಚುಗೆ ಕೂಡಾ ವ್ಯಕ್ತವಾಗುತ್ತಿದೆ.
ಇದು ಪ್ರಜ್ವಲ್ ಅವರ 30ನೇ ಚಿತ್ರವಾಗಿದ್ದು, ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಭಾವನಾ ಈ ಚಿತ್ರದ ನಾಯಕಿ. ಚಿತ್ರದಲ್ಲಿ ದರ್ಶನ್ ಕೂಡಾ ನಟಿಸಿದ್ದಾರೆ. ಚಿತ್ರವನ್ನು ವಿಖ್ಯಾತ್ ನಿರ್ಮಿಸಿದ್ದು, ನರಸಿಂಹ ಈ ಚಿತ್ರದ ನಿರ್ದೇಶಕರು