ಕಾರವಾರ: ಕಾರವಾರ ನಗರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-66 ರ ಕಾರವಾರದಿಂದ ಬಿಣಗಾಕ್ಕೆ ಸಂಪರ್ಕಿಸುವ ಸುರಂಗ ಮಾರ್ಗ 1 ಮತ್ತು 2 ರಲ್ಲಿ ವಾಹನ, ಸಾರ್ವಜನಿಕ ಸಂಚಾರಕ್ಕೆ ಸುರಕ್ಷಿತವಾಗಿರುವ ಕುರಿತಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರವಿವಾರ ಜಿಲ್ಲಾಧಿಕಾರಿ, ಶಾಸಕರ ಸಮಕ್ಷಮದಲ್ಲಿ ಪರಿಶೀಲನೆ ನಡೆಸಿದರು.
ಪುಣೆಯ ಸಿಒಇಪಿ ಟೆಕ್ನಿಕಲ್ ಯೂನಿವರ್ಸಿಟಿಯ ಭೂಗರ್ಭ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಸ್.ಎ.ಮೆಶ್ರಾಂ ಹಾಗೂ ಅವರ ತಂಡ ಭಾನುವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಎನ್‌ಎಚ್‌ಎಐ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಜತೆ ಸಭೆ ನಡೆಸಿತು. ನಂತರ ಸುರಂಗ ಮಾರ್ಗದ ಹತ್ತಾರು ಸ್ಥಳಗಳಲ್ಲಿ ನೀರು ಸೋರುವಿಕೆ, ಕಲ್ಲು ಸಡಿಲಗೊಂಡಿರುವ ಭಾಗಗಳನ್ನ ಪರಿಶೀಲನೆ ನಡೆಸಿತು.
ಸ್ಥಳ ಪರಿಶೀಲನೆ ನಂತರ ಮಾತನಾಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಮೆಶ್ರಾಂ ಇಂದಿನ ಸ್ಥಳ ಭೇಟಿ ವೇಳೆ ತಾವು ಹಿಂದೆ ನೀಡಿದ ವರದಿ ಸರಿಯಾಗಿದೆ ಎಂದು ಹೇಳಿದ್ದಾರೆ. ಸೋರುವಿಕೆಯ ಹಾಗೂ ಇನ್ನೂ ಕೆಲವು ಸಮಸ್ಯೆಗಳನ್ನು ಅವರಿಗೆ ವಿವರಿಸಲಾಗಿದೆ. ಅವರು ಇ ಮೇಲ್ ಮೂಲಕ ಸ್ಥಳ ಪರಿಶೀಲನೆಯ ವರದಿ ಹಾಗೂ ಕೆಲವು ಸಲಹೆಗಳನ್ನು ನೀಡುವುದಾಗಿ ತಿಳಿಸಿದ್ದಾರೆ ಎಂದರು.
ಕಾರವಾರದಿಂದ ಭಟ್ಕಳವರೆಗೆ ಎನ್‌ಎಚ್‌ಎಐ ಖಾಸಗಿ ಕಂಪನಿ ಮೂಲಕ ಕೈಗೊಂಡ ಕಾಮಗಾರಿಯ ಬಗ್ಗೆ ಸಾಕಷ್ಟು ಆಕ್ಷೇಪಗಳು ಕೇಳಿಬರುತ್ತಿವೆ. ಈ ಬಗ್ಗೆ ಅಧಿಕಾರಿಗಳ ಜತೆ ಸ್ಥಳ ಪರಿಶೀಲನೆ ನಡೆಸಿ, ಅವುಗಳನ್ನು ಸರಿಪಡಿಸುವಂತೆ ಸೂಚನೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕ ಸತೀಶ ಸೈಲ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೊನ್ನಾವರ ಯೋಜನಾ ನಿರ್ದೇಶಕ ಎಚ್.ಹರಿಕೃಷ್ಣ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ದುರ್ಗಾದಾಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಆಶಾ ಮತ್ತಿತರರು ಇದ್ದರು.