ಮೈಸೂರು: ಮೂಲಸೌಕರ್ಯಗಳ ಸಮಸ್ಯೆ ಎದುರಿಸುತ್ತಿರುವ ಆಶ್ರಯ ಮನೆಗಳಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವ ಸಲುವಾಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬಾಕಿಯಿರುವ 10 ಕೋಟಿ ರೂ. ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸುವುದಾಗಿ ಶಾಸಕ ರಾಮದಾಸ್ ತಿಳಿಸಿದರು.
ನಗರದ ಕೆ.ಆರ್.ಕ್ಷೇತ್ರದ ವ್ಯಾಪ್ತಿಯ ಗೊರೂರಿಗೆ ಗುರುವಾರ ಭೇಟಿ ನೀಡಿದ ಶಾಸಕರು, ಅಲ್ಲಿನ ಆಶ್ರಯ ಮನೆಗಳ ಸ್ಥಿತಿಗತಿಗಳ ಪರಿಶೀಲನೆ ನಡೆಸಿ, ಅಲ್ಲಿನ ನಿವಾಸಿಗಳ ತೊಂದರೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಿದರು.
ಗೊರೂರಿನ ಬಹುತೇಕ ಆಶ್ರಯ ಮನೆಗಳಿಗೆ ನೀರಿನ ಸರಬರಾಜು ವ್ಯವಸ್ಥೆ, ವಿದ್ಯುತ್ ಸಂಪರ್ಕಕ್ಕಾಗಿ ಕಂಬಗಳನ್ನು ಅಳವಡಿಸಲು ಈ ಹಿಂದೆಯೇ ವ್ಯವಸ್ಥೆ ಮಾಡಲಾಗಿತ್ತು. ಈ ಭಾಗದಲ್ಲಿ ಅಂದಾಜು 8 ಸಾವಿರ ಮನೆಗಳನ್ನು ನಿರ್ಮಿಸಲಾಗಿದ್ದು, ಕೆಲವು ಕೆಲಸಗಳು ಅಪೂರ್ಣಗೊಂಡಿವೆ.
ಈ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜು, ಜಲಮಂಡಳಿ ಅಧಿಕಾರಿಗಳ ಸಭೆ ನಡೆಸಿ ಮೂಲಸೌಕರ್ಯಗಳನ್ನು ಕಲ್ಪಿಸಲು ಆಗುವ ಅಂದಾಜು ವೆಚ್ಚಗಳ ಕುರಿತು ಮಾಹಿತಿ ಪಡೆದು, ಶೀಘ್ರದಲ್ಲೇ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಹಿನ್ನೆಲೆಯಲ್ಲಿ ಶೀಘ್ರವೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಆಶ್ರಯ ಸಮಿತಿಯ ಸಭೆಯನ್ನು ಕರೆದು, ಬಾಕಿಯಿರುವ ಅಂದಾಜು 10 ಕೋಟಿ ರೂ. ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗುವುದು ಎಂದರು.